Advertisement

ಮಸ್ಕಿ ರಾಯಚೂರಿನದ್ದು; ನಾವುಂದದ್ದಲ್ಲ!

11:41 PM May 31, 2023 | Team Udayavani |

ಈಚೆಗೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ನೂತನ ಸಂಸತ್‌ ಭವನದ ಗೋಡೆಯಲ್ಲಿ ಇರುವ ಅಖಂಡ ಭಾರತದ ಭೂಪಟ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಒಳಗಾಗಿದೆ. ಈ ಭೂಪಟದಲ್ಲಿ 55 ಪ್ರದೇಶಗಳ ಹೆಸರುಗಳು ಇದ್ದು ಕರ್ನಾಟಕದ ಮಸ್ಕಿಯೂ ಕಾಣಿಸಿಕೊಂಡಿದೆ. ಕೆಲವರು ಇದು ಬೈಂದೂರು ತಾಲೂಕಿನ ನಾವುಂದ ಸಮೀಪದ ಮಸ್ಕಿ ಎಂದು ಹೇಳುತ್ತಿದ್ದಾರೆ. ಈ ಕುರಿತಾಗಿ ಸೃಷ್ಟಿಯಾಗಿರುವ ಗೊಂದಲಗಳ ಹಿನ್ನೆಲೆಯಲ್ಲಿ ಈ ಲೇಖನ.

Advertisement

ಅಖಂಡ ಭಾರತ ಭೂಪಟ
ಪ್ರಾಚೀನ ಭಾರತವನ್ನು ಅಶೋಕ ಚಕ್ರವರ್ತಿ, ಚಂದ್ರಗುಪ್ತ, ಚೋಳರು ಮೊದಲಾದ ಮಹಾನ್‌ ರಾಜರು ಮತ್ತು ರಾಜವಂಶಗಳಿಂದ ಆಳಿದ ಪ್ರಾಚೀನ ಭಾರತವನ್ನು ವಿವರಿಸುವ ಪದ ಅಖಂಡ ಭಾರತ. ವಿಶೇಷವಾಗಿ ಭಾರತವರ್ಷ ಎಂದು ಕರೆಯಲ್ಪಡುವ ಆ ಸಮಯದಲ್ಲಿ ಪ್ರಾಚೀನ ಭಾರತ ಇಂದಿನ ಭಾರತ, ಪಾಕಿಸ್ಥಾನವನ್ನು ಒಳಗೊಂಡಿರುವ ಸಾಂಸ್ಕೃತಿಕ ಮತ್ತು ನಾಗರಿಕತೆಯ ಏಕತೆಯನ್ನು ಹೊಂದಿದ್ದ ವಿಶಾಲ ಪ್ರದೇಶವಾಗಿತ್ತು. ಅಫ್ಘಾನಿಸ್ಥಾನ, ಬಾಂಗ್ಲಾದೇಶ ಮತ್ತು ಇತರ ನೆರೆಯ ದೇಶಗಳು ಇದ್ದ ಅಖಂಡ ಭಾರತದ ನಕ್ಷೆಯನ್ನು ಹೊಸ ಸಂಸತ್‌ ಭವನದ ಗೋಡೆಯಲ್ಲಿ ಅಳವಡಿಸಲಾಗಿದೆ. ಇದರಲ್ಲಿ ಸುಮಾರು 55 ಸ್ಥಳಗಳ ಉಲ್ಲೇಖ ಮಾಡಲಾಗಿದೆ. ಈ ಪೈಕಿ ಹೆಚ್ಚಿನವು ಮೌರ್ಯ ಸಾಮ್ರಾಜ್ಯದ ಪ್ರದೇಶಗಳು. ಚೋಳರು ಮತ್ತು ಪಾಂಡ್ಯರು ಆಳಿದ ದಕ್ಷಿಣದಲ್ಲಿದ ಪ್ರದೇಶಗಳನ್ನು ಹೊರತುಪಡಿಸಿ ಮೌರ್ಯ ಸಾಮ್ರಾಜ್ಯವು ಭಾರತೀಯ ಉಪ‌ಖಂಡದ ಪ್ರಮುಖ ಭಾಗಗಳನ್ನು ನಿಯಂತ್ರಿಸಿತ್ತು.

55 ಊರುಗಳು
ನಕ್ಷೆಯಲ್ಲಿ ದಂತಪುರ, ದಕ್ಷಿಣಾಪಥ, ಮಥುರಾ, ತೋಸಲಿ, ಕಾಮರೂಪ, ವೈಶಾಲಿ, ನಲಂದಾ, ಪಾಟಲಿಪುತ್ರ, ಚಂಪಾನಗರಿ, ವಂಗ, ಮಗಧ, ಬೋಧ್‌ಗಯಾ, ಸಾರಾನಾಥ, ಪ್ರಯಾಗ, ಲುಂಬಿನಿ, ಕಪಿಲವಸ್ತು, ಶ್ರಾವಸ್ತಿ , ಕೋಸಲ, ಹಸ್ತಿನಾಪುರ, ಕೌಶಂಬಿ, ವಿರಾಟನಗರ, ವಿದಿಶಾ, ಅವಂತಿ, ಸಾಂಚಿ, ಸೌರಾಷ್ಟ್ರ, ಕುರುಕ್ಷೇತ್ರ, ಸಿಂಧು ಹೀಗೆ ಒಟ್ಟು 55 ಪ್ರದೇಶಗಳನ್ನು ಉಲ್ಲೇಖೀಸಲಾಗಿದೆ. ಇದರ ಜತೆಗೆ ಕರ್ನಾಟಕದ ಮಸ್ಕಿ ಎಂಬ ಊರಿನ ಉಲ್ಲೇಖ ಇದೆ.

ರಾಯಚೂರಿನ ಮಸ್ಕಿ
ಮೌರ್ಯ ವಂಶದ ಚಕ್ರವರ್ತಿ ಅಶೋಕನಿಗೆ ಸಂಬಂಧಿಸಿದ ಪುರಾತನ ನಗರ ಮಸ್ಕಿ. ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನಲ್ಲಿತ್ತು. ಈಗ ಪ್ರತ್ಯೇಕ ತಾಲೂಕು ಕೇಂದ್ರ. ಈ ಪಟ್ಟಣ ಚೋಳ ಸಾಮ್ರಾಜ್ಯಕ್ಕೆ ಸಂಬಂಧಿಸಿದೆ. ಮಸ್ಕಿಯಲ್ಲಿನ ಚಿಕ್ಕ ಶಿಲಾ ಶಾಸನಗಳಲ್ಲಿ ಒಂದು ಅಶೋಕನು “ದೇವನಾಂಪ್ರಿಯ’ ಎಂಬ ಬಿರುದು ಪಡೆದುದನ್ನು ವಿವರಿಸುತ್ತದೆ. ಮಸ್ಕಿ ಪಟ್ಟಣದಲ್ಲಿ ದೊರೆತ ಅಶೋಕನ ಶಿಲಾಶಾಸನದಿಂದ ನಗರಕ್ಕೆ ಐತಿಹಾಸಿಕ ಮಹತ್ವ ಲಭಿಸಿದೆ. ಮಸ್ಕಿ ನಾಲಾ ಎಂಬ ನದಿಯ ದಂಡೆ ಮೇಲೆ ಇರುವ ಈ ಊರು ಇತಿಹಾಸ ಪೂರ್ವಕಾಲದ ನಿವೇಶನವಾಗಿದ್ದು ಶಾಸನಗಳಲ್ಲಿ “ಮೊಸಂಗಿ’ ಎಂದು ಕರೆಯಲಾಗಿದೆ. ಯಾದವರ ಒಂದು ಶಾಸನವು ಈ ಪಟ್ಟಣವನ್ನು ರಾಜಧಾನಿ ಪ್ರಿಯ ಮೊಸಂಗಿ ಎಂದಿದೆ. ವಿಜಯನಗರ ಕಾಲದಲ್ಲಿ ಇದು ಮೊಸುಗೆ ಎಂದು ಕರೆಯಲ್ಪಡುತ್ತಿತ್ತು. ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರವಾಗಿ ಗುರುತಿಸಿಕೊಂಡಿರುವ ಮಾಸಂಗಿಪುರ ಇಂದಿನ ಮಸ್ಕಿಯಲ್ಲಿ ದೇವನಾಂಪ್ರಿಯ ಅಶೋಕ ಎಂಬ ಶಾಸನವನ್ನು ಕ್ರಿ.ಶ.1915ರಲ್ಲಿ ಎಂಜಿನಿಯರ್‌ ಆಗಿದ್ದ ಸಿ.ಬಿಡನ್‌ ಗುರುತಿಸಿದ್ದಾರೆ. ಈ ಶಿಲಾ ಶಾಸನವನ್ನು ಬ್ರಾಹ್ಮಿಲಿಪಿಯಲ್ಲಿ ಕೆತ್ತಲಾಗಿದೆ.

ಹೆಸರಿನ ಗೊಂದಲ
ಹೊಸ ಸಂಸತ್‌ ಭವನದ ಗೋಡೆಯಲ್ಲಿ ಅಳವಡಿಸಲಾದ ಭೂಪಟದಲ್ಲಿ ಇರುವ ಮಸ್ಕಿ ಹೆಸರು ರಾಯಚೂರಿನದ್ದು. ಚಕ್ರವರ್ತಿ ಅಶೋಕನಿಗೆ ಸಂಬಂಧಪಟ್ಟದ್ದು. ಆದರೆ ಮಾಹಿತಿಯ ಕೊರತೆಯಿಂದ ಇದು ಬೈಂದೂರಿನ ನಾವುಂದದ ಮಸ್ಕಿ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿದೆ. ವೈರಲ್‌ ಆಗುತ್ತಿರುವ ಚಿತ್ರದಲ್ಲಿ ಹೊಸ ಸಂಸತ್‌ ಭವನದಲ್ಲಿ ಭಾರತದ ಭೂಪಟದ ಚಿತ್ರವನ್ನು ಕಡಲತೀರದಲ್ಲಿ ಮಸ್ಕಿ ಹೆಸರಿನ ಮತ್ತು ಮೊಗವೀರ ಸಮುದಾಯದಿಂದ ಅನೇಕ ಶತಮಾನಗಳಿಂದ ಪ್ರಸಿದ್ಧವಾಗಿರುವ ಹಳ್ಳಿಯಾಗಿರುವ ಮಸ್ಕಿ ಹೆಸರನ್ನು ಉಲ್ಲೇಖೀಸಲಾಗಿದೆ. ಇಂದಿಗೂ ಇದನ್ನು ಮಸ್ಕಿ ಮನೆ ಎಂದು ಕರೆಯಲಾಗುತ್ತದೆ. ಇದು ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಬೈಂದೂರಿನ ನಾವುಂದ ಗ್ರಾಮದಲ್ಲಿ ಇದೆ ಎಂದು ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ವಿವರಿಸಲಾಗಿದೆ. ಅಸಲಿಗೆ ಸೂಕ್ಷ್ಮವಾಗಿ ನೋಡಿದಾಗ ನಾವುಂದದ ಮಸ್ಕಿ ಕಡಲತಡಿಯಲ್ಲಿದ್ದರೆ ರಾಯಚೂರಿನ ಮಸ್ಕಿ ಕಡಲಿನಿಂದ ದೂರದಲ್ಲಿದೆ. ಭೂಪಟದಲ್ಲಿ ಈ ವ್ಯತ್ಯಾಸ ಕಾಣುತ್ತದೆ. ಅದಲ್ಲದೇ ನಕ್ಷೆಯಲ್ಲಿರುವ 55 ಊರಿನ ವಿವರಗಳು ಪ್ರತ್ಯೇಕವಾಗಿ ಲಭ್ಯವಿದ್ದು ಅದರಲ್ಲಿ ಮಸ್ಕಿ ಸಾಮ್ರಾಟ್‌ ಅಶೋಕನಿಗೆ ಸಂಬಂಧಪಟ್ಟ ರಾಯಚೂರಿನ ಊರಿನ ಹೆಸರು ಎಂದು ಸ್ಪಷ್ಟವಾಗಿ ಉಲ್ಲೇಖೀಸಲಾಗಿದೆ.

Advertisement

ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next