ನವದೆಹಲಿ: ಕೋಟ್ಯಧಿಪತಿ ಉದ್ಯಮಿ, ಜಾಲತಾಣ “ಎಕ್ಸ್’ ಮಾಲೀಕ ಎಲಾನ್ ಮಸ್ಕ್ ಅವರು ತಮ್ಮ ಪುತ್ರನ ಹೆಸರಿಗೆ ಸಂಬಂಧಿಸಿದ ಕುತೂಹಲಕಾರಿ ವಿಚಾರವೊಂದನ್ನು ಬಿಚ್ಚಿಟ್ಟಿದ್ದಾರೆ. ಅದೇನು ಗೊತ್ತೇ?
ಮಸ್ಕ್ ತಮ್ಮ ಪುತ್ರನಿಗೆ ಭಾರತದ ಖ್ಯಾತ ಭೌತಶಾಸ್ತ್ರಜ್ಞ, ನೊಬೆಲ್ ಪುರಸ್ಕೃತ ಎಸ್. ಚಂದ್ರಶೇಖರ್ ಅವರ ಹೆಸರಿಟ್ಟಿದ್ದಾರೆ! ಚಂದ್ರಶೇಖರ್ ಸ್ಮರಣಾರ್ಥ ತಮ್ಮ ಪುತ್ರನ ಹೆಸರಿಗೆ “ಚಂದ್ರಶೇಖರ್’ ಅನ್ನೂ ಸೇರಿಸಿದ್ದಾರೆ. 1983ರಲ್ಲಿ ಚಂದ್ರಶೇಖರ್ ಅವರು ನೊಬೆಲ್ ಪುರಸ್ಕಾರ ಪಡೆದಿದ್ದರು.
ಜಾಗತಿಕ ಎಐ (ಕೃತಕ ಬುದ್ಧಿಮತ್ತೆ) ಸಮಾವೇಶದಲ್ಲಿ ಭಾಗಿಯಾಗಲೆಂದು ಬ್ರಿಟನ್‌ಗೆ ತೆರಳಿದ್ದ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಹಾಯಕ ಸಚಿವ ರಾಜೀವ್ ಚಂದ್ರಶೇಖರ್ ಅವರೊಂದಿಗೆ ನಡೆದ ಮಾತುಕತೆ ವೇಳೆ ಸ್ವತಃ ಮಸ್ಕ್ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ನಂತರ ಇದನ್ನು ಸಚಿವ ರಾಜೀವ್ ಅವರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದನ್ನು ದೃಢಪಡಿಸಿರುವ ಮಸ್ಕ್ ಅವರ ಪತ್ನಿ ಶಿವೋನ್ ಝಿಲಿಸ್, “ನಾವು ನಮ್ಮ ಮಗನನ್ನು ಪ್ರೀತಿಯಿಂದ ಶೇಖರ್ ಎಂದು ಕರೆಯುತ್ತೇವೆ. ಆದರೆ, ಅವನಿಗೆ ನಾವು ಸುಬ್ರಮಣ್ಯನ್ ಚಂದ್ರಶೇಖರ್ ಅವರ ಗೌರವಾರ್ಥ ಅವರ ಹೆಸರನ್ನೇ ಇಟ್ಟಿದ್ದೇವೆ’ ಎಂದು ಹೇಳಿಕೊಂಡಿದ್ದಾರೆ. ಮಸ್ಕ್ ಅವರಿಗೆ ಒಟ್ಟು 11 ಮಕ್ಕಳಿದ್ದಾರೆ.