Advertisement
ಇತ್ತೀಚಿಗಿನ ಪೀಳಿಗೆಯ ಕರ್ನಾಟಕ ಸಂಗೀತ ಹಾಡುಗಾರರು ಕರ್ನಾಟಕ ಸಂಗೀತದ ಕ್ಲಿಷ್ಟ ಗಮಕಗಳನ್ನು ಶ್ರುತಿಶುದ್ಧವಾಗಿ ಪ್ರಸ್ತುತಿ ಪಡಿಸುವುದಕ್ಕೆ ಹರಸಾಹಸ ಪಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಐಶ್ವರ್ಯಾ ವಿದ್ಯಾ ರಘುನಾಥ್ ಅವರ ಸಾಧನೆ ಅನನ್ಯವಾದುದು. ಸ್ವರ ಸ್ವರಗಳು ಜೀರಿನಲ್ಲೇ ಝೇಂಕರಿಸುತ್ತಾ ರಾಗ ಭಾವ ಲಯಗಳು ಅತ್ಯಂತ ಮನೋಜ್ಞವಾಗಿ ಇವರ ಕಂಠದಿಂದ ಹೊರಹೊಮ್ಮುತ್ತವೆ. ಇವರ ಕಂಠಸಿರಿಯೇ ತಂಬೂರದಂತೆ ಮಿಡಿಯುತ್ತದೆ. ಅತಿ ವಿಳಂಬದಲ್ಲಿ ಇವರು ಆಯ್ದುಕೊಂಡ ಲಲಿತದ ಹಿರಣ್ಮಯೀಂ ಈ ಮಾತಿಗೆ ಸಾಕ್ಷಿ. ದೀಕ್ಷಿತರ ರಚನೆಯ ಆಶಯಕ್ಕೆ ತಕ್ಕಂತೆ ಈ ಕೃತಿ ಪ್ರಸ್ತುತಿಯಲ್ಲಿ ಐಶ್ವರ್ಯ ಗೀತ ವಾದ್ಯಗಳನ್ನು ಮೇಳೈಸಿಕೊಂಡಿದ್ದಾರೆ. ಬಿ. ಎಸ್. ಪ್ರಶಾಂತ್ ಅವರ ಮೃದಂಗ ನುಡಿಸಾಣಿಕೆಯಲ್ಲಿ “ವಾದ್ಯ ವಿನೋದಿನಿ’ ಯ ಹೃದಯಸ್ಪರ್ಶಿ ನಡೆಗಳನ್ನು ಹಿರಣ್ಮಯಿಗೆ ಸಲ್ಲಿಸಿದ್ದಾರೆ. ಅದೊಂದು ವೈಭವದ ನಾದೈಶ್ವರ್ಯದ ಪ್ರಶಾಂತ ಸಂಗೀತ. ಮುಂದೆ ತಾನದೊಂದಿಗೆ ಕುಣಿಸಿದ ಕೀರವಾಣಿಯ ಕಲಿಗಿಯುಂಟೆಯಲ್ಲೂ ಅದ್ಭುತ ಪ್ರಸಕ್ತಿ. “ಸ್ವಾಮಿ ಮುಖ್ಯಪ್ರಾಣ’ ಹಾಡಿನೊಂದಿಗೆ ಮೂಡಿಬಂದ ಯದುಕುಲಕಾಂಬೋಧಿಯ ಮೊರೆ ಮತ್ತು ರಾಗಮಾಲಿಕೆಯಲ್ಲಿ ಮೂಡಿಬಂದ “ದೇವಕಿ ನಂದನ’ದ ಭಕ್ತಿಯ ತೊರೆ ಕೇಳುಗರನ್ನು ಮೀಯಿಸಿತ್ತು. ನೂರಾರು ಬಾರಿ ಕೇಳಿದರೂ ನಗುನಗುತ್ತಾ ಆಮಂತ್ರಿಸುವ “ಕೃಷ್ಣಾ ನೀ ಬೇಗನೆ ಬಾರೋ’ ಹಾಡನ್ನು ಮತ್ತೂ ಕೇಳುವಂತೆ ಮಾಡಿದ ಗೆಯೆ¾ ಐಶ್ವರ್ಯಾ ಅವರದು. ತಾಳ ಲೆಕ್ಕಾಚಾರಗಳನ್ನೆಲ್ಲ ಬದಿಗೊತ್ತಿ ನಾದಾನುಭವಕ್ಕೇ ಪ್ರಾಧಾನ್ಯತೆ ನೀಡಿ ಸಂಗೀತಕ್ಕೆ ನಿಷ್ಠೆ ತೋರಿಸಿದ ಐಶ್ವರ್ಯಾ ಅಪೂರ್ವ ತಾರಾ ಕಲಾವಿದೆ. ಕರ್ನಾಟಕ ಸಂಗೀತದ ಶ್ರುತಿ ಸಂಪತ್ತಿಯನ್ನು ಎತ್ತಿ ಹಿಡಿಯಬಲ್ಲ ಸಮರ್ಥ ಕಲಾವಿದೆ.
ದ್ವಿತೀಯ ದಿನದ ಕಛೇರಿಯನ್ನು ಚೆನ್ನೈಯ ಪ್ರಸನ್ನ ವೆಂಕಟರಾಮ್ ನಡೆಸಿಕೊಟ್ಟರು. ಅವರಿಗೆ ಪಕ್ಕವಾದ್ಯದಲ್ಲಿ ತ್ರಿವೆಂಡ್ರಮ್ ಸಂಪತ್ ವಯಲಿನ್ ಮತ್ತು ಸುನಾದಕೃಷ್ಣ ಅಮೈ ಮೃದಂಗದಲ್ಲಿ ಸಹಕರಿಸಿದರು. ಇದೊಂದು ತ್ರೀ-ಇನ್-ವನ್ ಕಛೇರಿ. ಒಬ್ಬರನ್ನು ಬಿಟ್ಟು ಇನ್ನೊಬ್ಬರಿಲ್ಲ. ಇನ್ನೊಬ್ಬರನ್ನು ಬಿಟ್ಟು ಮೂರನೆಯವರಿಲ್ಲ. ಮೂವರದೂ ರಂಗುರಂಗಾದ ಮಣಿಗಳ ಹೆಣೆಯುವಿಕೆ. ಜಯಂತಸೇನ ಮತ್ತು ಲತಾಂಗಿಯಲ್ಲಿ ಪ್ರಸನ್ನ ಅವರು ತುಣುಕು ತುಣು ಕಾಗಿ ಸಂಗತಿಗಳನ್ನು ಚೆಲ್ಲುತ್ತಾ ಹೊಸೆ ಯುವ ಬಗೆ ಹೊಸದು. ಅದರಲ್ಲೊಂದು ನಾವೀನ್ಯತೆ ಇದೆ. ಸಂಜಯ ರಂತೆ ಒಮ್ಮೊಮ್ಮೆ, ಸಂಗತಿಗಳು ಗಕ್ಕನೆ ನಿಂತು, ಮುಂದಿನ ಸಂಗತಿಗೆ ಎಡೆಮಾಡಿಕೊಡುತ್ತವೆ. ಪ್ರಸನ್ನರದು ಕೇವಲ ರಾಗದ ರೂಪವಲ್ಲ. ಅದು ಸ್ವೇಚ್ಛೆಯಿಂದ ಕುಣಿದಾಡುವ ರಾಗಗಳ ಸಂಚಾರಿ ಮಾರ್ಗ. ಇದು ಇನ್ನೂ ಹೆಚ್ಚು ಸ್ಪಷ್ಟವಾಗಿ ಮನ ಮುಟ್ಟುವಂತೆ ತಟ್ಟಿದ್ದು ಕಾಂಬೋಧಿಯ “ಎವರಿಮಾಟ’ದಲ್ಲಿ. ಇಲ್ಲಿಯ ಸಂಗತಿಗಳು ಪರಸ್ಪರ ಸಂವಾದದಲ್ಲಿ ತೊಡಗಿದಂತೆ ಸಂಭಾಷಿಸುತ್ತಿದ್ದವು. ಒಮ್ಮೆ “ಪ’, ಮತ್ತೂಮ್ಮೆ “ದ’ ದಲ್ಲಿ ಮಾಡಿದ ಕುರೈಪ್ಪುಗಳು, “ದ್ವಾಸುಪಣೌì’ ಗಿಳಿಗಳಂತೆ ಭಕ್ತ ಮತ್ತು ಭಕ್ತ-ಪರಾಧೀನನ ನಡುವೆ ತೊಡಗಿಸಿಕೊಂಡ ಪರಸ್ಪರ ವಾದ-ಸಂವಾದದಂತೆ ಮಾಟವಾಗಿ ಮೂಡಿಬಂದಿದ್ದವು.
Related Articles
Advertisement
ಮಣಿರಂಗು ಮತ್ತು ಮಾರ್ಗ ಹಿಂದೋಳದ ಪ್ರಸ್ತುತಿಗಳಲ್ಲಿ ಅವರು ಮಾಡಿದ ಸವಾಲ್-ಜವಾಬ್ ವರಸೆ ನಿಜಕ್ಕೂ ಮನನೀಯ. ಅವರ ಕನ್ನಡ ಪ್ರಸ್ತುತಿಗಳಲ್ಲಿ ಕೆಲವಾರು ದೋಷಪೂರಿತ ಸಾಹಿತ್ಯಗಳಿದ್ದರೂ ರಾಗ ಲಹರಿಯಲ್ಲಿ ಅವು ತುಸು ಮರೆಯಾದವು ಎನ್ನುವುದಕ್ಕಡ್ಡಿಯಿಲ್ಲ.
ಆದರೂ ಅಷ್ಟು ಚೆನ್ನಾಗಿ ಹಾಡುವಾಗ ಸಾಹಿತ್ಯದ ಬಗ್ಗೆ ಅವರು ವಿಶೇಷ ಕಾಳಜಿ ವಹಿಸಿಕೊಳ್ಳುವುದು ಅಗತ್ಯವೇ ಆಗಿದೆ. ರವೆಯಷ್ಟು ಅರಳಿಕೊಳ್ಳುವ ನುಡಿಕಾರ ತೋರುವ ಸುನಾದನ ಮೃದಂಗದ ಒಂದೊಂದು ಘಾತವೂ, ಅನುಸರಣೆ ಮತ್ತು ಅತ್ಯುತ್ತಮ ತನಿ, ಕಛೇರಿಗೆ ಹೊನ್ನ ಕಳಸವಿಟ್ಟಂತೆ ಆಗಿತ್ತು. ಬೆಣ್ಣೆಯಿಂದ ರೇಷ್ಮೆ ದಾರವನ್ನು ನುಣುಪಾಗಿ ಎಳೆದಂತೆಯೇ ಇರುವ ಸೂಕ್ಷ್ಮ ಮತ್ತು ಕುಸುರಿ ಸಂಪತ್ತು ಸಂಪತ್ ಅವರ ವಯಲಿನ್‌ನಲ್ಲಿತ್ತು. ಕಣಕ್‌ಗಳ(ಲೆಕ್ಕಾಚಾರಗಳ) ಯಾವ ವ್ಯಾಪಾರಕ್ಕೂ ಇಳಿಯದ ಪ್ರಸನ್ನ ಅವರ ಹಾಡುಗಾರಿಕೆಯಲ್ಲಿ ಸರ್ವ ಲಘುಗಳದ್ದೇ ಆಟ ಮತ್ತು ಸಂಗೀತದ ರಸಧಾರೆ ಮಾತ್ರ ಸ್ರವಿಸುತ್ತದೆ. ಕರ್ನಾಟಕ ಸಂಗೀತದ ಹೃದಯ ಭಾಷೆ ಪ್ರಸನ್ನರ ಸಂಗೀತದಲ್ಲಿದೆ.
ಗಾನಮೂರ್ತಿ