Advertisement

ಕಾಸರಗೋಡು ವಿಧಾನಸಭಾ ಕ್ಷೇತ್ರ ಮುಸ್ಲಿಂಲೀಗ್‌ನ ಭದ್ರಕೋಟೆ: ಈ ಬಾರಿ ತ್ರಿಕೋನ ಸ್ಪರ್ಧೆ

03:11 PM Apr 01, 2021 | Team Udayavani |

ಕಾಸರಗೋಡು: ಯುಡಿಎಫ್‌ನ ಭದ್ರ ಕೋಟೆಯಾಗಿರುವ ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ದಿನದಿನಕ್ಕೆ ತಾರಕಕ್ಕೇರುತ್ತಿರುವಂತೆ ಜಿದ್ದಾಜಿದ್ದಿನ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಈ ಕ್ಷೇತ್ರದಲ್ಲಿ ಐಕ್ಯರಂಗ ಅಭ್ಯರ್ಥಿ, ಪ್ರಸ್ತುತ ಶಾಸಕರಾಗಿರುವ ಮುಸ್ಲಿಂ ಲೀಗ್‌ನ ಎನ್‌.ಎ.ನೆಲ್ಲಿಕುನ್ನು, ಎನ್‌ಡಿಎ ಅಭ್ಯರ್ಥಿಯಾಗಿ ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್‌ ಮತ್ತು ಎಡರಂಗದ ಅಭ್ಯರ್ಥಿ ಐಎನ್‌ಎಲ್‌ನ ಎಂ.ಎ.ಲತೀಫ್‌ ಕಣದಲ್ಲಿದ್ದಾರೆ.

Advertisement

ಇದನ್ನೂ ಓದಿ:ಸ್ಯಾಮ್‌ ಸಂಗ್ ಗ್ಯಾಲಕ್ಸಿ  ‍F02, ಗ್ಯಾಲಕ್ಸಿ F12 ಬಿಡುಗಡೆಗೆ ಡೇಟ್ ಫಿಕ್ಸ್..!

ಬಿರುಸಿನ ಪ್ರಚಾರದಲ್ಲಿರುವ ಮೂರೂ ಅಭ್ಯರ್ಥಿಗಳು ಗೆಲುವಿನ ನಿರೀಕ್ಷೆಯನ್ನು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಕನ್ನಡ ಭಾಷಾ ಅಲ್ಪಸಂಖ್ಯಾತ ತಾಲೂಕುಗಳಲ್ಲಿ ಒಂದಾಗಿರುವ ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಮೂರೂ ಅಭ್ಯರ್ಥಿಗಳ ಮಧ್ಯೆ ಪ್ರಬಲ ಸ್ಪರ್ಧೆ ಕಂಡು ಬಂದಿದೆ. ಮುಸ್ಲಿಂಲೀಗ್‌ನ ಭದ್ರಕೋಟೆ ಎಂದೇ ಪರಿಗಣಿಸಲಾಗುತ್ತಿರುವ ಈ ಕ್ಷೇತ್ರದಲ್ಲಿ ಮೂರನೇ ಬಾರಿ ಅಭ್ಯರ್ಥಿಯಾಗಿ ಹಾಲಿ ಶಾಸಕ ಎನ್‌.ಎ.ನೆಲ್ಲಿಕುನ್ನು ಸ್ಪರ್ಧೆಗಿಳಿದಿದ್ದಾರೆ. ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಅಭಿವೃದ್ಧಿಯನ್ನು ಮುಂದಿಟ್ಟು ಮತ ಯಾಚಿಸುತ್ತಿದ್ದಾರೆ.

ಕೆ.ಶ್ರೀಕಾಂತ್‌

Advertisement

ಎನ್‌ಡಿಎ ಅಭ್ಯರ್ಥಿಯಾಗಿ ಕೆ.ಶ್ರೀಕಾಂತ್‌ ಕಣಕ್ಕಿಳಿದಿದ್ದಾರೆ. ಶ್ರೀಕಾಂತ್‌ ಕಾಸರಗೋಡು ಜಿಲ್ಲಾ ಪಂಚಾಯತ್‌ನ ಎಡನೀರು ಡಿವಿಜನ್‌ನ ಮಾಜಿ ಸದಸ್ಯರಾಗಿದ್ದು, ಸಂಘಟನಾ ಚತುರರಾಗಿದ್ದಾರೆ. ಅವರು ಉತ್ತಮ ವಾಗ್ಮಿ, ಕನ್ನಡ ಹೋರಾಟಗಾರ, ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುವ ನೇತಾರ, ಸಜ್ಜನ ರಾಜಕಾರಣಿಯಾಗಿದ್ದಾರೆ. ಎಲ್‌ಡಿಎಫ್‌ನ ಅಂಗ ಪಕ್ಷವಾದ ಐಎನ್‌ಎಲ್‌ ಅಭ್ಯರ್ಥಿಯಾಗಿ ಎಂ.ಎ.ಲತೀಫ್‌ ಸ್ಪರ್ಧಾ ಕಣದಲ್ಲಿದ್ದು, ಬಿಜೆಪಿ ಹಾಗು ಮುಸ್ಲಿಂಲೀಗ್‌ಗೆ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ.

2016ರ ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಶಾಸಕರಾದ ಎನ್‌.ಎ.ನೆಲ್ಲಿಕುನ್ನು ಮುಸ್ಲಿಂಲೀಗ್‌ನಿಂದ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ಅವರ ವಿರುದ್ಧ 8607 ಮತಗಳಿಂದ ಗೆಲುವು ಸಾಧಿಸಿದ್ದರು. ಎನ್‌.ಎ.ನೆಲ್ಲಿಕುನ್ನು 64,727, ರವೀಶ ತಂತ್ರಿ ಕುಂಟಾರು 56,120 ಮತಗಳನ್ನು ಪಡೆದಿದ್ದರು.

ಐಎನ್‌ಎಲ್‌ನ ಡಾ.ಎ.ಎ.ಅಮೀನ್‌ ಅವರಿಗೆ 21,615 ಮತಗಳು ದೊರೆತ್ತಿದ್ದವು. 2011ರಲ್ಲಿ ಮೊದಲ ಬಾರಿಗೆ ಮುಸ್ಲಿಂಲೀಗ್‌ನಿಂದ ಸ್ಪರ್ಧಿಸಿದ್ದ ಎನ್‌.ಎ.ನೆಲ್ಲಿಕುನ್ನು ಅವರು ಬಿಜೆಪಿ ಅಭ್ಯರ್ಥಿ ಜಯಲಕ್ಷ್ಮೀ ಎನ್‌. ಭಟ್‌ ಅವರ ವಿರುದ್ಧ 9738 ಮತಗಳಿಂದ ಗೆಲುವು ಸಾಧಿಸಿದ್ದರು.

1980ರಿಂದ 2011ರ ತನಕ ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಂಲೀಗ್‌ನಿಂದ ಮಾಜಿ ಸಚಿವ ಸಿ.ಟಿ.ಅಹಮ್ಮದಾಲಿ ಅವರು ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಕಾಸರಗೋಡು ವಿಧಾನಸಭಾ ಕ್ಷೇತ್ರವು ಮೊಗ್ರಾಲ್‌ ಪುತ್ತೂರು, ಬದಿಯಡ್ಕ, ಕುಂಬಾಜೆ, ಬೆಳ್ಳೂರು, ಚೆಂಗಳ, ಕಾರಡ್ಕ, ಮಧೂರು ಗ್ರಾಮ ಪಂಚಾಯತ್‌ ಹಾಗೂ ಕಾಸರಗೋಡು ನಗರಸಭೆಯನ್ನು ಒಳಗೊಂಡಿದೆ. ಈ ಕ್ಷೇತ್ರದಲ್ಲಿ 190 ಬೂತ್‌ಗಳಿವೆ.

2006ರ ವಿಧಾನಸಭಾ ಚುನಾವಣೆಯಲ್ಲಿ 148 ಬೂತ್‌ಗಳಲ್ಲಿ 1,00,776 ಜನರು (ಶೇ.65.07) ಮತ ಚಲಾಯಿಸಿದ್ದರು. 2011ರ ವಿಧಾನಸಭಾ ಚುನಾವಣೆಯಲ್ಲಿ ಕಾಸರಗೋಡು ಮಂಡಲದಲ್ಲಿ 140 ಬೂತ್‌ಗಳಿದ್ದವು. 80,224 ಪುರುಷರು ಮತ್ತು 79,027 ಮಹಿಳೆಯರು ಸೇರಿದಂತೆ ಒಟ್ಟು 1,59,251 ಮಂದಿ ಮತದಾರರ ಪೈಕಿ 1,16,857 ಜನರು (ಶೇ.73.38) ಮತ ಚಲಾಯಿಸಿದ್ದರು.

2016ರ ವಿಧಾನಸಭಾ ಚುನಾವಣೆಯಲ್ಲಿ ಕಾಸರಗೋಡು ಕ್ಷೇತ್ರದಲ್ಲಿ ಶೇ.76.38ರಷ್ಟು ಮತದಾನವಾಗಿತ್ತು. ಈ ಮಂಡಲದಲ್ಲಿ 2016ರಲ್ಲಿ 94,214 ಮಂದಿ ಪುರುಷರು ಹಾಗೂ 94,634 ಮಂದಿ ಮಹಿಳೆಯರು ಒಳಗೊಂಡಂತೆ 1,88,848 ಮಂದಿ ಮತದಾರರ ಪೈಕಿ 70,703 ಪುರುಷರು ಮತ್ತು 73,531 ಮಹಿಳೆಯರು ಸೇರಿದಂತೆ ಒಟ್ಟು 1,44,234 ಮಂದಿ ತಮ್ಮ ಮತದಾನದ ಹಕ್ಕು ಚಲಾಯಿಸಿದ್ದರು. ಈ ಬಾರಿ ಮೂರು ಪಕ್ಷಗಳ ಅಭ್ಯರ್ಥಿಗಳು ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರಚಾರ ಕಾರ್ಯದಲ್ಲಿ ಎನ್‌ಡಿಎ ಅಭ್ಯರ್ಥಿ ಕೆ.ಶ್ರೀಕಾಂತ್‌, ಐಕ್ಯರಂಗ ಅಭ್ಯರ್ಥಿ ಎನ್‌.ಎ.ನೆಲ್ಲಿಕುನ್ನು ಬಹಳಷ್ಟು ಮುನ್ನಡೆಯಲ್ಲಿದ್ದಾರೆ.

ಅಭಿವೃದ್ಧಿ ಕಾಣದ ಕಾಸರಗೋಡು : ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಗಮನಾರ್ಹ ಎನ್ನುವಂತ ಯಾವುದೇ ಅಭಿವೃದ್ಧಿ ಈವರೆಗೂ ಸಾಧ್ಯವಾಗಿಲ್ಲ. ಕಾಸರಗೋಡು ಕ್ಷೇತ್ರದಲ್ಲಿ ಆರೋಗ್ಯ, ಶಿಕ್ಷಣ, ಉದ್ಯೋಗ, ಮೀನುಗಾರಿಕೆ, ಕೃಷಿ, ಕೈಗಾರಿಕೆ ಮುಂತಾದ ಎಲ್ಲ ವಲಯಗಳು ಹಿನ್ನಡೆ ಅನುಭವಿಸುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಇದೇ ಪ್ರಮುಖ ಪ್ರಚಾರ ವಿಷಯವಾಗಿದೆ. ಈ ಮೂವರಲ್ಲಿ ಯಾರು ಹಿತವರು ಎಂಬುದು ಎ.6 ರಂದು ನಿರ್ಣಯವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next