ಮಹತೊಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಸಂದರ್ಭ ಮಂಗಳಾದೇವಿಯ ಮಾಧುರ್ಯ ಸಂಗೀತ ವಿದ್ಯಾಲಯದವರಿಂದ ಸಂಗೀತ ಕಾರ್ಯಕ್ರಮ ನೆರವೇರಿತು. ವಿದ್ಯಾಲಯದ ಅನುಶ್ರೀ ರಾವ್ – ಸ್ವಾತಿ ರಾವ್ ಸೋದರಿಯರು ಪಾರ್ವತಿ ತನಯನನ್ನು ಸ್ತುತಿಸುವ ಮೂಲಕ ಗಾಯನವನ್ನು ಆರಂಭಿಸಿದರು. ಮುಂದೆ ಸೋದರಿಯರ ಕಂಠಸಿರಿಯಲ್ಲಿ ಸಾಮಗಾನ ಕೋವಿದೆ, ಕಟೀಲಿನ ರಾಣಿ ಭ್ರಮರಾಂಭಿಕೆ ಸೇರಿದಂತೆ ಹಲವು ಭಕ್ತಿಗೀತೆಗಳು ಸುಮಧುರವಾಗಿ ಮೂಡಿಬಂದವು. ವಿದ್ಯಾಲಯದ ಸದಸ್ಯರೊಂದಿಗೆ ಪ್ರಸ್ತುತ ಪಡಿಸಿದ ತೋಳು ತೋಳು ತೋಳು ರಂಗ, ಕಣ್ಣುಗಳೆರಡು ಸಾಲದಮ್ಮ ಹಾಡುಗಳು ಭಕ್ತಿ ಪರವಶರನ್ನಾಗಿಸಿತು. ವಿದ್ಯಾಲಯದ ಪುಟಾಣಿ ಗಾಯಕರು ಗೆಜ್ಜೆಯ ಕಟ್ಟಿ ಓಡಿ ಓಡಿ ಬಾ ಬಾ, ಹೋಗೋಣ ಬಾ ಬಾ ಜಾತ್ರೆಗೆ ಹಾಡುಗಳನ್ನು ಸಮೂಹ ಗಾಯನದಲ್ಲಿ ಪ್ರಸ್ತುತ ಪಡಿಸಿದರು.ಸೋದರಿಯರ ಸ್ವರ ಮಾಧುರ್ಯತೆಯಲ್ಲಿ ಮೂಡಿಬಂದ ತೂಲೆ ನಿಕುಲೊರ ತುಳುವಪ್ಪೆನ ಜಿಂಜಿನೈಸಿರಿ ಪೊರ್ಲುನು ತುಳು ಹಾಡು ಹೃನ್ಮನ ಸೂರೆಗೊಳಿಸಿತು. ಭಾಗ್ಯದಲಕ್ಷೀ ಬಾರಮ್ಮ ಹಾಡಿನೊಂದಿಗೆ ಸಂಪನ್ನಗೊಂಡ ಈ ಸಂಗೀತ ಕಾರ್ಯಕ್ರಮದ ಯಶಸ್ಸಿಗೆ ಶ್ರೀಕಾಂತ ನಾಯಕ್(ತಬಲಾ) ಧೀರಜ್ ರಾವ್(ಕೀಬೋರ್ಡ್), ಉದಯಕುಮಾರ್ (ರಿದಂ ಪ್ಯಾಡ್)ಸಹಕರಿಸಿದರು.
ಶ್ರವಣ್ ಶೆಟ್ಟಿ