Advertisement

ಶ್ರೀಮತಿ ದೇವಿಯವರಿಂದ ಮಿಂಚಿದ ಪೂರಿಯಾಕಲ್ಯಾಣ್‌, ಕೇದಾರ್‌

06:16 PM Jul 18, 2019 | mahesh |

ರಂಜನಿ ಮೆಮೋರಿಯಲ್‌ ಟ್ರಸ್ಟ್‌ ಪ್ರಸ್ತುತ ವರ್ಷದ ಸಂಗೀತ ಕಾರ್ಯಕ್ರಮಗಳನ್ನು ಈ ಬಾರಿ ಮೇ ತಿಂಗಳಿನಿಂದಲೇ ತಿಂಗಳಿಗೊಂದರಂತೆ ಆರಂಭಿಸಿದ್ದು, ಆ ಪ್ರಯುಕ್ತ ಮೊದಲ ಕಾರ್ಯಕ್ರಮ ಮೇ 18ರಂದು ಲತಾಂಗಿಯ ಸಭಾಂಗಣದಲ್ಲಿ ನಡೆಯಿತು. ಇದರಲ್ಲಿ ಶ್ರೀಮತಿದೇವಿಯವರು ಹಿಂದೂಸ್ಥಾನಿ ಸಂಗೀತ ಗಾಯನ ಪ್ರಸ್ತುತ ಪಡಿಸಿದರು.

Advertisement

ಶ್ರೀಮತಿದೇವಿ ಅಂದಿನ ಕಛೇರಿಯಲ್ಲಿ ಎತ್ತಿಕೊಂಡದ್ದು ಪೂರಿಯಾಕಲ್ಯಾಣ್‌ ಮತ್ತು ಕೇದಾರ್‌ ರಾಗಗಳನ್ನು. ಪೂರಿಯಾಕಲ್ಯಾಣ್‌ ರಾಗವನ್ನು ಹಾಡುವುದು ಹೇಗೆ ಕಷ್ಟವೋ ಅದೇ ರೀತಿ ಸರಿಯಾಗಿ ಹಾಡದಿದ್ದಲ್ಲಿ ಕೇಳುವುದೂ ಅಷ್ಟೇ ಕಷ್ಟ. ಪೂರ್ವಾಂಗದಲ್ಲಿ ಪೂರಿಯಾ ಹಾಗೂ ಉತ್ತರಾಂಗದಲ್ಲಿ ಕಲ್ಯಾಣಿಗಳ ಮೇಳವಾದ ಈ ರಾಗ, ವ್ಯಾಕರಣದ ದೃಷ್ಟಿಯಿಂದ ಅಷ್ಟೇನು ಕ್ಲಿಷ್ಟವಾದದ್ದಲ್ಲ. ಕಲ್ಯಾಣ್‌ ಮಂಗಳಕರವಾದ ರಾಗವಾದರೆ, ಪೂರಿಯಾದಲ್ಲಿ ಕಾಣುವುದು ವಿಯೋಗ. ಕಲ್ಯಾಣ್‌ ಎಂದರೆ ರಂಗು-ಬದುಕಿನ ಬಣ್ಣ ಎಂದಾದರೆ, ಪೂರಿಯಾವು ಬಣ್ಣಗಳಿಂದ ವಿಯೋಗ ಹೊಂದಿ ವ್ಯಸನಪಡುವ ಮನಸ್ಸು. ಬರೀ ಕಲ್ಯಾಣ್‌ ಅಥವಾ ಬರೀ ಪೂರಿಯಾ ಹಾಡುವುದು ಕಷ್ಟವಲ್ಲ. ಆದರೆ, ಪೂರಿಯಾಕಲ್ಯಾಣ್‌ ಹಾಡುವಾಗ ಬದುಕಿನ ಚೆಲುವನ್ನು ಆಸ್ವಾದಿಸಿ, ಆರಾಧಿಸುತ್ತಲೇ ಅದರಿಂದ ವಿಯೋಗ ಹೊಂದಿ ವ್ಯಸನಪಡುವ ಮನಸ್ಸನ್ನು ತೋರಿಸಬೇಕು. ಇದೊಂದು ಕಟು ಮಧುರ ಯಾತನೆ. ಪ್ರತಿ ಸ್ವರವನ್ನೂ ಭಾವದಲ್ಲಿ ಅದ್ದಿ ಅದ್ದಿ ಹಾಡದಿದ್ದರೆ, ವ್ಯಾಕರಣದ ಕ್ಲೀಷೆಯಲ್ಲಿ ರಾಗ ಕಳೆದು ಹೋಗಿಬಿಡುತ್ತದೆ. ಕಲಾವಿದನ ಕಲಾಸೃಷ್ಟಿ, ಸೌಂದರ್ಯ ನಿರ್ಮಿತಿಯ ಸೃಷ್ಟಿಶೀಲ ತುಡಿತಗಳಿಗೆ ಸವಾಲೊಡ್ಡುವ ರಾಗ ಇದು. ಈ ಸವಾಲನ್ನು ಚೆನ್ನಾಗಿಯೇ ಸ್ವೀಕರಿಸಿದ ಶ್ರೀಮತಿದೇವಿ ವಿಲಂಬಿತ್‌ ಏಕತಾಲ್‌ನಲ್ಲಿ ಪಂ| ಶ್ರೀಕೃಷ್ಣ ರಾತಾಂಜನಕರ್‌ ಅವರು ರಚಿಸಿದ ಹೋವನ ಲಾಗಿ ಸಾಂಜ ಹಾಗೂ ಧೃತ್‌ ತೀನತಾಲದಲ್ಲಿ ಪಂ|ರಾಮಾಶ್ರಯ ಝಾ ಅವರು ರಚಿಸಿದ ಮನಹರವಾ ಎನ್ನುವ ಅಪರೂಪದ ರಚನೆಗಳನ್ನು ಆಯ್ದುಕೊಂಡಿದ್ದರು.ಶಶಿಕಿರಣ್‌ ಮಣಿಪಾಲ ಅವರ ತಬಲಾ ಹಾಗೂ ಸುಮಂತ್‌ ಭಟ್‌ ಅವರ ಹಾರ್ಮೋನಿಯಂನ ಹೃದ್ಯಮೇಳದೊಂದಿಗೆ ಸುಮಾರು ಒಂದು ಗಂಟೆಕಾಲ ಪೂರಿಯಾಕಲ್ಯಾಣ್‌ ರಾಗಕ್ಕೆ ಅಪೂರ್ವ ಭಾವಸಿಂಚನಗೈದರು.

ಪೂರಿಯಾಕಲ್ಯಾಣ್‌ ರಾಗದ ನಂತರ ಎತ್ತಿಕೊಂಡ ರಾಗ ಕೇದಾರ್‌. ಇದು ಪೂರಿಯಾಕಲ್ಯಾಣದಂತೆ ಪುಂಖಾನುಪುಂಖವಾಗಿ ಸ್ವರ ವಿನಿಕೆಗಳನ್ನು ಚಿತ್ರಿಸಲು ಅವಕಾಶವಿರುವ ರಾಗವಲ್ಲ. ಈ ರಾಗದ ವ್ಯಾಕರಣ ಸಣ್ಣದು. ಆದರೆ ಕೇದಾರ್‌ ರಾಗವು ಮೇಲೆ ನಿಂತು ಕೆಳಗೆ ದೃಷ್ಟಿ ಹಾಯಿಸುವ ರಾಗ. ಈ ರಾಗದಲ್ಲಿ ಸ, ಮ, ಪ, ಧ, ಮೇಲಿನ ಸ ಎಲ್ಲವೂ ದೈವಿಕ ಶ್ರುತಿ ಸ್ವರಗಳು. ಮಣ್ಣ ವಾಸನೆಯನ್ನು ಸೂಸುವ ತೀವ್ರ ಮಧ್ಯಮ ಮಾತ್ರ ಈ ದೈವಿಕ ಸ್ವರಗಳನ್ನು ನೆಲಕ್ಕೆ ಬಂಧಿಸುವ ಕೊಂಡಿ. ಅಡಿಗರ ಯಾವ ಮೋಹನ ಮುರಲಿ ಕರೆಯಿತು ನಿನ್ನ ಮಣ್ಣಿನ ಕಣ್ಣನು ಎಂಬ ಸಾಲಿನಂತೆ, ಸೇಂದ್ರಿಯ ಅನುಭವಗಳನ್ನೆಲ್ಲ ದಿವ್ಯದ ಎತ್ತರಕ್ಕೇರಿಸಿ ಅನುಭಾವವಾಗಿಸುವ ರಾಗವಿದು. ಕೇದಾರ್‌ ನಲ್ಲಿ ಪ್ರೇಮ, ವಿರಹ ಎಲ್ಲವೂ ದಿವ್ಯ. ಅದು ರಾಧಾಕೃಷ್ಣರ ಪ್ರೇಮ. ಈ ದಿವ್ಯ ಅನುಭವವನ್ನು ಮತ್ತೆ ಮತ್ತೆ ದಕ್ಕಿಸಿಕೊಳ್ಳಲು ಪ್ರತಿ ಸ್ವರವನ್ನೂ ತಾರಷಡ್ಜವನ್ನು ಹಚ್ಚುವ ಪಕ್ವತೆ ಹಾಗೂ ನಿಖರತೆಯಿಂದಲೇ ಕಲಾವಿದ ಹಚ್ಚಬೇಕಾಗುತ್ತದೆ. ಇಲ್ಲಿ ತಾರ ಷಡ್ಜದೊಂದಿಗೆ ತಾದಾತ್ಮತೆಯನ್ನು ಹಾಡುಗಾರ ಹೊಂದಿರಬೇಕಾಗುತ್ತದೆ. ಹಾಗಾಗಿ ಅತ್ಯಂತ ಶ್ರುತಿಬದ್ಧ ಹಾಗೂ ಸುರೀಲಿಯುತ ಕಂಠ ತಯಾರಿ ಇಲ್ಲದಿದ್ದರೆ ಕೇದಾರ್‌ ಎದ್ದು ಬರುವುದೇ ಇಲ್ಲ. ಶ್ರೀಮತಿದೇವಿ ತನ್ನ ಶ್ರುತಿಬದ್ಧ ಕಂಠಸಿರಿಯಿಂದ ಕೇದಾರ್‌ ರಾಗಕ್ಕೆ ಜೀವ ತುಂಬಿದರು. ಇದರಲ್ಲಿ ಅವರು ಆಯ್ದುಕೊಂಡದ್ದು ಡಾ|ಅಶ್ವಿ‌ನಿ ಬಿಢೆ ದೇಶಪಾಂಡೆ ಅವರ ರಚನೆಯ ಮಾಲನಿಯಾ ಸಜಚರಿ ಎಂಬ ಮಧ್ಯಲಯ ಝಪ್‌ತಾಲದ ಬಂಧಿಶ್‌ ಹಾಗೂ ಚತರ ಸುಘರ ಬಲ್ಮಾ ಎಂಬ ಧೃತ್‌ ಏಕ್‌ತಾಲ್‌ ನಲ್ಲಿನ ಪಾರಂಪರಿಕ ಬಂಧಿಶ್‌.

ಆ ಬಳಿಕದ ಅವರ ಆಯ್ಕೆ ಪಾರಂಪರಿಕವಾದ ಒಂದು ರಾಗಮಾಲಾ. ರಾಗಮಾಲಾವು ಹಲವಾರು ರಾಗಗಳನ್ನು ಬೆಸೆದು ಮಾಡುವ ರಚನೆಯಾಗಿದ್ದು, ಇದರಲ್ಲಿ ಒಂದರ ಹಿಂದೆ ಇನ್ನೊಂದರಂತೆ ರಾಗಗಳು ಮೂಡಿ ಬರುವುದನ್ನು ಕೇಳುವುದೇ ಒಂದು ಸೊಗಸು. ಶ್ರೀಮತಿದೇವಿ ಹಾಡಿದ್ದು ದುರ್ಗಾ ಮಾತಾ ಭವಾನಿ ದೇವಿ ಎಂದು ರಾಗೇಶ್ರೀಯಲ್ಲಿ ಆರಂಭವಾಗುವ ರಚನೆ.

ನಂತರ ಛಾಂಡು ಲಂಗರ ಮೋರೆ ಭಯ್ನಾ ಎಂಬ ಮೀರಾ ಭಜನ್‌ ಅನ್ನು ಜನಸಮ್ಮೊàಹಿನಿಯಲ್ಲಿ ಹಾಗೂ ಪುರಂದರದಾಸರ ಈ ಪರಿಯ ಸೊಬಗಾವ ದೇವರಲಿ ನಾಕಾಣೆ ಎಂಬ ಹಾಡನ್ನು ಭಾಗೇಶ್ರೀಯಲ್ಲಿ ಹಾಡಿ ಮೆಚ್ಚುಗೆ ಗಳಿಸಿದರು. ಕೊನೆಯಲ್ಲಿ ಭೈರವಿಯ ಅಭಂಗ್‌ನೊಂದಿಗೆ ಮುಕ್ತಾಯವಾದ ಕಾರ್ಯಕ್ರಮ, ಬಹುಕಾಲ ನೆನಪಿನಲ್ಲಿ ಉಳಿಯುವಂತಿತ್ತು. ತಬಲಾದಲ್ಲಿ ಶಶಿಕಿರಣ್‌ ಹಾಗೂ ಹಾರ್ಮೋನಿಯಂನಲ್ಲಿ ಸುಮಂತ್‌ ಅವರ ಒತ್ತಾಸೆ ಸಮರ್ಥವಾಗಿತ್ತು. ತಾನ್‌ಪೂರಾದಲ್ಲಿ ಕು| ಸಮನ್ವಿ ಸಹಕರಿಸಿದ್ದರು.

Advertisement

ಶ್ರುತಿ ಪಲ್ಲವಿ , ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next