Advertisement
ನೀವು ಕಂಪ್ಯೂಟರ್ ವಿಜ್ಞಾನದ ಪದವೀಧರರಾಗಿ, ಅಮೆರಿಕದ ಇನ್‌ವೈನ್‌ನಲ್ಲಿದ್ದರೂ ಸಂಗೀತ ಕ್ಷೇತ್ರದತ್ತ ವಾಲಲು ಏನು ಕಾರಣ?ನಾನು ಅಮೆರಿಕದಲ್ಲಿ ಕಂಪ್ಯೂಟರ್ ವಿಜ್ಞಾನವನ್ನು ಓದಿದ್ದರೂ ಸಂಗೀತದ ಮೇಲಿದ್ದ ಅಪಾರ ಕಾಳಜಿಯೇ ನನ್ನನ್ನು ಭಾರತಕ್ಕೆ ಸೆಳೆಯಿತು. ನಮಗೆ ಯಾವುದರಲ್ಲಿ ಆಸಕ್ತಿ ಇರುತ್ತದೋ ಅದರತ್ತ ವಾಲುವುದು ಸಹಜ. ದೇವರ ದಯೆ ಮತ್ತು ಹಿರಿಯ ಆಚಾರ್ಯರ ಆಶೀರ್ವಾದ, ಪೋಷಕರು, ತಾತನವರ ಮಾರ್ಗದರ್ಶನದಿಂದ ಇದೆಲ್ಲ ಸಾಧ್ಯವಾಯಿತು. ನನ್ನ ತಾಯಿ ಇಂದುಮತಿಯವರಿಗೆ ಸಂಗೀತದಲ್ಲಿ ವಿಶೇಷ ಆಸಕ್ತಿ ಇತ್ತು. ನಾನು ಹತ್ತು ವರ್ಷದವನಾಗಿರುವಾಗಲೇ ಸಂಗೀತವನ್ನು ಹಾಡುತ್ತಿದ್ದೆ. ನನ್ನ ತಂದೆತಾಯಿ ವಾಸವಿದ್ದ ಮನೆ ಬಳಿಯೇ ಇದ್ದ ವಿ| ಪದ್ಮಾ ಕುಟ್ಟಿಯವರಿಂದ ಸಂಗೀತವನ್ನು ಕಲಿತೆ. ಇದೆಲ್ಲ ನಾನು ಸಂಗೀತದಲ್ಲಿ ಬೆಳೆಯಲು ಕಾರಣವಾಯಿತು.
ನನ್ನ ಪ್ರೌಢಸಂಗೀತ ಕಲಿಕೆ ದಿಲ್ಲಿಯಲ್ಲಿದ್ದ ಮೂಲತಃ ಕುಂಭಕೋಣದವರಾದ ಸುಂದರರಾಜನ್ ಅವರಿಂದಲೂ ಬಳಿಕ ಆರ್.ಕೆ. ಶ್ರೀರಾಮಕುಮಾರರಿಂದಲೂ ನಡೆಯಿತು, ಈಗಲೂ ನಡೆಯುತ್ತಿದೆ. ಇವರಿಬ್ಬರೂ ಪಿಟೀಲುವಾದಕರು ಹೌದು. ಇವರಿಬ್ಬರೂ ವೃತ್ತಿಪರರಾಗಿ ಪಿಟೀಲುವಾದಕರಾಗಿದ್ದರೆ ವಿದ್ವತ್‌ನಲ್ಲಿ ಎರಡೂ ಬಗೆಗಳಲ್ಲಿಯೂ ನಿಷ್ಣಾತರು. ಹೀಗಾಗಿ ನನಗೆ ಪಿಟೀಲುವಾದಕರೂ ಹಾಡುಗಾರಿಕೆಯ ಗುರುಗಳು. ಕರ್ನಾಟಕ ಸಂಗೀತದಲ್ಲಿ ಎಷ್ಟು ಭಾಷೆಗಳಲ್ಲಿ ಹಾಡುಗಳಿವೆ? ಯಾವ ಭಾಷೆಯ ಹಾಡುಗಳು ಹೆಚ್ಚಿಗೆ ಇವೆ? ಪ್ರಾದೇಶಿಕತೆಗೆ ತಕ್ಕಂತೆ ಹಾಡುಗಳನ್ನು ಆಯ್ಕೆ ಮಾಡಿಕೊಳ್ಳುತ್ತೀರಾ?
ಸಂಸ್ಕೃತ, ತೆಲುಗು, ತಮಿಳು, ಕನ್ನಡ, ಮಲಯಾಳದಲ್ಲಿ ಹಾಡುಗಳಿವೆ. ಮುಖ್ಯವಾಗಿರುವುದು ಸಂಸ್ಕೃತ ಮತ್ತು ತೆಲುಗಿನಲ್ಲಿ. ಇದಕ್ಕೆ ಮುಖ್ಯ ಕಾರಣ ತ್ಯಾಗರಾಜರು, ಶಾಮಾಶಾಸಿŒಗಳು, ಮುತ್ತುಸ್ವಾಮಿ ದೀಕ್ಷಿತರು. ಇವರು ಬರೆದದ್ದು ಹೆಚ್ಚು ಈ ಭಾಷೆಗಳಲ್ಲಿ. ಕರ್ನಾಟಕಕ್ಕೆ ಬಂದಾಗ ಕನ್ನಡದ ಹಾಡುಗಳನ್ನು ಸಹಜವಾಗಿ ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತೇವೆ. ಹೀಗೆ ಆಯಾ ರಾಜ್ಯಗಳಲ್ಲಿ ಅಲ್ಲಲ್ಲಿನ ಭಾಷೆಗಳ ಹಾಡುಗಳನ್ನು ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತೇವೆ.
Related Articles
ಕರ್ನಾಟಕ ಸಂಗೀತವೆಂದರೆ ಬಹು ಅರ್ಥಗಳಿವೆ. ಹಲವು ಉಲ್ಲೇಖಗಳಿವೆ. ಆದರೆ ಈಗಿನ ಪ್ರಾದೇಶಿಕತೆ ದೃಷ್ಟಿಯಲ್ಲಿ ಹಲವು ರಾಜ್ಯಗಳಲ್ಲಿ ವ್ಯಾಪಿಸಿರುವುದರಿಂದ ದಕ್ಷಿಣ ಭಾರತ ಶಾಸ್ತ್ರೀಯ ಸಂಗೀತ ಎಂದು ಹೆಸರಿಸುವುದು ಅರ್ಥಪೂರ್ಣ ಆಗಬಹುದು.
Advertisement
ಕರ್ನಾಟಕ ಸಂಗೀತದಲ್ಲಿ ಉಪಕರಣಗಳ ವಾದನಕ್ಕೆ ಬಾನಿ ಎಂಬ ಹೆಸರು ಬಂದಿದ್ದು ಹಾಡುಗಾರಿಕೆಗೆ ಇಲ್ಲವಲ್ಲವೆ?ಮೃದಂಗದಲ್ಲಿ ತಂಜಾವೂರು ಬಾನಿ, ಪುದುಕೋಟೆ ಬಾನಿ, ವೀಣೆಯಲ್ಲಿ ಮೈಸೂರು, ತಂಜಾವೂರು, ತಿರುವಾಂಕೂರು ಬಾನಿ ಎಂಬ ವೈವಿಧ್ಯಗಳಿವೆ. ಹಾಡುಗಾರಿಕೆಯಲ್ಲಿ ಇಂತಹ ಕ್ರಮ ಚಾಲ್ತಿಗೆ ಬಂದಂತಿಲ್ಲ. ನೀವು ಯುವಕರಾಗಿದ್ದೀರಿ, ಯುವ ಸಮುದಾಯಕ್ಕೆ ನಿಮ್ಮ ಆಶಯವೇನು?
ನಾನಿನ್ನೂ ಯುವಕನಾಗಿರುವುದರಿಂದ ಅಭಿಪ್ರಾಯ, ಆಶಯ ವ್ಯಕ್ತಪಡಿಸುವುದು ಅಷ್ಟು ತಕ್ಕುದಲ್ಲ. ನಾವು ನಮ್ಮ ಕರ್ತವ್ಯವನ್ನು ಶ್ರದ್ಧೆಯಿಂದ ಮಾಡಬೇಕು. ನಾವು ಏನೇ ಹೇಳಿದರೂ ಅದರಿಂದ ಪ್ರಯೋಜನವಿಲ್ಲ, ಜನರು ಅದರಂತೆ ನಡೆಯುವುದಿಲ್ಲ. ಜನರು ಆಸಕ್ತಿ ಇದ್ದ ಕಡೆ ಹೋಗುತ್ತಾರೆ. ನಾನು ಸಂಗೀತದತ್ತ ಬರಲಿಲ್ಲವೆ? ನಾವು ಜನರಲ್ಲಿ ಅನುಭೂತಿ ಹುಟ್ಟಿಸಬೇಕು. ಇದರರ್ಥ ನಮ್ಮ ಕರ್ತವ್ಯವನ್ನು ಸರಿಯಾಗಿ ಮಾಡುವುದೇ ಆಗಿದೆ. -ಮಟಪಾಡಿ ಕುಮಾರಸ್ವಾಮಿ