Advertisement

ಮಸ್ಕ್ ದೇಶದ ನೀತಿ ಅರಿತುಕೊಳ್ಳುವುದು ಒಳಿತು

12:03 AM Feb 11, 2022 | Team Udayavani |

ಭಾರತದಲ್ಲಿ ಅಮೆರಿಕದ ಎಲೆಕ್ಟ್ರಿಕ್‌ ವಾಹನ ಉತ್ಪಾದನ ಕಂಪೆನಿ ಟೆಸ್ಲಾ ಕಾರು ಉತ್ಪಾದನೆ ಮಾಡಲು ಆಸಕ್ತಿ ತೋರಿರುವ ಬೆನ್ನಲ್ಲೇ ಹಲವು ವಿದ್ಯಮಾನಗಳು ಸಂಭವಿಸಿವೆ. ವಿದೇಶದಲ್ಲಿ ಕಾರನ್ನು ಉತ್ಪಾದಿಸಿ ಭಾರತದಲ್ಲಿ ಮಾರುಕಟ್ಟೆ ಸೃಷ್ಟಿಸಿಕೊಳ್ಳಬೇಕೆನ್ನುವ ಟೆಸ್ಲಾ ಕಂಪೆನಿಯ ಇರಾದೆಗೆ ಕೇಂದ್ರ ಸರಕಾರ ಸೊಪ್ಪು ಹಾಕಿಲ್ಲ. ಈ ನಡುವೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರೂ ಟೆಸ್ಲಾದ ಈ ನಿಲುವಿಗೆ ವಿರೋಧ ವ್ಯಕ್ತಪಡಿಸಿರುವುದು ಮತ್ತೆ ವಿಚಾರವನ್ನು ಮುನ್ನೆಲೆಗೆ ತಂದಿದೆ.

Advertisement

ಆತ್ಮನಿರ್ಭರ ಧ್ಯೇಯೋದ್ದೇಶ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದ ಈ ನಿಲುವು ಸ್ತುತ್ಯರ್ಹ. ದೇಶವನ್ನು ಜಗತ್ತಿನ ಉತ್ಪಾದನ ಕ್ಷೇತ್ರದ ಪ್ರಧಾನ ಕೇಂದ್ರವನ್ನಾಗಿ ಪರಿವರ್ತಿಸಬೇಕು ಎನ್ನುವುದು ಕೇಂದ್ರ ಸರಕಾರದ ಉದ್ದೇಶವಾಗಿದೆ. ರಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಕಳೆದ ವರ್ಷವೇ ಹಲವು ರೀತಿಯ ಶಸ್ತ್ರಾಸ್ತ್ರಗಳ ಉತ್ಪಾದನೆ ಮತ್ತು ಅದಕ್ಕೆ ಪೂರಕವಾಗಿರುವ ಅಂಶಗಳನ್ನು ಸಿದ್ಧಗೊಳಿಸುವ ಬಗ್ಗೆ ಪ್ರೋತ್ಸಾಹ ನೀಡಲು ಉದ್ದೇಶಿಸಿದೆ. ಫೆ.1ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ ಬಜೆಟ್‌ನಲ್ಲಿ ದೇಶದಲ್ಲಿಯೇ ಉತ್ಪಾದನೆ ಎಂಬ ಘೋಷವಾಕ್ಯಕ್ಕೆ ಅಂಟಿ ಕೊಂಡಿದೆ. ಶೇ.68 ರಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ವಸ್ತುಗಳನ್ನು ನಮ್ಮಲ್ಲಿಯೇ ಉತ್ಪಾದನೆ ಮಾಡುವ ಬಗ್ಗೆ ಆದ್ಯತೆ ನೀಡಲಾಗಿದೆ. ಹೀಗಾಗಿ ರಕ್ಷಣ ಕ್ಷೇತ್ರದಲ್ಲಿ ನಮ್ಮ ದೇಶದ ಕಂಪೆನಿಗಳಿಗೇ ಹೆಚ್ಚಿನ ಆದ್ಯತೆ ಸಿಗಲಿದೆ ಎನ್ನುವುದು ಸರಕಾರದ ವಾದ.

ಟೆಸ್ಲಾದಂಥ ಕಂಪೆನಿಗೂ ಇದು ಅನ್ವಯವಾಗುತ್ತದೆ. ಟೆಸ್ಲಾ ಚೀನದಲ್ಲಿ ವಸ್ತುಗಳನ್ನು ಉತ್ಪಾದಿಸಿ ಭಾರತದಲ್ಲಿ ಅವುಗಳನ್ನು ಮಾರಾಟ ಮಾಡುವ ಪ್ರಸ್ತಾವ ಎಂಬ ಅಂಶ ಈಗ ಚರ್ಚೆಗೆ ಗ್ರಾಸವಾಗಿದೆ. ದೇಶದಲ್ಲಿ ಎಲೆಕ್ಟ್ರಿಕ್‌ ವಾಹನಗಳನ್ನು ಉತ್ಪಾದನೆ ಮಾಡಲು ಆಸಕ್ತಿ ತೋರಿಸಿರುವ ಟೆಸ್ಲಾ, ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದು ಹಳೆಯ ವಿಚಾರ. ಟೆಸ್ಲಾದ ಮಾಲಕ ಎಲಾನ್‌ ಮಸ್ಕ್ ಅವರು, ಒಂದು ಅಂಶವನ್ನು ಗಮನಿಸಬೇಕು. ಅಮೆರಿಕ ಸೇರಿದಂತೆ ಇತರ ರಾಷ್ಟ್ರಗಳಲ್ಲಿ ಆ ನೆಲದ ಕಾನೂನು ಗೌರವಿಸಲು ಸಾಧ್ಯವಾಗುತ್ತಿದ್ದರೆ, ಭಾರತದಲ್ಲಿ ಅವರ ಸಂಸ್ಥೆಗೆ ಏಕೆ ಸಾಧ್ಯವಾಗದು?

ಅದಕ್ಕಾಗಿಯೇ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ, “ಮಸ್ಕ್ ಅವರ ಕಂಪೆನಿ ಚೀನದಲ್ಲಿ ಕಾರು ಉತ್ಪಾದಿಸಿ, ಭಾರತ ದಲ್ಲಿ ಮಾರುವ ಯೋಚನೆ ನಮಗೆ ಅರಗಿಸಿಕೊಳ್ಳುವ ಅಂಶವಲ್ಲ’ ಎಂದಿದ್ದಾರೆ. ವಿವಿಧ ವಸ್ತುಗಳ ಉತ್ಪಾದನ ಕ್ಷೇತ್ರದ ಮ್ಯಾಪ್‌ನಲ್ಲಿ ದೇಶ ಅಗ್ರೇಸರನಾಗಿ ಗುರುತಿಸಿಕೊಳ್ಳುವಂತಾಗಬೇಕು ಎನ್ನುವುದು ಕೇಂದ್ರದ ದೃಢ ಸಂಕಲ್ಪ. ಹೀಗಾಗಿ ಸರಕಾರದ ಉದ್ದೇಶವನ್ನು ಮಸ್ಕ್ ಮನಗಾಣು ವುದು ಒಳಿತು. “ಮೇಕ್‌ ಇನ್‌ ಇಂಡಿಯಾ’ ಎಂಬ ಘೋಷವಾಕ್ಯ ಸೃಷ್ಟಿಯಾದದ್ದೇ 2014ರಲ್ಲಿ.

ಹೀಗಾಗಿ ಕ್ಷಿಪ್ರ ಕಾಲದಲ್ಲಿ ಲಾಭ ಸಿಗಬೇಕು ಮತ್ತು ಅದರಿಂದ ದೇಶಕ್ಕೆ ಏನು ಪ್ರಯೋಜನವಾಗಿದೆ ಎಂದು ಕೆಲವರು ಆಗಾಗ ಪ್ರಶ್ನೆ ಮಾಡುವುದುಂಟು. ಅವರು ಗಮನಿಸ ಬೇಕಾದುದು ಇಷ್ಟೇ. ದೀರ್ಘಾವಧಿಯ ದೃಷ್ಟಿಕೋನ ಇರಿಸಿಕೊಂಡು ಜಾರಿ ಮಾಡಲಾಗಿರುವವು. ಹೀಗಾಗಿ ವಿನಾ ಕಟಕಿಯಾಡದೆ ಸರಕಾರದ ಜತೆಗೆ ನಿಂತು ಅವುಗಳನ್ನು ಸಮರ್ಪಕವಾಗಿ ಜಾರಿಗೆ ತರುವುದರ ಬಗ್ಗೆ ಬೆಂಬಲದ ಮಾತನಾಡಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next