Advertisement

ಟ್ವಿಟರ್‌ “ಬ್ಲೂಟಿಕ್‌’ಅವಾಂತರಕ್ಕೆ ಜಗತ್ತೇ ತಲ್ಲಣ!”ನಕಲಿ’ಗಳ ಆಟ; ಕಂಪೆನಿಗಳಿಗೆ ಪ್ರಾಣಸಂಕಟ

11:35 PM Nov 12, 2022 | Team Udayavani |

ಸ್ಯಾನ್‌ಫ್ರಾನ್ಸಿಸ್ಕೋ: ಟ್ವಿಟರ್‌ನ ಹೊಸ ಮಾಲಕ ಎಲಾನ್‌ ಮಸ್ಕ್ ಎಡವಟ್ಟುಗಳ ಮೇಲೆ ಎಡ ವಟ್ಟು ಮಾಡುತ್ತಿದ್ದಾರೆ. ಟ್ವಿಟರ್‌ನ “ಬ್ಲೂಟಿಕ್‌’ (ದೃಢೀಕರಿಸಲ್ಪಟ್ಟ ಖಾತೆ)ಗೆ ಮಾಸಿಕ 8 ಡಾಲರ್‌ ಮೊತ್ತ ನಿಗದಿಪಡಿಸುವ ಮೂಲಕ ನಕಲಿ ಖಾತೆಗಳನ್ನೆಲ್ಲ ಬಂದ್‌ ಮಾಡಿಸುತ್ತೇನೆ ಎಂದು ಘೋಷಿಸಿದ್ದ ಮಸ್ಕ್  ಈಗ ಅದೇ “ಬ್ಲೂಟಿಕ್‌ ಚಂದಾದಾರಿಕೆ’ ತಿರುಗು ಬಾಣವಾಗಿದೆ!

Advertisement

ಹಿಂದೆಲ್ಲ ಟ್ವಿಟರ್‌, ತಮ್ಮ ಖಾತೆ ದಾರರನ್ನು ಸಂಪರ್ಕಿಸಿ, ಅದು ಅವರದ್ದೇ ಖಾತೆ ಎಂಬುದು ದೃಢಪಟ್ಟ ಬಳಿಕವಷ್ಟೇ ಬ್ಲೂಟಿಕ್‌ ನೀಡುತ್ತಿತ್ತು. ಆದರೆ ಕಂಪೆನಿ ಯನ್ನು ಮಸ್ಕ್ ಖರೀದಿಸಿದ ಬಳಿಕ, 8 ಡಾಲರ್‌ ಪಾವತಿಸಿದವರಿಗೆ ಬ್ಲೂಟಿಕ್‌ ನೀಡುವ ನಿಯಮ ಜಾರಿಯಾಗಿದೆ. ಇದು ಜಾರಿಯಾಗಿದ್ದೇ ತಡ, ವಿಶ್ವಾದ್ಯಂತ “ನಕಲಿ ಖಾತೆ’ಗಳ ಸುನಾಮಿಯೇ ಎದ್ದಿದೆ. ಹಲವು ಕಿಡಿಗೇಡಿಗಳು 8 ಡಾಲರ್‌ ನೀಡಿ ಜಗತ್ತಿನ ಪ್ರಮುಖ ಬ್ರ್ಯಾಂಡ್‌ಗಳು, ದಿಗ್ಗಜ ಕಂಪೆನಿಗಳು, ಗಣ್ಯರ ಹೆಸರಲ್ಲಿ ಬ್ಲೂಟಿಕ್‌ಗಳನ್ನು ಖರೀದಿಸಿ ಟ್ವೀಟ್‌ ಮಾಡಲು ಶುರುವಿಟ್ಟಿದ್ದಾರೆ.

ಇದು ಈಗ ದೊಡ್ಡ ಮಟ್ಟದಲ್ಲಿ ಸಂಚಲನ ಮೂಡಿಸಿದೆ. ಪ್ರಮುಖ ಕಂಪೆನಿಗಳ ಬುಡವನ್ನೇ ಅಲ್ಲಾಡಿಸ ತೊಡಗಿದೆ. ಕಂಪೆನಿಗಳ ಹೆಸರಲ್ಲಿ ಸುಳ್ಳೇ ಸುಳ್ಳು ಟ್ವೀಟ್‌ಗಳು ಹರಿದಾಡ ತೊಡಗಿವೆ. ಯಾವುದು ಸತ್ಯ, ಯಾವುದು ಸುಳ್ಳು, ಯಾವುದು ಅಧಿ ಕೃತ, ಯಾವುದು ನಕಲಿ ಎಂಬುದನ್ನು ಅರಿಯಲು ಸಾಧ್ಯವಾಗುತ್ತಿಲ್ಲ. ಸುಳ್ಳು ಟ್ವೀಟ್‌ಗಳು ಕಂಪೆನಿಗಳ ಷೇರುಗಳ ಮೇಲೂ ಪರಿಣಾಮ ಬೀರತೊಡಗಿವೆ. ಎಲ್ಲೆಡೆಯಿಂದ ದೂರುಗಳ ಸುರಿಮಳೆ ಗಳು ಬಂದ ಕಾರಣ, ತಾತ್ಕಾಲಿಕವಾಗಿ ಬ್ಲೂಟಿಕ್‌ ಚಂದಾದಾರಿಕೆಯನ್ನು ಟ್ವಿಟರ್‌ ಸ್ಥಗಿತಗೊಳಿಸಿದೆ. ಒಟ್ಟಿನಲ್ಲಿ ಈ ಕಿರಿಕ್‌ ಎಲ್ಲಿಗೆ ಹೋಗಿ ತಲುಪುತ್ತದೆ ಎಂಬ ಪ್ರಶ್ನೆಯೆದ್ದಿದೆ.

“ಬ್ಲೂಟಿಕ್‌’ನಿಂದ ಹೆಚ್ಚಿದ “ನಕಲಿ’ ಹಾವಳಿ
ಫಾರ್ಮಾಸುಟಿಕಲ್‌ ದಿಗ್ಗಜ ಎಲಿ ಲಿಲ್ಲಿ ಕಂಪೆನಿಯ ಹೆಸರಲ್ಲಿ ಬ್ಲೂಟಿಕ್‌ ಪಡೆದ ಕಿಡಿಗೇಡಿಗಳು, “ಇನ್ನು ಮುಂದೆ ಇನ್ಸುಲಿನ್‌ ಅನ್ನು ಉಚಿತವಾಗಿ ನೀಡಲಿ ದ್ದೇವೆ’ ಎಂದು ಟ್ವೀಟ್‌ ಮಾಡಿದ್ದಾರೆ. ಇದರ ಬೆನ್ನಲ್ಲೇ ಕಂಪೆನಿಯ ಷೇರುಗಳು ದಿಢೀರ್‌ ಪತನಗೊಂಡಿವೆೆ. ಕೊನೆಗೆ ಕಂಪೆನಿಯೇ ಪ್ರಕಟನೆೆ ಹೊರಡಿಸಿ, “ಇನ್ಸುಲಿನ್‌ ಉಚಿತವಾಗಿ ಕೊಡುತ್ತಿಲ್ಲ. ಇದು ಸುಳ್ಳು ಮಾಹಿತಿ’ ಎಂದು ಸ್ಪಷ್ಟನೆ ಕೊಡಬೇಕಾಯಿತು.

ರಕ್ಷಣ ಸಾಮಗ್ರಿಗಳ ಉತ್ಪಾದನ ಕಂಪೆನಿ ಲಾಕ್‌ಹೀಡ್‌ ಮಾರ್ಟಿನ್‌ ಹೆಸರಲ್ಲಿರುವ ನಕಲಿ ಖಾತೆಗೆ ಬ್ಲೂಟಿಕ್‌. “ಅಮೆರಿಕ ಸೇರಿದಂತೆ ಕೆಲವು ದೇಶಗಳಿಗೆ ನಾವು ರಕ್ಷಣ ಸಾಮಗ್ರಿ ಮಾರಾಟ ಸ್ಥಗಿತಗೊಳಿಸುತ್ತಿದ್ದೇವೆ’ ಎಂದು ಟ್ವೀಟ್‌. ಏಕಾಏಕಿ ಶೇ.5ರಷ್ಟು ಕುಸಿತ ಕಂಡ ಕಂಪೆನಿಯ ಷೇರು.

Advertisement

ಪೆಪ್ಸಿ ಕಂಪೆನಿಯ ಹೆಸರಲ್ಲಿ ನಕಲಿ ಖಾತೆ ತೆರೆದ ವ್ಯಕ್ತಿಯು, “ಪೆಪ್ಸಿಗಿಂತ ಕೋಕ್‌ ಚೆನ್ನಾಗಿದೆ’ ಎಂದು ಬರೆದುಕೊಂಡಿದ್ದಾನೆ.

ನೆಸ್ಲೆ ಕಂಪೆನಿ ಹೆಸರಲ್ಲಿ ಬ್ಲೂಟಿಕ್‌ ಪಡೆದ ಕಿಡಿಗೇಡಿ, “ನಾವು ನಿಮ್ಮದೇ ನೀರನ್ನು ಕದ್ದು, ನಿಮಗೇ ಮಾರಾಟ ಮಾಡುತ್ತೇವೆ’ ಎಂದು ಟ್ವೀಟ್‌ ಮಾಡಿದ್ದಾನೆ.

ವರ್ಣಭೇದ ನೀತಿ ವಿರುದ್ಧ ಧ್ವನಿಯೆತ್ತಿರುವ ಇಸ್ರೇಲ್‌ನ ಎಐಪಿಎಸಿ ಖಾತೆಯಿಂದ “ನಾವು ವರ್ಣಭೇದ ನೀತಿಯನ್ನು ಪ್ರೀತಿಸುತ್ತೇವೆ’ ಎಂದು ಟ್ವೀಟ್‌.

ಚಿಕ್ವಿಟಾ ಖಾತೆಯಿಂದ “ನಾವು ಬ್ರೆಜಿಲ್‌ ಸರಕಾರ ಪತನಗೊಳಿಸಿದೆವು’ ಎಂದು ಬರೆಯಲಾಗಿದೆ.

 

 

Advertisement

Udayavani is now on Telegram. Click here to join our channel and stay updated with the latest news.

Next