Advertisement

ಸಂಗೀತ ಪರಿಷತ್‌ ರಜತಪಥದ ಹೆಜ್ಜೆಗಳು

12:30 AM Mar 22, 2019 | |

ಕಾಲು ಶತಮಾನದ ಹಿಂದೆ ಮಂಗಳೂರಿನಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕಾಗಿಯೇ 1993ರಂದು ಹುಟ್ಟಿಕೊಂಡ ಸಂಸ್ಥೆಯೇ ಸಂಗೀತ ಪರಿಷತ್‌ (ರಿ.). ಸಾರ್ಥಕ ಸಂಭ್ರಮದ 25 ವರ್ಷಗಳನ್ನು ಈ ಬಾರಿ (2018-19ರಲ್ಲಿ) ಪೂರ್ಣಗೊಳಿಸುವುದಕ್ಕೆ ಸಜ್ಜಾಗಿ ನಿಂತಿದೆ. ಈ ರಜತ ಸಂಭ್ರಮದ ಹೆಜ್ಜೆಗಳನ್ನು ವೈಶಿಷ್ಟ್ಯಪೂರ್ಣವಾಗಿ, ಮೌಲ್ಯಯುತವಾಗಿ ಆಚರಿಸುತ್ತಾ ಬರುತ್ತಿದ್ದು, ಮಾ. 24ರಂದು ಅದರ ವಿಧ್ಯುಕ್ತ ಮಂಗಳಾಚರಣೆಯನ್ನೂ ಯೋಜಿಸುತ್ತಿದೆ. 

Advertisement

ಮಂಗಳೂರಿನ ಡಾ| ಸಿ.ಆರ್‌. ಬಲ್ಲಾಳರ ಸಾರಥ್ಯದಲ್ಲಿ ಉದ್ಘಾಟನೆಗೊಂಡು ಈ ಸಂಗೀತ ಸಂಸ್ಥೆ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳ ಬಗ್ಗೆ ಹೆಚ್ಚು ಚಿಂತಿಸದೆ, ಕಲಾಮಾತೆಯ ಅನುಗ್ರಹ, ಸಾರ್ವಜನಿಕ ಮಹಾಶಯರ ಬೆಂಬಲ, ಪ್ರೀತಿ, ವಿಶ್ವಾಸಗಳನ್ನೇ ಆಧರಿಸಿ, ನಮ್ಮ ಪ್ರದೇಶದ ಸಂಗೀತ ಕಲಿಕಾ ವಿದ್ಯಾರ್ಥಿಗಳಿಗೆ, ಗುರುಗಳಿಗೆ, ಕಲಾವಿದರಿಗೆ ಹಾಗೂ ರಸಿಕರಿಗೆ ಅತ್ಯುತ್ತಮ ಮಟ್ಟದ ಸಂಗೀತ ಕೇಳ್ಮೆ, ವೇದಿಕೆ ಹಾಗೂ ಕಲಿಕೆಗಳನ್ನು ಶಾಸ್ತ್ರೀಯ ಚೌಕಟ್ಟಿನಲ್ಲೇ ಒದಗಿಸಿಕೊಡಲು ನೆರವಾಗುವ ಸದುದ್ದೇಶದಿಂದ, ಯಾವುದೇ ಶುಲ್ಕವಿಲ್ಲದೆ, ನಿಸ್ಪೃಹತೆಯಿಂದ ನಿರಾಂತಕವಾಗಿ ನಡೆದು ಬಂದಿದೆ. ಹಲವು ಪ್ರತಿಷ್ಠಿತ ವಿದ್ವಾಂಸರುಗಳಿಂದ, ಯುವ ಪ್ರತಿಭೆಗಳಿಂದ ಗಾಯನ, ವಾದನ ಕಛೇರಿಗಳು, ವೈವಿಧ್ಯಮಯ ಹಿಮ್ಮೇಳ ಕಲಾವಿದರ ಸಾಥ್‌, ವಿದ್ಯಾರ್ಥಿಗಳಿಗಾಗಿ 2 ಹಂತದ ಶಾಸ್ತ್ರೀಯ ಸಂಗೀತ ಸ್ಪರ್ಧೆಗಳು, ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಹಿಗ್ಗಿಸಲು ಅನುಭವಿ ಕಲಾವಿದರುಗಳಿಂದ ಸಂಗೀತ ಶಿಬಿರಗಳು, ಶೈಕ್ಷಣಿಕ ಕಾರ್ಯಕ್ರಮಗಳಾಗಿ ಶಾಲೆಗಳಲ್ಲಿ ರಾಗಜ್ಞಾನ ಸೌರಭ, ಅಲ್ಲದೆ ಕಲಾವಿದರಿಗೆ ಸರಳ ಸಮ್ಮಾನಗಳು, ಸಂಗೀತ ಕೇಳ್ಮೆಗೆ ಹಿತವೆನಿಸುವ ಸಭಾಂಗಣ, ಧ್ವನಿಬೆಳಕಿನ ವ್ಯವಸ್ಥೆಗಳು, ಭರ್ಜರಿ ಭೋಜನ, ಉಪಹಾರಗಳು, ನಿಸ್ವಾರ್ಥ ಸೇವೆಗೈಯುವ ಆತ್ಮೀಯ ಸ್ವಯಂಸೇವಕರ ದಂಡು, ಸಭೆಯಲ್ಲೇ ಕುಳಿತು ಕಾರ್ಯಕ್ರಮದ ಒಪ್ಪ ಓರಣವನ್ನು ವಿಶ್ಲೇಷಿಸುತ್ತಾ ತಿಳಿಹೇಳುವ ಅಧ್ಯಕ್ಷರ ಮೇಲ್ವಿಚಾರಣೆ, ಪಾರದರ್ಶಕವಾಗಿ ಎಲ್ಲಾ ಸದಸ್ಯರುಗಳಿಗೂ ತಲುಪಿಸುತ್ತಿರುವ ಸಂಸ್ಥೆಯ ಹಣದ ವಹಿವಾಟಿನ ಪರಿಚಯ, ಪ್ರಾಯೋಜಕತ್ವ ವಹಿಸಿದ ವಿತ್ತೀಯ ಸಂಸ್ಥೆಗಳ, ದಾನಿಗಳ ಸಂಪೂರ್ಣನೆರವು, ಸಂಗೀತ ಶ್ರವಣ ಸುಖಕ್ಕಾಗಿಯೇ ಧಾವಿಸಿ ಬರುವ ರಸಿಕಗಡಣ-ಇವೆಲ್ಲವೂ ಈ ಸಂಸ್ಥೆ ಕಳೆದ 24 ವರ್ಷಗಳಿಂದ ಈ ಕ್ಷೇತ್ರದಲ್ಲಿ ಊರಿದ ಗಟ್ಟಿಯಾದ ಹೆಜ್ಜೆಗಳಾಗಿದ್ದು ಈ ರಜತಪಥದಲ್ಲಿ ಇದರೊಂದಿಗೆ ಇನ್ನಿತರ ಕೆಲವು ನವೀನ ಸಾಧ್ಯತೆಗಳೂ ಕಾಣಿಸಿಕೊಂಡದ್ದು ಈ ಸಂಸ್ಥೆಯ ತ್ರಿವಿಕ್ರಮ ಬೆಳವಣಿಗೆಯ ಒಂದು ಚೋದ್ಯ. ಈ ರಜತ ಸಂಭ್ರಮದ ಕಿರೀಟಕ್ಕೆ ಬೆಂಗಳೂರಿನ ಲಲಿತಕಲಾ ಮಂದಿರ ಲಲಿತಕಲಾ ಕುಸುಮ ಬಿರುದನ್ನು ಬೆಳ್ಳಿಗರಿಯೋಪಾದಿಯಲ್ಲಿ ಪ್ರದಾನ ಮಾಡಿದೆ ಎಂಬುದು ಸಂತೋಷದ ಸಂಗತಿ. 

– ವಿ. ಪ್ರತಿಭಾ ಎಂ.ಎಲ್‌. ಸಾಮಗ 
 

Advertisement

Udayavani is now on Telegram. Click here to join our channel and stay updated with the latest news.

Next