Advertisement

ಗಂಧರ್ವರ ಹೆಸರಿನಲಾಗಲಿ ಸಂಗೀತ ಶಾಲೆ:ವಿಠಲದಾಸ ಕಾಮತ್‌

06:39 PM Dec 27, 2022 | Team Udayavani |

ಕುಂದಗೋಳ: ಸರ್ಕಾರ ಸವಾಯಿ ಗಂಧರ್ವರ ಹೆಸರಿನಲ್ಲಿ ಸಂಗೀತ ಶಾಲೆ ತೆರೆಯುವ ಮೂಲಕ ಸಂಗೀತ ಉಳಿಸಿ ಬೆಳೆಸುವಂತಾಗಬೇಕೆಂದು ಹೊಸದಿಗಂತ ಪತ್ರಿಕೆ ಹುಬ್ಬಳ್ಳಿ ಮುಖ್ಯಸ್ಥರಾದ ವಿಠಲದಾಸ ಕಾಮತ ಹೇಳಿದರು.

Advertisement

ಪಟ್ಟಣದ ಹರಭಟ್ಟ ಮಹಾವಿದ್ಯಾಲಯದ ರಂಗಮಂದಿರದಲ್ಲಿ ಸೋಮವಾರ ದಿ| ಸವಾಯಿ ಗಂಧರ್ವ ಸ್ಮಾರಕ ವಿಶ್ವಸ್ಥ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಸಂಗೀತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತೀಯ ಸಂಗೀತದ ಪವಿತ್ರ ಭೂಮಿ ಕುಂದಗೋಳ. ಈ ನೆಲದ ಸವಾಯಿ ಗಂಧರ್ವರು ಜಾಗತಿಕ ಮಟ್ಟದಲ್ಲಿ ಸಂಗೀತ ಬೆಳೆಸಿದ್ದಾರೆ. ಪಾಶ್ಚಾತ್ಯ ಸಂಗೀತದಲ್ಲಿ ಅಬ್ಬರವಿದೆ, ಭಾರತೀಯ ಸಂಗೀತದಲ್ಲಿ ಹೃದಯಕ್ಕೆ ತಲುಪುವ ಮಾಧುರ್ಯವಿದೆ. ಸಂಗೀತಕ್ಕೆ ಚಿಕಿತ್ಸಕ ಗುಣವಿದೆ. ಯಮನ್‌ ಕಲ್ಯಾಣಿ ರಾಗದ ಮೂಲಕ ಮಾನಸಿಕ ಖನ್ನತೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಹೀಗೆ ಅನೇಕ ರಾಗಗಳಲ್ಲಿ ತನ್ನದೆಯಾದ ಶಕ್ತಿ ಅಡಗಿದೆ.

ಇಂದಿನ ದಿನಮಾನಗಳಲ್ಲಿ ಮಕ್ಕಳು ಎಲ್ಲದಕ್ಕೂ ಮೊಬೈಲ್‌ ಅವಲಂಬಿತರಾಗಿದ್ದಾರೆ. ಮಕ್ಕಳನ್ನು ಸಂಗೀತ, ಕಲೆ, ಕ್ರೀಡೆಗಳಲ್ಲಿ ತೊಡಗಿಸಿ ಈ ಭೂಮಿಯ ಮಣ್ಣಿನ ಸ್ಪರ್ಶ ತಲುಪಿಸಬೇಕೆಂದರು. ಧಾರವಾಡ ಆಕಾಶವಾಣಿ ಕಾರ್ಯಕ್ರಮಾಧಿಕಾರಿ ಶರಣಬಸವ ಚೋಳಿನ ಅವರು ಮಾತನಾಡಿ, ಜಿಲ್ಲೆಯಲ್ಲಿ ಸಂಗೀತದ ಕಂಪು ಇರುವುದು ಕುಂದಗೋಳ ಹಾಗು ಗದಗದಲ್ಲಿ. ಹೀಗಾಗಿ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಜನರು ಬರಬೇಕಿತ್ತು.

ವಿಶೇಷವಾಗಿ ಮಹಿಳೆಯರು ಕಡಿಮೆ ಇರುವುದು ವಿಷಾದನೀಯ. ಸಂಗೀತದ ಮೂಲಕ ಸಂಸ್ಕಾರ ಹೊಂದಬಹುದು. ಈ ನಿಟ್ಟಿನಲ್ಲಿ ಆಕಾಶವಾಣಿ ಅನೇಕ ಕಾರ್ಯಕ್ರಮ ನಡೆಸುತ್ತಿದೆ. ಈ ಭಾಗ ಅನೇಕ ಸಂಗೀತ ದಿಗ್ಗಜರ ಜೊತೆಗೆ ಶಿಶುನಾಳ ಶರೀಫರ ಗುರು ಪರಂಪರೆ ಮೂಲಕ ಪುಣ್ಯಭೂಮಿಯಾಗಿದೆ. ಮಕ್ಕಳಿಗೆ ಸಂಗೀತ ಕಲಿಸುವ ಮೂಲಕ ಗಂಧರ್ವತೆ ಬೆಳೆಸಿರಿ ಎಂದು ಹೇಳಿದರು.

Advertisement

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಎ.ಎಂ. ಕಟಗಿ ಮಾತನಾಡಿ, ನಮ್ಮ ಕಾರ್ಯಕ್ರಮದಲ್ಲಿ ಇಬ್ಬರು ರತ್ನಗಳು ಬಂದಿದ್ದು ಸಂತಸವಾಗಿದೆ. ಇಲ್ಲಿನ ಪ್ರತಿಯೊಬ್ಬರಲ್ಲಿ ಸಂಗೀತ ಅರಿಯುವ ಜ್ಞಾನವಿದೆ ಎಂದರು. ವಾಸುದೇವ ಕಾರೇಕರ ಹಾಗೂ ಶ್ವೇತಾ ಪಾಟೀಲ ಗಾಯನ ಪ್ರಸ್ತುತಪಡಿಸಿದರು. ಕೃಷ್ಣಕುಮಾರ ಕುಲಕರ್ಣಿ ತಬಲಾ, ಚಿದಂಬರ ಜೋಶಿ ಹಾರ್ಮೋನಿಯಂ ಹಾಗೂ ಗಾಯತ್ರಿ ಕುಲಕರ್ಣಿ ಸಿತಾರ ವಾದನದ ಮೂಲಕ ಸಂಗೀತ ಸೇವೆ ಮಾಡಿದರು.

ಶಾಲೆಯ ಅಧ್ಯಕ್ಷ ಟಿ.ಎಸ್‌. ಗೌಡಪ್ಪನವರ, ಎಂ.ಎನ್‌. ತಡಸೂರ, ಅಶೋಕ ನಾಡಗೇರ, ಆರ್‌ .ಐ. ಬ್ಯಾಹಟ್ಟಿ, ನಾಗರಾಜ ದೇಶಪಾಂಡೆ, ಶಂಕರಗೌಡ ದೊಡ್ಡಮನಿ, ಸಿದ್ದಲಿಂಗೇಶ ಧಾರವಾಡಶೆಟ್ಟರ, ಅಭಿಷೇಕ ಪಾಟೀಲ, ಚರಂತಯ್ಯ ಹಿರೇಮಠ ಹಾಗೂ ಶಾಲಾ ಶಿಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು. ಶಿಕ್ಷಕ ಎಲ್‌.ಎಲ್‌. ಲಮಾಣಿ ಸ್ವಾಗತಿಸಿದರು. ಎಲ್‌. ಎಸ್‌. ಕೊನೇರಿ ನಿರೂಪಿಸಿದರು. ಬಿ.ಡಿ. ಕಲಾರಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next