Advertisement

ಮೈಸೂರು ಸಂಗೀತ ವಿದ್ಯಾಲಯ: ಪುರಂದರದಾಸ, ತ್ಯಾಗರಾಜರ ಆರಾಧನೆ

03:44 PM Mar 16, 2017 | |

ಮುಂಬಯಿ: ಶ್ರೀ ಪುರಂದರ ದಾಸರು ಮತ್ತು ಶ್ರೀ ತ್ಯಾಗರಾಜರು ನಾದಋಷಿಗಳು. ಋಷಿಮುನಿಗಳು ವೇದೋ ಪಾಸಕರಾದರೆ, ಈ ಸಂಗೀತ ಸಂತದ್ವಯರು ನಾದೋಪಾಸಕರು. ಅನೇಕ ಕೃತಿಗಳನ್ನು ರಚಿಸಿ ತಮ್ಮ ನಾದೋಪಾಸನೆಯಿಂದ ಭಗವಂತನನ್ನು ಸಾಕ್ಷಾತ್ಕರಿಸಿಕೊಂಡಿದ್ದಾರೆ. ಇಬ್ಬರ ಕೃತಿಗಳಲ್ಲೂ ವೇದ ಉಪನಿಷತ್ತುಗಳ ಸಾರಾಂಶ ಅಡಗಿದೆ. ಪುರಂದರದಾಸರ ಕೃತಿಗಳನ್ನು ಪುರಂದರೋಪನಿಷತ್‌ ಎಂದೇ ಕರೆದಿದ್ದಾರೆ ಎಂದು ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ. ಎನ್‌. ವೆಂಕಟನಾರಾಯಣ ಅವರು ಅಭಿಪ್ರಾಯಪಟ್ಟರು.

Advertisement

ಮೈಸೂರು ಸಂಗೀತ ವಿದ್ಯಾಲಯ ಮುಂಬಯಿ ವತಿಯಿಂದ ಇತ್ತೀಚೆಗೆ ಮೈಸೂರು ಸಂಗೀತ ವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಶ್ರೀ ಪುರಂದರದಾಸ ಮತ್ತು ಶ್ರೀ ತ್ಯಾಗರಾಜ ಆರಾಧನೋತ್ಸವದಲ್ಲಿ ತ್ಯಾಗರಾಜರ ಮೇಲೆ ಶ್ರೀ ಪುರಂದರ ದಾಸರ ಪ್ರಭಾವ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದ ಅವರು, ಪುರಂದರ ದಾಸರ ಅನಂತರ  ಬಂದ ತ್ಯಾಗರಾಜರು ಪುರಂದರದಾಸರಿಂದ ಪ್ರಭಾವಿತರಾದರೂ ಇಬ್ಬರಲ್ಲೂ ಸ್ವಾಮ್ಯತೆ ಇದೆ. ಭಗವನ್ಮಾಮ ಸಂಕೀರ್ತನೆ ಪ್ರಚಾರವೇ ಇಬ್ಬರ ಗುರಿಯಾಗಿದ್ದಿತ್ತು. ಕರ್ನಾಟಕ ಸಂಗೀತಕ್ಕೆ ಅದ್ವಿತೀಯ ಕೊಡುಗೆಯನ್ನು ಕೊಟ್ಟಿದ್ದಾರೆ ಎಂದರು.

ಇದಕ್ಕೆ ಪೂರಕವಾಗಿ ಕರ್ನಾಟಕ ಕಲಾಶ್ರೀ ವಿದುಷಿ ಉಮಾ ನಾಗಭೂಷಣ್‌, ಸೌಮ್ಯಾ ಪ್ರಶಾಂತ್‌, ಗಾಯತ್ರಿ ಪ್ರಕಾಶ್‌, ಅರುಣಾ ದುವ್ವರಿ, ಸುಧಾಮಣಿ, ರಾಮಕೃಷ್ಣ, ಪುರಂದರ ದಾಸ ಮತ್ತು ತ್ಯಾಗರಾಜರ ಸಾಮ್ಯತೆಯ ಕೀರ್ತನೆಗಳನ್ನು ಗಾಯನದ ಮೂಲಕ ಪ್ರಸ್ತುತಪಡಿಸಿದರು.

ಗೌರವ ಅತಿಥಿಯಾಗಿ ಪಾಲ್ಗೊಂಡ ಶ್ರೀ ಪುರಂದರ ದಾಸರ ಆರಾಧನಾ ಟ್ರಸ್ಟ್‌ ಇದರ ಪ್ರಧಾನ ಕಾರ್ಯದರ್ಶಿ ಎಲ್‌. ರಾಜಾರಾಮ್‌ ಅವರು ಮಾತನಾಡಿ, ಬೆಂಗಳೂರು ಮತ್ತು ಮುಂಬಯಿಯಲ್ಲಿ ಸತತವಾಗಿ ಸಂಗೀತ ಸೇವೆಯನ್ನು ನಡೆಸಿಕೊಡುವ ಮೈಸೂರು ಸಂಗೀತ ವಿದ್ಯಾಲಯದ ಸಾಧನೆ ಅನನ್ಯವಾಗಿದೆ. ವಿದ್ಯಾಲಯದ ಯೋಜನೆಗಳಿಗೆ ಯಶಸ್ಸು ಸಿಗಲಿ ಎಂದು ಹಾರೈಸಿದರು. 

ವಿದ್ವಾನ್‌ ಚಂದ್ರಮೌಳಿ ಅವರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾಲಯದ ವಿದ್ಯಾರ್ಥಿಗಳಿಂದ ಸಂಗೀತ ಸೇವೆ ನಡೆಯಿತು. ಮಧ್ಯಾಹ್ನ ವಿದ್ಯಾರ್ಥಿ ವೃಂದದ ಶಾಸ್ತ್ರೀಯ ಸಂಗೀತವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಇದೇ ಸಂದರ್ಭದಲ್ಲಿ ಶ್ರೀ ಕೃಷ್ಣಲೀಲಾ ತರಂಗಣಿಯ ಸಂಗೀತ ರೂಪಕವು ಸೌಮ್ಯಾ ಪ್ರಶಾಂತ್‌, ಗಾಯತ್ರಿ ಪ್ರಕಾಶ್‌, ಅರುಣಾ ದುವ್ವರಿ ಅವರು ಪ್ರಸ್ತುತಪಡಿಸಿದರು. ಉಮಾ ನಾಗಭೂಷಣ್‌ ಸ್ವಾಗತಿಸಿದರು.

Advertisement

ಅಶ್ವಿ‌ನಿ ಮಹೇಶ್‌ ಅವರು ಅತಿಥಿಗಳನ್ನು ಪರಿಚಯಿಸಿದರು. ನಾಗಭೂಷಣ್‌ ಅವರು ವಂದಿಸಿದರು. ಅಕ್ಷತಾ, ಡಾ| ರೇಖಾ ಪರಮೇಶ್‌ ಅವರು ಕಾರ್ಯಕ್ರಮ ನಿರ್ವಹಿಸಿದರು. ಶ್ರೀ ರಾಮಮಂಡಲಿಯ ಅಧ್ಯಕ್ಷ ಕೆ. ಶಂಕರ್‌ ಉಪಸ್ಥಿತರಿದ್ದರು. ಬಿ. ಆರ್‌. ಮಂಜುನಾಥ್‌, ಶಶಿಕಲಾ, ಗುರುಪ್ರಸಾದ್‌, ಚೈತನ್ಯ ಶ್ರೀಧರ್‌, ಕೃಷ್ಣಕಾಂತ್‌, ಶಿವಣ್ಣ ಮೊದಲಾದವರು ಸಹಕರಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next