Advertisement

ಜೇಷ್ಠ ಮಾಸದ ಗಾನ ಸಿಂಚನ 

06:00 AM Jul 20, 2018 | |

ರಾಗಧನ ಸಂಗೀತ ಸಂಸ್ಥೆಯ ವಾರ್ಷಿಕ ಮಹಾಸಭೆಯ ಸಂದರ್ಭದಲ್ಲಿ ಹೈದರಾಬಾದ್‌ನ ರಂಜನಿ ಶಿವಕುಮಾರ್‌ ಅವರು ಸಂಗೀತ ಕಛೇರಿ ನೀಡಿದರು. ರಂಜನಿ ಶಿವಕುಮಾರ್‌ ನಗುಮುಖದ ಗಾಯಕಿ. ಮಂದ್ರದಲ್ಲಿ ಆಪ್ತವೆನಿಸುವ ತುಸುವೇ ಗಡಸಾದ ಶಾರೀರ. ಹೊಸ ವಿನ್ಯಾಸಗಳಿಗೆ ಮತ್ತು ಶೈಲಿಗೆ ಆದ್ಯತೆ ನೀಡುವ ಹುಮ್ಮಸ್ಸು. ಮೊದಲಿಗೆ ಎರಡು ಕಾಲಗಳಲ್ಲಿ ಹಾಡಲಾದ ಭೈರವಿಯ ಆಟತಾಳದ ವರ್ಣದ ಅತಿ ವಿಳಂಗ ಗತಿ ಗಾಯಕಿಯ ಲಯದ ಸ್ಥಿರತೆಗೆ ಎರವಾಯಿತು. ಮುಂದೆ ಸುಧಾರಿಸಿಕೊಂಡ ಕಲಾವಿದೆ ಚುಟುಕಾದ ಸ್ವರವಿನಿಕೆಗಳೊಂದಿಗೆ ಗೌಳ (ಶ್ರೀ ಮಹಾಗಣಪತಿ), ಕಮಾಚ್‌ (ಸೀತಾಪತೇ) ಅಂತೆಯೇ ರುದ್ರಪ್ರಿಯ (ಲಂಬ ವರದೇವತೆ) ಕೃತಿಗಳನ್ನು ನಿರೂಪಿಸಿದರು. 

Advertisement

ಪ್ರಧಾನ ರಾಗ ತೋಡಿ (ಎಂದುಕು ದಯರಾಮ). ಒಳ್ಳೆಯ ರಾಗಾಲಾಪನೆ. ನೆರವಲ್‌ ಮತ್ತು ಸ್ವರ ಕಲ್ಪನೆಗಳ ಪ್ರೌಢಿಮೆಯಿಂದ ಈ ಪ್ರಸ್ತುತಿ ರಸಿಕರ ಮೆಚ್ಚುಗೆ ಪಡೆಯಿತು. ವಯಲಿನ್‌ ಸಹವಾದಕ ಅರುಣಾಚಲ ಕಾರ್ತಿಕ್‌ ಚುರುಕಾದ ಬೆರಳುಗಾರಿಕೆಯಿಂದ ಶ್ರೋತೃಗಳನ್ನು ಗೆದ್ದುಕೊಂಡರು. 
ಮುಂದೆ ಸರಸ್ವತಿ ರಾಗ ವಿಸ್ತಾರ ತಾನಂ. ನಂತರ ಚತುರಸ್ತ ತ್ರಿಪುಟ ತಾಳದಲ್ಲಿ ಇಂಪಾದ ಸುನಾದದಿ ನಿನ್ನನು ಪಾಡುವೆ ಸರಸ್ವತಿ ತಾಯೇ… ಎಂಬ ಪಲ್ಲವಿಯನ್ನು ವಿದ್ವತೂ³ರ್ಣವಾಗಿ ಹಾಡಿದ ಕಲಾವಿದೆ, ಈ ಸ್ವರಚಿತ ಪಲ್ಲವಿಯನ್ನು ಮೂರು ಭಾಷೆಗಳಲ್ಲಿ ಪ್ರಸ್ತುತಪಡಿಸಿದರು. 

ಕಲ್ಯಾಣಿಯ ಗೃಹಭೇದ ತಿಲ್ಲಾನವನ್ನು ನಿಪುಣತೆಯಿಂದ ಹಾಡಿ ಅನಂತರ ರಾಜಸ್ಥಾನದ ಜಾನಪದ ಖವ್ವಾಲಿಯನ್ನು (ದಮಾನಂ…) ಹಾಡಿ ಇಲ್ಲಿಯ ಸಂಪ್ರದಾಯಸ್ಥ ರಸಿಕರ ಹುಬ್ಬೇರುವಂತೆ ಮಾಡಿದರು. ಮಂಗಳದೊಂದಿಗೆ ಕಛೇರಿ ಮುಕ್ತಾಯವಾಯಿತು. ಉತ್ತಮ ಮೃದಂಗ ವಾದನದಿಂದ ಸುನಾದಕೃಷ್ಣ ಅಮೈ ಕಛೇರಿಯ ಯಶಸ್ಸಿನಲ್ಲಿ ಸಹಭಾಗಿಯಾದರು. 

ಸರೋಜಾ ಆರ್‌. ಆಚಾರ್ಯ 

Advertisement

Udayavani is now on Telegram. Click here to join our channel and stay updated with the latest news.

Next