ಮೈಸೂರು: ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ 3ನೇ ಘಟಿಕೋತ್ಸವ ಸಮಾರಂಭ ಗುರುವಾರ ನಡೆಯಲಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿವಿ ಕುಲಪತಿ ಡಾ.ಸರ್ವಮಂಗಳಾ ಶಂಕರ್, ಈ ಬಗ್ಗೆ ಮಾಹಿತಿ ನೀಡಿದರು.
ರಾಜ್ಯಪಾಲ ವಜುಬಾಯಿ ವಾಲಾ ಅವರು ಅಧ್ಯಕ್ಷತೆ ವಹಿಸಲಿದ್ದು, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅತಿಥಿಗಳಾಗಿ ಭಾಗವ ಹಿಸಲಿದ್ದಾರೆ.
ಅಂತಾರಾಷ್ಟ್ರೀಯ ಖ್ಯಾತಿಯ ಮೃದಂಗ ವಿದ್ವಾನ್ ಡಾ.ಉಮಾಯಾಳ್‌ಪುರಂ ಕೆ.ಶಿವರಾಮನ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಪದ್ಮಶ್ರೀ ರಾ.ಸತ್ಯನಾರಾಯಣ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಸಂಗೀತ ವಿವಿಯ ತೃತೀಯ ಘಟಿಕೋತ್ಸವದಲ್ಲಿ 26 ಮಹಿಳೆಯರು ಹಾಗೂ 3 ಪುರುಷರು ಸೇರಿದಂತೆ 29 ಮಂದಿ ಪದವಿ ಸ್ವೀಕರಿಸಲಿದ್ದಾರೆ. ಎಲ್ಲಾ 29 ವಿದ್ಯಾರ್ಥಿಗಳು ಕರ್ನಾಟಕ ಸಂಗೀತ ಗಾಯನ, ಹಿಂದುಸ್ಥಾನಿ ಸಂಗೀತ ಗಾಯನ, ಕರ್ನಾಟಕ ವಾದ್ಯ ಸಂಗೀತ (ವೀಣೆ), ಹಿಂದುಸ್ಥಾನಿ ವಾದ್ಯ ಸಂಗೀತ (ತಬಲ) ಹಾಗೂ ನೃತ್ಯ(ಭರತನಾಟ್ಯ) ವಿಭಾಗಗಳಲ್ಲಿ ಪದವಿ ಸ್ವೀಕರಿಸಲಿದ್ದಾರೆ.