Advertisement

ಎಳೆಯ ಮನಸ್ಸುಗಳಲ್ಲಿ  ಸಂಗೀತ ಉಳಿಸುವ ‘ವಿಶ್ವಾಸ’

12:44 PM Nov 23, 2017 | |

ಮಹಾನಗರ: ಸಂಗೀತ ಕಲೆಯನ್ನು ಎಳೆಯ ಮನಸ್ಸುಗಳಲ್ಲಿ ಗಟ್ಟಿಗೊಳಿಸಿ, ಬೆಳೆಸುವ ನಿಟ್ಟಿನಲ್ಲಿ ಪಿಟೀಲುವಾದಕರೊಬ್ಬರು ಮನೆಮನೆಗೆ ತೆರಳಿ ಮಕ್ಕಳಿಗೆ ಉಚಿತ ಪಿಟೀಲು ತರಬೇತಿ ನೀಡುತ್ತಿದ್ದಾರೆ. ಆ ಮೂಲಕ ತಾನು ಕಲಿತ ಕಲೆಯನ್ನು ಇತರರಿಗೂ ಧಾರೆ ಎರೆದು ಕಲಾ ಸಾರ್ಥಕ್ಯ ಮೆರೆದಿದ್ದಾರೆ.

Advertisement

ಯಾವುದೇ ಕಲೆ ಅಧ್ಯಯನಕ್ಕೂ ತಿಂಗಳಿಗೆ ಇಂತಿಷ್ಟು ಹಣ ಪಾವತಿಸಲೇಬೇಕು. ಅದೂ ಐದಾರು ಕಿ. ಮೀ. ದೂರ ದೂರಿಗೆ ತೆರಳಿ ಕಲಾಭ್ಯಾಸ ಮಾಡಬೇಕು. ಅಂಥದ್ದರಲ್ಲಿ ಮಕ್ಕಳ ಬಳಿಗೇ ಬಂದು ಉಚಿತ ಕಲಾಸೇವೆ ನೀಡುವ ಅಶೋಕ ನಗರ ನಿವಾಸಿ, ಕಲಾವಿದ ವಿಶ್ವಾಸಕೃಷ್ಣರ ಕೆಲಸ ಕಲಾ ಕ್ಷೇತ್ರಕ್ಕೆ ಮಾದರಿಯಾಗಿದೆ. ಮಕ್ಕಳಲ್ಲಿ ಮೂಲ ಸಂಗೀತವನ್ನು ಗಟ್ಟಿ ಮಾಡುವ ಉದ್ದೇಶದಿಂದಲೇ ಈ ತರಬೇತಿ ಹಮ್ಮಿ ಕೊಳ್ಳಲಾಗುತ್ತಿದೆ.

ಎರಡು ತಿಂಗಳ ತರಬೇತಿ ಪೂರ್ಣ
ವಿಶ್ವಾಸ್‌ ಕೃಷ್ಣ ಅವರು 10 ವರ್ಷದಿಂದ ಪಿಟೀಲು ವಾದಕರಾಗಿದ್ದು, ಪ್ರತಿ ತಿಂಗಳ ಒಂದು ರವಿವಾರ ಉಚಿತ ತರಬೇತಿ ನೀಡಲು ನಿರ್ಧರಿಸಿದ್ದಾರೆ. ಈಗಾಗಲೇ 2 ತಿಂಗಳ ತರಬೇತಿ ಪೂರ್ಣಗೊಂಡಿದ್ದು, ಮುಂದಿನ ತಿಂಗಳುಗಳಿಗೆ 8ಮನೆಗಳನ್ನು ಆಯ್ದುಕೊಳ್ಳಲಾಗಿದೆ.

ಮೊದಲ ತರಬೇತಿ ಅಶೋಕನಗರದ ತಮ್ಮ ನಿವಾಸದಲ್ಲೇ ನಡೆಸಿದ್ದು, ಎರಡನೇ ತರಗತಿಯನ್ನು ಕದ್ರಿಯ ಪ್ರಭಾಚಂದ್ರ ಮಯ್ಯ ಅವರ ಮನೆಯಲ್ಲಿ ಹೇಳಿ ಕೊಟ್ಟಿದ್ದಾರೆ. ತರಬೇತಿ ಬೆಳಗ್ಗೆ 8.30 ರಿಂದ ಆರಂಭವಾಗಿ ಸಂಜೆ 6.30ರ ತನಕ ಮುಂದುವರಿಯುತ್ತದೆ. ಪ್ರಭಾಚಂದ್ರ ಮಯ್ಯರ ಮನೆಯಲ್ಲಿ ಆಯೋಜನೆಗೊಂಡ ಕಾರ್ಯಕ್ರಮದಲ್ಲಿ ಚೆನ್ನೈನ ಪ್ರಸಿದ್ಧ ಹಾಡುಗಾರ ವಿದ್ವಾನ್‌ ಕುನ್ನಕ್ಕುಡಿ ಬಾಲಮುರಳಿಕೃಷ್ಣ ತರಬೇತಿ ನೀಡಿದ್ದರು. ಆಕಾಶವಾಣಿ ಕಲಾವಿದ ವಿದ್ವಾನ್‌ ರವಿಕುಮಾರ್‌ ಕುಂಜೂರ್‌ ಉದ್ಘಾಟಿಸಿದರು. ಗೋಪಾಲ್‌ ಮುದ್ಗಲ್‌, ಕರ್ಣಾಟಕ ಬ್ಯಾಂಕಿನ ಜಿಎಂ ಮಂಜುನಾಥ್‌ ಭಟ್‌, ಪ್ರೊ| ಎಂ.ಎಲ್‌. ಸಾಮಗ, ಕೃಷ್ಣರಾಜ ಮಯ್ಯ, ವಿದ್ವಾನ್‌ ಯತಿರಾಜ ಆಚಾರ್ಯ, ಬ್ಯೂಟಿವಾಲ್‌ ಸ್ಪಾಟ್‌ನ ಸಿಎಂಒ ವೆಂಕಟೇಶ್‌ ಭಟ್‌, ಉಮಾಶಂಕರಿ ಇದ್ದರು.

ಸಂಧ್ಯಾವೇಳೆ ಸಂಗೀತ ಕಛೇರಿ
ದಿನಪೂರ್ತಿ ಪಿಟೀಲು ವಾದನ ತರಬೇತಿ ನಡೆಯುತ್ತದೆ. ಬಳಿಕ ಸಂಗೀತ ಕಛೇರಿ ಆಯೋಜಿಸಲಾಗುತ್ತದೆ. ಪ್ರಭಾತ್‌ ಗೋಖಲೆಯವರ ಸಂಗೀತ ಕಛೇರಿ ಆಯೋಜಿಸಲಾಗಿತ್ತು. ವಿಶ್ವಾಸಕೃಷ್ಣ ಪಿಟೀಲಿನಲ್ಲಿ ಮತ್ತು ಪನ್ನಗ ಶರ್ಮ ಮೃದಂಗದಲ್ಲಿ ಸಹಕರಿಸಿದರು. 

Advertisement

ವಿಠ್ಠಲ್ ರಾಮಮೂರ್ತಿ ಪ್ರೇರಣೆ
ಚೆನೈನ ಪ್ರಸಿದ್ಧ ಸಂಗೀತ ಗುರು ವಿಠ್ಠಲ್ ರಾಮಮೂರ್ತಿ ಮತ್ತು ಯತಿರಾಜ್‌ ಆಚಾರ್ಯ ಮಾರ್ಗದರ್ಶನದೊಂದಿಗೆ ಈ ತರಬೇತಿ ನಡೆಯುತ್ತಿದೆ.ವಿಠ್ಠಲ್ ರಾಮ ಮೂರ್ತಿ ನಿಡ್ಲೆ ಬಳಿಯ ಕಂರ್ಬಿತ್ತಿಲಿನಲ್ಲಿ 18 ವರ್ಷ ಕಾಲ ಇಂತಹ ಉಚಿತ ಶಿಬಿರ ಮಾಡಿ ಮಕ್ಕಳಿಗೆ ಸಂಗೀತ ಕಲಿಯಲು ಪೂರಕ ಅವಕಾಶ ಕಲ್ಪಿಸಿದ್ದರು. ಇದರಿಂದ ಪ್ರೇರಿತರಾಗಿ ಮಕ್ಕಳಲ್ಲಿ ಸಂಗೀತದ ಸುಧೆ ಹರಿಸಲು ಪ್ರಯತ್ನಿಸುತ್ತಿರುವುದಾಗಿ ವಿಶ್ವಾಸ್‌ ಕೃಷ್ಣ ಹೇಳುತ್ತಾರೆ. ಪ್ರಸ್ತುತ ಅವರು ಬ್ಯೂಟಿ ವಾಲ್‌ ಸ್ಪಾರ್ಟ್‌ ಕಂಪೆನಿಯ ಸಿಇಒ ಆಗಿದ್ದಾರೆ

ಮನೆಮನೆಗೆ ತೆರಳಿ ಸಂಗೀತ ಕಲಿಸುವುದರಿಂದ ವಿದ್ಯಾರ್ಥಿಗಳ ಸಮಯವೂ ಉಳಿತಾಯವಾಗುತ್ತದೆ. ಕಲಾವಿದರ ಮನೆಗಳಲ್ಲಿ ಕಲೆಯೊಂದನ್ನು ಮಕ್ಕಳಿಗೆ ಧಾರೆ ಎರೆಯುವುದರಿಂದ ಇಡೀ ಮನೆ ಕಲಾಮಯವಾಗುತ್ತದೆ.
 -ವಿಶ್ವಾಸಕೃಷ್ಣ, ಕಲಾವಿದ

  ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next