ಕೊಳ್ಳೇಗಾಲ: ಗೌರಿ ಗಣೇಶ ಹಬ್ಬದ ಪ್ರಯುಕ್ತ ಅಂಜುಮಾನ್ ಎ ಇಸ್ಲಾಮಿಯ ಸಂಸ್ಥೆಯ ಮುಸ್ಲಿಂ ಸಮುದಾಯದ ಮುಖಂಡರು ಇಲ್ಲಿನ ಮಕ್ಕಳ ಮಹದೇಶ್ವರ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ, ಬಳಿಕ ಹಿಂದುಗಳಿಗೆ ಪರಸ್ಪರ ಶುಭಕೋರಿ ಗುರುವಾರ ಭಾವೈಕ್ಯತೆ ಮೆರೆದರು. ಕಳೆದ ರಂಜಾನ್ ಹಬ್ಬದ ದಿನದಂದು ಅಖೀಲ ಭಾರತ ಸರ್ವಧರ್ಮ ಸಮನ್ವಯ ಸಮಿತಿ ಅಧ್ಯಕ್ಷ ಕೆ.ಬಾಲಚಂದರ್ ನೇತೃತ್ವದಲ್ಲಿ ವಿವಿಧ ಜನಾಂಗದ ಮುಖಂಡರು ಇಲ್ಲಿನ ಡಾ||ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸೇರಿ ಈದ್ಗಾ ಮೊಹಲ್ಲಾದಲ್ಲಿ ನಮಾಜ್ ಮುಗಿಸಿ ಮಸೀದಿಗೆ ಆಗಮಿಸಿದ ಮುಸ್ಲಿಂರನ್ನು ಪರಸ್ಪರ ಶುಭಕೋರಿದ್ದ ಹಿನ್ನಲೆಯಲ್ಲಿ ಗೌರಿ ಗಣೇಶ ಹಬ್ಬಕ್ಕೆ ಮುಸ್ಲಿಂಮರು ಹಿಂದು ದೇವಾಲಯಕ್ಕೆ ಆಗಮಿಸಿ ಪೂಜೆಯ ಬಳಿಕ ಎಲ್ಲಾ ಹಿಂದು ಮುಖಂಡರಿಗೆ ಶುಭ ಕೋರಿದರು. ಜಿಲ್ಲಾ ಕೇಂದ್ರದಲ್ಲೂ ಭಾವೈಕ್ಯತ ಕಾರ್ಯ: ಇದೇ ಸಂದರ್ಭದಲ್ಲಿ ಅಖೀಲ ಭಾರತ ಸರ್ವಧರ್ಮ ಸಮನ್ವಯ ಸಮಿತಿ ಅಧ್ಯಕ್ಷ ಕೆ.ಬಾಲಚಂದರ್ ಮಾತನಾಡಿ, ಸಂಘದ ವತಿಯಿಂದ ಸತತವಾಗಿ ಎಂಟು ವರ್ಷಗಳಿಂದ ಪರಸ್ಪರ ಭಾವೈಕ್ಯತಾ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಿದ್ದು, ಹಿಂದು ಮತ್ತು ಮುಸ್ಲಿಮರಲ್ಲಿ ಏಕತೆ ಮೂಡಿಸುವ ಸಲುವಾಗಿ ಆಚರಣೆ ಮಾಡುತ್ತಿದ್ದು, ಇಂತಹ ಶಾಂತಿಯುತ ಕಾರ್ಯಕ್ರಮಗಳು ಎಲ್ಲೆಡೆ ಜರಗಬೇಕೆಂದು ಅಭಿಪ್ರಾಯಪಟ್ಟರು. ಜಿಲ್ಲಾ ಕೆಂದ್ರದಲ್ಲಿ ಇದೇ ರೀತಿಯ ಭಾವೈಕ್ಯತಾ ಕಾರ್ಯಕ್ರಮವನ್ನು ಆಯೋಜನೆ ಮಾಡಿ ಜಿಲ್ಲಾ ಕೇಂದ್ರದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಸಂಘ ನಿರ್ಣಯಕೈಗೊಂಡಿದ್ದು, ಕೂಡಲೇ ಜಿಲ್ಲಾ ಕೇಂದ್ರದಲ್ಲಿ ಭಾವೈಕ್ಯತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದೆಂದು ದೇವಸ್ಥಾನಕ್ಕೆ ಬಂದಿದ್ದ ಮುಸ್ಲಿಮರಿಗೆ ಗಣೇಶನಿಗೆ ಪ್ರಿಯವಾದ ಕಡುಬು ಮತ್ತು ಸಿಹಿ ಹಂಚಿದರು. ಮಾಲಾರ್ಪಣೆ ಮಾಡಿ ಶುಭಾಶಯ: ಅಂಜುಮಾನ್ ಎ ಇಸ್ಲಾಮಿಯ ಸಂಸ್ಥೆಯ ಮುಖಂಡ ಮಹಮ್ಮದ್ ನಾಸೀರ್ ಉದ್ದೀನ್ ಮಾತನಾಡಿ, ಹಿಂದು, ಮುಸ್ಲಿಂ, ಕ್ರೆ„ಸ್ತ ಎಲ್ಲಾ ಸಮುದಾಯದವರು ಭಾರತೀಯರಾಗಿದ್ದು, ಈ ರೀತಿಯ ಭಾವೈಕ್ಯತೆಯ ಕಾರ್ಯಕ್ರಮದಿಂದ ಉತ್ತಮ ಬಾಂಧವ್ಯ ಮತ್ತು ಶಾಂತಿ ನೆಲೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಎಲ್ಲಾ ಕೋಮಿನ ವರ್ಗದವರು ಒಂದೆಡೆ ಸೇರಿ ಹಬ್ಬದ ಭಾವೈಕ್ಯತೆಯನ್ನು ಪರಸ್ಪರ ವಿನಿಯಮ ಮಾಡಿಕೊಂಡಿರುವುದು ಮಾದರಿ ಕಾರ್ಯ ಎಂದು ಹೇಳಿದ ಅವರು, ಹಿಂದೂ ಸಮುದಾಯದ ಮುಖಂಡರಿಗೆ ಮಾಲಾರ್ಪಣೆ ಮಾಡಿ ಸಿಹಿ ಹಂಚಿ ಗೌರಿ-ಗಣೇಶ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುವಂತೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ಅಕ್ಮಲ್ ಪಾಷ, ಮುಖಂಡರಾದ ನಾಜೀಂ ಖಾನ್, ಅಹಮ್ಮದ್ ಉಲ್ಲಾಖಾನ್, ವಾಯಿದ್, ಮಿರ್ಜಾ, ಮಹಮ್ಮದ್ ಉದ್ದೀನ್, ಪೈರೋಜ್ ಪಾಷ, ಫಯಾಜ್, ಜಾವದ್, ಹಣ್ಣು ಮತ್ತು ತರಕಾರಿ ಮಾಲೀಕರ ಸಂಘದ ಅಧ್ಯಕ್ಷ ಸಮೀವುಲ್ಲಾ, ರಾಜರಾಜೇಶ್ವರಿ ಕಲ್ಯಾಣ ಮಂಟಪದ ಅಧ್ಯಕ್ಷ ಶಿವಕುಮಾರ್, ಬಿಜೆಪಿ ಟೌನ್ ಅಧ್ಯಕ್ಷ ರಮೇಶ್, ಮುಖಂಡರಾದ ಚಿಕ್ಕಮಾಳಿಗೆ, ಅಚ್ಗಳ್ ನಾಗರಾಜು, ಮನೋಹರ್ ಮಧುಚಂದ್ರ, ಅಲೆಕ್ಸಾಂಡರ್, ಪುಟ್ಟರಸಶೆಟ್ಟಿ, ರೋಟರಿ ಅಧ್ಯಕ್ಷ ಕುಮಾರ್ ಇದ್ದರು.