ಬೆಂಗಳೂರು: ಕೋವಿಡ್ ಸೋಂಕು ಪ್ರಪಂಚದ ಸ್ಥಿತಿಗತಿಗಳನ್ನೇ ಅಲ್ಲೋಲ ಕಲ್ಲೋಲ ಮಾಡಿದೆ. ಈ ಸೋಂಕಿನಿಂದ ನಾವು ಕಂಡು ಕೇಳರಿಯದ ಸಾವು ನೋವುಗಳು ಸಂಭವಿಸಿವೆ. ಅಲ್ಲದೆ ಕೆಲವೊಂದು ಹೊಸ ಹೊಸ ಪದಗಳು ಕೂಡ ಈ ಕೋವಿಡ್ ನಿಂದ ಪರಿಚಯವಾಗಿವೆ. ವಿಶೇಷ ಅಂದ್ರೆ ಬೆಂಗಳೂರಿನ ಸಂಗೀತ ನಿರ್ದೇಶಕರೊಬ್ಬರು ತಮ್ಮ ಬೆಕ್ಕು ಮತ್ತು ನಾಯಿಗಳಿಗೆ ಕೋವಿಡ್ ಸಂಬಂಧಿತ ಹೆಸರುಗಳನ್ನು ನಾಮಕರಣ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಹೌದು ಡಾ. ಕಿರಣ್ ತೋಟಂಬೈಲು ಎಂಬುವವರು ತಮ್ಮ ಮನೆಯಲ್ಲಿ ಸಾಕಿರುವ ಸೈಬೀರಿಯನ್ ಹಸ್ಕಿ ನಾಯಿಗೆ ಕೋವಿಶೀಲ್ಡ್ ಹಾಗೂ ಪರ್ಷಿಯನ್ ಕ್ಯಾಟ್ ಬೆಕ್ಕಿಗೆ ಕೋವ್ಯಾಕ್ಸಿನ್ ಎಂದು ಹೆಸರಿಟ್ಟಿದ್ದಾರೆ. ಕಿರಣ್ ಕೇವಲ ವೈದ್ಯರಲ್ಲದೆ ಇವರು ಸಂಗೀತ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಉಪೇಂದ್ರ ನಟನೆಯ ಐ ಲವ್ ಯೂ ಸಿನಿಮಾ ಮತ್ತು ಚಿ.ತು ಯುವಕರ ಸಂಘ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.
ಅಲ್ಲದೆ ಸದ್ಯ ಡಾ.ಕಿರಣ್ ಒಲವೇ ಮಂದಾರ-2 ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಒಟ್ಟಾರೆ ತಮ್ಮ ಸಾಕು ಪ್ರಾಣಿಗಳಿಗೆ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಎಂದು ನಾಮಕರಣ ಮಾಡಿರುವುದು ಎಲ್ಲರ ಗಮನ ಸೆಳೆದಿದೆ.