ಅಲಿಗಢ : ಗೋ ಹತ್ಯೆಯನ್ನು ನಿಷೇಧಿಸುವ ಮತ್ತು ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವ ಕೇಂದ್ರದ ಕ್ರಮಕ್ಕೆ ಇಲ್ಲಿನ ಮುಸ್ಲಿಂ ಬುದ್ಧಿ ಜೀವಿಗಳ ಸಂಘಟನೆಯಾಗಿರುವ “ಮುಸ್ಲಿಂ ಸ್ಟಡೀಸ್ ಆ್ಯಂಡ್ ಎನಾಲಿಸಿಸ್ (ಎಫ್ಎಂಎಸ್‌ಎ)’ ತನ್ನ ಪೂರ್ಣ ಬೆಂಬಲವನ್ನು ಘೋಷಿಸಿದೆ.
“ಗೋ ರಕ್ಷಕರ ಹೆಸರಲ್ಲಿ ದೇಶದ ವಿವಿಧ ಭಾಗಗಳಲ್ಲಿ ಅಮಾಯಕರನ್ನು ಚಚ್ಚಿ ಕೊಲ್ಲಲಾದ ಘಟನೆಗಳನ್ನು ತೀವ್ರವಾಗಿ ಖಂಡಿಸಿ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆಯನ್ನು ಸ್ವಾಗತಿಸಿ ನಮ್ಮ ಸಂಘಟನೆ ಠರಾವು ಪಾಸು ಮಾಡಿದೆ’ ಎಂದು ಎಂಎಂಎಸ್‌ಎ ನಿರ್ದೇಶಕರಾಗಿರುವ ಜಾಸಿಂ ಮೊಹಮ್ಮದ್ ಹೇಳಿದ್ದಾರೆ.
“ಗೋರಕ್ಷಣೆಯ ಹೆಸರಲ್ಲಿ ಅಮಾಯಕರನ್ನು ಹಿಡಿದು ಚಚ್ಚಿ ಕೊಲ್ಲುವ ಘಟನೆಗಳು ದೇಶದ ವಿವಿಧ ಭಾಗಗಳಲ್ಲಿ ಪದೇ ಪದೇ ನಡೆಯುತ್ತಿದ್ದು ಇದು ದೇಶದ ಪ್ರಜೆಗಳ ಸಂವಿಧಾನದತ್ತ ಮೂಲಭೂತ ಹಕ್ಕಾಗಿರುವ ಬದುಕುವ ಮತ್ತು ಬದುಕಿಗಾಗಿ ಹಣ ಸಂಪಾದಿಸುವ ಜನರ ಹಕ್ಕಿಗೆ ಒದಗಿರುವ ಗಂಭೀರ ಬೆದರಿಕೆಯಾಗಿದೆ’ ಎಂದು ಜಾಸಿಂ ಹೇಳಿದರು.
“ದೇಶದ ಬಹುಸಂಖ್ಯಾಕರ ಧಾರ್ಮಿಕ ಭಾವನೆಗಳನ್ನು ಗೌರವಿಸಲು ದೇಶದ ಪ್ರತಿಯೋರ್ವ ಮುಸ್ಲಿಂ ಪ್ರಜೆ ಬಯಸುತ್ತಾನೆ. ಆದರೆ ಗೋ ಯೇತರ ಪಶು ಮಾಂಸ ಉದ್ಯಮದಲ್ಲಿ ತೊಡಗಿರುವ ಮುಸ್ಲಿಮರನ್ನು ವಿನಾಕಾರಣ ಹಿಡಿದು ಚಚ್ಚಿ ಕೊಲ್ಲುವ ಪ್ರವೃತ್ತಿ ದೇಶದ ಆಂತರಿಕ ಭದ್ರತೆಗೆ ಗಂಭೀರ ಅಪಾಯವನ್ನು ಒಡ್ಡುವಂತಿದೆ’ ಎಂದು ಜಾಸಿಂ ಹೇಳಿದರು.
ಅಮಾಯಕರನ್ನು ಚಚ್ಚಿ ಸಾಯಿಸುವ ಪ್ರಕರಣಗಳನ್ನು ನಿಲ್ಲಿಸುವ ದಿಶೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಿಡಲು ಪ್ರಧಾನಿಯವರು ಎಲ್ಲ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ ಎಂದು ಜಾಸಿಂ ನುಡಿದರು.