Advertisement

ಸಂಗೀತ -ಸಾಹಿತ್ಯ ಮತ್ತು ಕಷ್ಟ-ಸುಖ!

10:40 PM Sep 15, 2019 | Sriram |

“ಖುಷಿಯಾಗಿದ್ದಾಗ ನಾವು ಸಂಗೀತವನ್ನು ಆಸ್ವಾದಿಸುತ್ತೇವೆ. ಆದರೆ, ದುಃಖದಲ್ಲಿದ್ದಾಗ ಅದರಲ್ಲಿನ ಸಾಹಿತ್ಯ ನಮಗೆ ಅರ್ಥವಾಗುತ್ತದೆ’ ಎಂಬ ಮಾತಿದೆ. ಸಂತೋಷದ ಹಾಡುಗಳೂ ಹಾಗೆಯೇ. ಸ್ವಲ್ಪ ವೇಗದ, ಉತ್ಸಾಹದ ಧಾಟಿಯಲ್ಲಿರುತ್ತವೆ. ದುಃಖದ ಹಾಡುಗಳು ನಿಧಾನವಾಗಿ ಸಾಗುತ್ತವೆ. ಬದುಕೇ ಒಂದು ಸಂಗೀತ ಎಂದುಕೊಂಡರೆ, ಖುಷಿಯಲ್ಲಿರುವಾಗ ಕ್ಷಣಗಳು ಬೇಗ ಬೇಗನೆ ಸರಿದುಹೋಗುತ್ತವೆ. ದುಃಖದ ಸನ್ನಿವೇಶಗಳು ಬೇಗ ಕರಗಿ ಹೋಗುವುದೇ ಇಲ್ಲ.

Advertisement

ಕಷ್ಟಗಳು ಹಾಗೂ ದುಃಖ ನಮ್ಮ ಮನಸ್ಸನ್ನು ಕರಗಿಸಿ ಬದುಕಿನ ಸಾಹಿತ್ಯವನ್ನು ಅರ್ಥವಾಗಿಸುತ್ತವೆ. ಸಂತೋಷ ಬದುಕಿಗೆ ಉತ್ತೇಜನ. ಅದೊಂದು ಸುಮಧುರ ಸಂಗೀತದಂತೆ.

ಪ್ರೀತಿಪಾತ್ರರ ಅಗಲಿಕೆಯ ಸಂದರ್ಭವನ್ನು ನಾವು ಹೇಗೆ ಎದುರಿಸುತ್ತೇವೆ? ಅದೊಂದು ಕಷ್ಟಕರ ಸನ್ನಿವೇಶ. ಯಾರಾದರೂ ನಮ್ಮವರು ತೀರಿಕೊಂಡರೆ ಸ್ಥಿತಿ ಹೇಗಿರುತ್ತದೆ? ಎಲ್ಲವೂ ಸ್ತಬ್ಧವಾಗುತ್ತವೆ. ಮೌನದ್ದೇ ಕಾರುಬಾರು. ಅಳು, ಕಣ್ಣೀರು, ಮತ್ತೂಮ್ಮೆ ಮೌನ. ಅದು ದುಃಖದ ಹಾಡು. ಆ ಹೊತ್ತಿನಲ್ಲಿ ಅಗಲಿದ ವ್ಯಕ್ತಿಯೊಡನೆ ಇದ್ದ ನಮ್ಮ ಒಡನಾಟ, ಅವರಿಗೆ ನಮ್ಮಿಂದ ಉಂಟಾಗಿದ್ದ ಬೇಸರ, ನಾವು ಮಾಡಬೇಕಾಗಿದ್ದ, ಮಾಡಲಾಗದೆ ಉಳಿದ ಕರ್ತವ್ಯ ಅಥವಾ ಉಪಕಾರ ಅಥವಾ ಸೇವೆ ಇನ್ನೂ ಏನೇನೋ-ಎಲ್ಲವೂ ತಲೆಯಲ್ಲಿ ಓಡಾಡತೊಡಗುತ್ತದೆ. ಕೆಲವೊಮ್ಮೆ ಪಾಪ ಪ್ರಜ್ಞೆ, ಅನಾಥಭಾವ, ನಮ್ಮ ಬಗೆಗೆ ತಿರಸ್ಕಾರ ಅಥವಾ ಮತ್ತೇನೋ ಒಂದು ಭಾವ ಮೂಡಬಹುದು. ಸಂಬಂಧಾನುಸಾರ.

ಸಂತೋಷದ ಸನ್ನಿವೇಶಗಳು ಹಾಗಲ್ಲ. ಸುಂದರ, ರಮ್ಯ, ಮನೋಹರವಾದ ಸ್ಥಳಕ್ಕೆ ಹೋದಾಗ ನಮ್ಮನ್ನೇ ನಾವು ಮರೆಯುತ್ತೇವೆ. ಅದ್ಭುತ ರುಚಿಯ ಖಾದ್ಯವೇನಾದರೂ ಸಿಕ್ಕರೆ, ಹಂಚಿ ತಿನ್ನುವುದರ ಬಗ್ಗೆ ಬಹಳ ನಿಧಾನವಾಗಿ ಹೊಳೆಯುತ್ತದೆ. ಅದ್ಭುತವಾದ ಸಿನೆಮಾ ಒಂದನ್ನು ವೀಕ್ಷಿಸುವಾಗ ಉಳಿದೆಲ್ಲವೂ ಮರೆತು ಹೋಗಬಹುದು. ದೊಡ್ಡ ಮೊತ್ತದ ಹಣವೇನಾದರೂ ಸಿಕ್ಕರೆ ಸಾಲ ಕೊಟ್ಟವರು ಮರೆತು ಹೋಗಬಹುದು. ದೊಡ್ಡ ಸಮ್ಮಾನವೇನಾದರೂ ದೊರೆತರೆ ನಾವು ನಡೆದು ಬಂದ ದಾರಿ ಮಸುಕಾಗಿ ಕಾಣಬಹುದು. ಆದರೆ, ಎಲ್ಲವೂ ಅಲ್ಪಕಾಲಿಕ. ಸಂತೋಷ ಬಹಳ ಬೇಗ ಮಾಯವಾಗುತ್ತದೆ. ಏಕೆಂದರೆ, ಸಂತೋಷ ಅಂಗೈಯಲ್ಲಿ ಹಿಡಿದುಕೊಂಡ ಕೂಡಲೇ ಕರಗಿಬಿಡುವ ಆಲಿಕಲ್ಲಿನಂತೆ. ಸಂತೋಷದ ಕರಗುವಿಕೆ ಬೇಗ. ಕಷ್ಟಗಳ ಮುಂದೆ ಸಂತೋಷ ಚಿಕ್ಕದಾಗಿ ಕಾಣುತ್ತದೆ.

ಸಾಹಿತ್ಯ-ಸಂಗೀತ-ಎರಡೂ ಒಂದನ್ನೊಂದು ಬಿಟ್ಟಿರಲಾರವು. ಹಾಗೆಯೇ ಕಷ್ಟ-ಸುಖ. ಎರಡನ್ನೂ ಅನುಭವಿಸುವುದು ನಮಗೆ ಅನಿವಾರ್ಯ. ಅದೇ ಬದುಕು. ಅದೇ ಸಂಗೀತ!

Advertisement

-  ಕುದ್ಯಾಡಿ ಸಂದೇಶ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next