ಮುಂಬಯಿ: ಉದ್ರೇಕಕಾರಿ ಭಾಷಣ ಮಾಡಿದ ಆರೋಪದ ಮೇಲೆ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ಗುಜರಾತ್ ಹಾಗೂ ಮುಂಬಯಿ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಮುಸ್ಲಿಂ ವಾಗ್ಮಿ ಮುಫ್ತಿ ಸಲ್ಮಾನ್ ಅಝ್ಹರಿ ಅವರನ್ನು ಭಾನುವಾರ ರಾತ್ರಿ(ಫೆ.4 ರಂದು) ಬಂಧಿಸಿದ್ದಾರೆ.
ಘಟನೆ ಹಿನ್ನೆಲೆ: ಇತ್ತೀಚೆಗೆ ಗುಜರಾತ್ ನ ಜುನಾಗಢದಲ್ಲಿ ಸಲ್ಮಾನ್ ಅಝ್ಹರಿ ಅವರು ಉದ್ರೇಕಕಾರಿ ಹಾಗೂ ದ್ವೇಷ ಭಾಷಣವನ್ನು ಮಾಡಿದ್ದರು ಎನ್ನುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಸಂಬಂಧ ಮುಫ್ತಿ ಮತ್ತು ಇತರ ಇಬ್ಬರ ವಿರುದ್ಧ ಸೆಕ್ಷನ್ 153B ಅಡಿಯಲ್ಲಿ ಎಫ್ ಐಆರ್ ದಾಖಲಿಸಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿ ಗುಜರಾತ್ ಪೊಲೀಸರು ಈಗಾಗಲೇ ಮೊಹಮ್ಮದ್ ಯೂಸುಫ್ ಮಾಲೆಕ್ ಮತ್ತು ಅಜೀಮ್ ಹಬೀಬ್ ಒಡೆದಾರ ಎಂಬುವವರನ್ನು ಬಂಧಿಸಿದ್ದಾರೆ. ಇದಾದ ಬಳಿಕ ಸಲ್ಮಾನ್ ಅಝ್ಹರಿ ಅವರನ್ನು ಬಂಧಿಸಲು ಗುಜರಾತ್ ಪೊಲೀಸರು ಮಹಾರಾಷ್ಟ್ರ ಪೊಲೀಸರ ಸಹಾಯವನ್ನು ಕೋರಿದ್ದರು.
ಭಾನುವಾರ ರಾತ್ರಿ ಸಲ್ಮಾನ್ ಅಝ್ಹರಿ ಅವರನ್ನು ಬಂಧಿಸಿ ಘಾಟ್ ಕೋಪರ್ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿತ್ತು. ಈ ವೇಳೆ ಸಲ್ಮಾನ್ ಅಝ್ಹರಿ ಅವರ ಅಪಾರ ಬೆಂಬಲಿಗರು ಠಾಣೆಯ ಬಳಿ ಬಂದು, ಕೂಡಲೇ ಅವರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.
ಜೈಲಿನಿಂದಲೇ ತನ್ನ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿರುವ ಸಲ್ಮಾನ್ ಅಝ್ಹರಿ, “ನಾನು ಅಪರಾಧಿಯಲ್ಲ, ನಾನೇನು ಅಪರಾಧವನ್ನು ಎಸೆಗಿಲ್ಲ. ಅವರು ತನಿಖೆ ಮಾಡುತ್ತಿದ್ದಾರೆ. ನಾನು ಕೂಡ ಅದಕ್ಕೆ ಸಹಕಾರ ನೀಡುತ್ತಿದ್ದೇನೆ. ನಾನು ತಪ್ಪು ಮಾಡಿದರೆ, ನನ್ನನ್ನು ಬಂಧಿಸಲಿ. ದಯವಿಟ್ಟು ಶಾಂತಿಯನ್ನು ಕಾಪಾಡಿ” ಎಂದು ಹೇಳಿದ್ದಾರೆ.
ಸದ್ಯ ಪೊಲೀಸರು ಸಲ್ಮಾನ್ ಅವರನ್ನು ಜುನಾಗಢಕ್ಕೆ ಹೆಚ್ಚಿನ ತನಿಖೆಗಾಗಿ ಕರೆದುಕೊಂಡು ಹೋಗಲಿದ್ದಾರೆ ಎಂದು ವರದಿ ತಿಳಿಸಿದೆ.