ಕರಾವಳಿಯಲ್ಲಿ “ವೂ… ವೂ’ ಸದ್ದು ಕೇಳಿತು ಎಂದಾದರೆ, ಆ ಕಾರ್ ರೇಸ್ ಸ್ಪರ್ಧೆಯಲ್ಲಿ ನಿಲೋಫರ್ ಇಬ್ರಾಹಿಂ ಇರುತ್ತಾರಂತಲೇ ಲೆಕ್ಕ. ಕಡಲ ತೀರದ ಮಂದಿ ಹಾಗೆ ಆಸಕ್ತರಾಗಲು ಕಾರಣ, ಇವರು ಬ್ಯಾರಿ ಸಮುದಾಯದ ಏಕೈಕ ಕಾರ್ ರೇಸಿನ ಸ್ಪರ್ಧಾಳು ಅಂತ. ಕಳೆದ 22 ವರ್ಷಗಳಿಂದ ಸ್ಟಿಯರಿಂಗ್ ತಿರುಗಿಸುತ್ತಿರುವ ನಿಲೋಫರ್ ತಮ್ಮ ಸಾಹಸಕ್ಕೆ ಬ್ರೇಕ್ ಹಾಕಿ, ಸುಮ್ಮನೆ ಕೂತವರಲ್ಲ.
ನಿಲೋಫರ್ ಅವರಿಗೆ ಯಾರೂ ಕಾರ್ ರೇಸ್ ಹೇಳಿಕೊಡಲಿಲ್ಲ. ಅವರ ಅರಿವೇ ಅವರಿಗೆ ಗುರು. ದೂರದರ್ಶನದಲ್ಲಿ ಬರುತ್ತಿದ್ದ ಸ್ಪರ್ಧೆಗಳನ್ನು ರೋಮಾಂಚಿತರಾಗಿ ನೋಡುತ್ತಿದ್ದರಂತೆ. ತಾನೂ ಸ್ಟಿಯರಿಂಗ್ ಹಿಡಿದು, ಅವರನ್ನೆಲ್ಲ ಓವರ್‌ಟೇಕ್ ಮಾಡಬೇಕೆಂಬ ಬಯಕೆ ಅವರಿಗೆ ಆಗಲೇ ಮೂಡಿತಂತೆ. ಆದರೆ, ಒಬ್ಬಳು ಮಹಿಳೆಗೆ ತರಬೇತಿ ನೀಡಿ ಪ್ರೋತ್ಸಾಹಿಸುವ ವ್ಯವಸ್ಥೆಯೇ ಇರಲಿಲ್ಲವೆಂಬ ದುಃಖ ಅವರನ್ನು ಕಾಡುತ್ತಿತ್ತಂತೆ.
ಕೊನೆಗೂ ಅದೊಂದು ದಿನ ಬಂತು. ಅದು ಮೂಡಬಿದರೆಯಲ್ಲಿ ನಡೆದ 250 ಕಿ.ಮೀ. ದೂರದ ಕ್ರಾಸ್ ಕಂಟ್ರಿ ರೇಸ್. 40 ಸ್ಪರ್ಧಿಗಳು. ಹಳ್ಳಿಗಳ ಹಾಳಾದ ರಸ್ತೆ, ಕೆಸರು ತುಂಬಿದ ಹೊಲಗಳ ಹಾದಿಯಲ್ಲಿ ಈ ಹೆಣ್ಮಗಳು ಸಿಂಹಿಣಿಯಂತೆ ಕಾರಿನಲ್ಲಿ ಕುಳಿತು ಬರುತ್ತಿದ್ದರು. ಸಡಿಲವಾದ ಧೂಳು ತುಂಬಿದ, ಏರು ತಗ್ಗುಗಳ ಭಯಾನಕ ಮಾರ್ಗ. ನಿಧಾನಕ್ಕೆ ಚಲಿಸಿದರೆ, ಹಿಂದಿನಿಂದ ಕಾರು ಚುಂಬಿಸುವ ಭೀತಿ. ಅಲ್ಲೊಂದು ಹಳ್ಳವಿತ್ತು. ಕೊಟ್ಟಿರುವ ಸೂಚನಾ ಪತ್ರದಲ್ಲಿ ಹಳ್ಳದ ಪ್ರಸ್ತಾವವೇ ಇದ್ದಿರಲಿಲ್ಲ. ಚಕ್ರವು ಹಳ್ಳಕ್ಕೆ ಇಳಿದರೆ, ಕೆಸರಿನಲ್ಲಿ ಹೂತು ಹೋಗುವ ಭಯ. “ಆ ಸವಾಲುಗಳನ್ನು ಎದುರಿಸುವಾಗ ಎದೆ ಬಡಿತದ ನನ್ನ ಕಿವಿಗೆ ಅಪ್ಪಳಿಸುತ್ತಿತ್ತು. ಅಚ್ಚರಿಯೆಂದರೆ, ಅಂದು ನಾನು ದ್ವಿತೀಯ ಸ್ಥಾನವನ್ನು ಗೆದ್ದೆ. ಅವತ್ತೇ ಗೊತ್ತಾಗಿ ಹೋಯ್ತು, ಗೆಲುವಿಗೆ ಬೇಕಾಗಿರೋದು ಕೌಶಲವಲ್ಲ, ಧೈರ್ಯ’ ಎಂದು ನಿಲೋಫರ್ ಹೆಮ್ಮೆ ಪಡುತ್ತಾರೆ.
ಬೆಂಗಳೂರು- ನಂದಿ ರ್ಯಾಲಿ ಮತ್ತು ಸೌತ್‌ಲೇಕ್ ಕನಕಪುರ ರ್ಯಾಲಿಗಳಲ್ಲಿ ಗೆಲುವಿನ ನಗು ಬೀರಿದ ಇವರು, ಇದೀಗ ಬೆಂಗಳೂರು- ಭೂತಾನ್ ನಡೆಯುವ 3 ಸಾವಿರ ಕಿ.ಮೀ.ನ ದುರ್ಗಮ ಹಾದಿಯ ಸಾಹಸಕ್ಕೆ ಸಜ್ಜಾಗುತ್ತಿದ್ದಾರೆ.
ಕಜಕಿಸ್ತಾನ, ಸೌದಿ ಅರೇಬಿಯಾದಲ್ಲಿ ಗಣಿತ ಬೋಧಕಿ ಆಗಿದ್ದ ನಿಲೋಫರ್ ಅವರು, ಸೊಗಸಾಗಿ ಕಲಾಕೃತಿಗಳನ್ನೂ ರಚಿಸುತ್ತಾರೆ. ಪತಿ ಕಾಝಿವ್ ನಝೀರ್ ಕಜಕಿಸ್ತಾನದಲ್ಲಿ ಫೈನಾನ್ಷಿಯಲ್ ಕಂಟ್ರೋಲರ್ ಆಗಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಬೆಂಗಳೂರಿನ ಕಾಕ್ಸ್‌ಟೌನ್ ನಿವಾಸಿಯಾಗಿರುವ ನಿಲೋಫರ್ ದಂಪತಿಗೆ ತಯ್ಯಿಬಾ ಮತ್ತು ಸಬೀಹಾ ಎಂಬ ಪುತ್ರಿಯರಿದ್ದಾರೆ.
– ಪ. ರಾಮಕೃಷ್ಣ ಶಾಸ್ತ್ರೀ