Advertisement

ರಾಗಧನದ ಶ್ರಾವಣದ ಸಂಗೀತ ಸಂಜೆ

08:17 PM Sep 05, 2019 | mahesh |

ಉಡುಪಿಯ ರಾಗಧನ ಸಂಸ್ಥೆಯು ಆ.17ರಂದು ನೂತನ ರವೀಂದ್ರ ಮಂಟಪದಲ್ಲಿ ಒಂದು ಸಂಗೀತ ಕಛೇರಿಯನ್ನು ಆಯೋಜಿಸಿತ್ತು. ಶಾವ್ರಣ ಈ ಸಂಗೀತವನ್ನು ನಡೆಸಿಕೊಟ್ಟವರು ಗಿರಿಜಾ ಶಂಕರ್‌ ಚೆನ್ನೈ.

Advertisement

ಹದವಾದ ಧ್ವನಿ ಸೌಕರ್ಯವನ್ನು ಹೊಂದಿರುವ ಈ ಗಾಯಕರು ಆ ದಿನ ದೋಷರಹಿತವಾದ ಮತ್ತು ಸರಳವಾದ ಸೌಖ್ಯ ಸಂಗೀತವನ್ನು ನೀಡಿದರು.ಅಟತಾಳ ಭೈರವಿ ವರ್ಣದೊಂದಿಗೆ ಶುರುವಾದ ಹಾಡುಗಾರಿಕೆಯಲ್ಲಿ ಧೇನುಕ ( ತೆಲಿಯತೇರು) ಸೌರಾಷ್ಟ್ರ (ಶರಣು ಸಿದ್ಧಿ ವಿನಾಯಕ), ಧನ್ಯಾಸಿ (ಸಂಗೀತ ಜ್ಞಾನಮು) ರವಿಚಂದ್ರಿಕ (ಮಾಕೇಲರ ) ರಾಗಗಳ ಕೃತಿಗಳು ಸೊಗಸಾಗಿ ಮೂಡಿ ಬಂದವು. ಲಲಿತ ( ಹಿರಣ್ಮಯೀಂ) ಮತ್ತು ಪೂರ್ವಿ ಕಲ್ಯಾಣಿ ( ಸಾಟಿಲೇನಿ) ರಾಗಗಳು ಪ್ರಧಾನವಾಗಿದ್ದವು. ಈ ರಾಗಗಳನ್ನು ಅಚ್ಚುಕಟ್ಟಾಗಿ ವಿಸ್ತರಿಸಿದ ಗಾಯಕರು ಎರಡೂ ಕೃತಿಗಳನ್ನು ಸೂಕ್ತವಾದ ನೆರ್‌ವಲ್‌ ಮತ್ತು ಸ್ವರವಿನಿಕೆಗಳಿಂದ ಪೋಷಿಸಿದರು. ಮುಂದೆ ರಾಗಂ-ತಾನಂ- ಪಲ್ಲವಿಗಾಗಿ ಕೀರವಾಣಿಯನ್ನು ಆಯ್ದುಕೊಂಡು ಶ್ರೀ ರಾಮ ಪ್ರಿಯಂ ಶ್ರೀನಿವಾಸಂ ಭಜೇ/ ಹಂ… ಶ್ರೀ ವತ್ಸ ನಾಮ ಧೇಯಂ… ಎಂಬ ಪಲ್ಲವಿಯನ್ನು, ಖಂಡ ತ್ರಿಪುಟ ತಾಳದಲ್ಲಿ ಕ್ರಮಬದ್ಧವಾಗಿ ನಿರೂಪಿಸಿ, ಸ್ವರ ಕಲ್ಪನೆಗಳನ್ನು ರಾಗ ಮೂಲಿಕೆಯಲ್ಲಿ ನೀಡಿದರು.

ವಯಲಿನ್‌ ಕಲಾವಿದ ವೈಭವ್‌ ರಮಣಿ, ಲಲಿತ ರಾಗದ ಶರಣಾಗತ – ಶೋಕ ಭಾವಗಳನ್ನು , ಪೂರ್ವಿ ಕಲ್ಯಾಣಿಯ ಗಾಂಭೀರ್ಯವನ್ನು ಅಂತೆಯೇ ಕೀರವಾಣಿಯ ಘನ ಮತ್ತು ಮೃದು ಮಗ್ಗುಲುಗಳನ್ನು ತನ್ನದೇ ಆದ ವಿನ್ಯಾಸ ವೈವಿಧ್ಯಗಳಿಂದ ನುಡಿಸಿದರು.

ಹದವರಿತು ಮೃದಂಗ ನುಡಿಸಿದ ಸುನಾದ ಕೃಷ್ಣ ಅಮ್ಮೆ ತನಿ ಆವರ್ತಗಳಲ್ಲಿ ನಿರ್ಮಿಸಿದ ಭಿನ್ನ ಲಯಗಣಿತದ ಗೋಪುರಗಳು ಪ್ರಶಂಸೆಗೆ ಪಾತ್ರವಾದವು. ಒಂದು ಶ್ಲೋಕವನ್ನು ಅನುಸರಿಸಿದ ಹಂಸಾನಂದಿ (ಮಾಧವ ಮಾಯಾ) ಪ್ರಸ್ತುತಿಯೊಂದಿಗೆ ಕಛೇರಿ ಸಂಪನ್ನಗೊಂಡಿತು.

ಸರೋಜಾ ಆರ್‌. ಆಚಾರ್ಯ

Advertisement
Advertisement

Udayavani is now on Telegram. Click here to join our channel and stay updated with the latest news.

Next