ಉಡುಪಿಯ “ರಾಗಧನ’ ಸಂಸ್ಥೆಯವರು ಈ ವರ್ಷದ ಆಷಾಢ ಸಂಗೀತ ಕಾರ್ಯಕ್ರಮವನ್ನು ಜು. 23ರಂದು ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಿದ್ದರು. ಅಂದಿನ ಕಲಾವಿದ ಚೆನ್ನೈನ ಕಾಂತಿ ಸ್ವರೂಪ್ ಮುಲ್ಲೇಲ.
ಒಳ್ಳೆ ಆತ್ಮವಿಶ್ವಾಸದಿಂದ ಗಟ್ಟಿದನಿಯಲ್ಲಿ ಮೂರು ಸ್ಥಾಯಿಗಳಲ್ಲಿ ಆರಾಮವಾಗಿ ಸಂಚರಿಸುತ್ತ ಹಾಡುವ ಯುವಕ.ಆರಂಭದ ಬೇಗಡೆ ವರ್ಣವನ್ನು ಹೊರತು ಪಡಿಸಿದರೆ ಉಳಿದಂತೆ ಎಲ್ಲಾ ಹೊಸ ಕೃತಿಗಳನ್ನೇ ಹಾಡಲಾಗಿದ್ದು ಕಛೇರಿಯ ವಿಶೇಷ. ರಾಗಮಾಲಿಕೆ ಶ್ಲೋಕದ ಬೆನ್ನಲ್ಲೇ ಮಾಯಾಮಾಳವ ಗೌಳದ (ವಿಮಲಕು) ಕೃತಿಯಲ್ಲಿ ನೆರವಲ್, ಸ್ವರ ವಿನಿಕೆಗಳನ್ನೇ ನೀಡಿದ ಗಾಯಕರು ಪ್ರಧಾನವಾಗಿ ಶಹನ (ದೇಹಿ ತವ ಪದ ಭಕ್ಷ್ಯಂ – ವೈ) ಮತ್ತು ಮೋಹನ (ಕ್ಷೇಮಂ ಕುರು ಗೋಪಾಲ) ರಾಗಗಳನ್ನು ಎತ್ತಿಕೊಂಡರು.
ಈ ಎರಡು ಪ್ರಸ್ತುತಿಗಳಲ್ಲಿ, ದಾಟು, ಜಂಟಿ, ಅಲಂಕಾರಾದಿ ಪ್ರಯೋಗಗಳಿಂದ ಕೂಡಿದ ಸವಿಸ್ತಾರವಾದ ಆಲಾಪನೆ, ನೆರವಲ್, ಸ್ವರ ಗಣಿತಗಳು ಮತ್ತು ಸುದೀರ್ಘವಾದ ಮುಕ್ತಾಯಗಳು ಎಂದು ಹತ್ತಾರು ಮಗ್ಗುಲುಗಳಿಂದ ಗಾಯಕರು ತಮ್ಮ ಪಾಂಡಿತ್ಯದ ಪರಿಚಯ ನೀಡಿದರು. ಆದರೂ ಆಯಾ ರಾಗಗಳಿಗೇ ಮೀಸಲಾದ ನಿಜ ಭಾವಗಳ ಅಭಿವ್ಯಕ್ತಿಗೆ ಮತ್ತು ಅಲ್ಲಲ್ಲಿ ಸೌಖ್ಯವಾದ ವಿಶ್ರಾಂತಿಗೆ ಇನ್ನೂ ಒತ್ತು ಕೊಡಬೇಕಿತ್ತೇನೋ ಅನಿಸಿತು.
ರಾಗಮಾಲಿಕೆಯಲ್ಲಿ ತಿರುಪ್ಪುಗಳ್, ಸಿಂಧು ಭೈರವಿಯಲ್ಲಿ ಅನ್ನಮಾಚಾರ್ಯರ ರಚನೆ ಮತ್ತು ಬಿಂದು ಮಾಲಿನಿಯ ತಿಲ್ಲಾನದೊಂದಿಗೆ ಕಛೇರಿ ಸಂಪನ್ನಗೊಂಡಿತು.ಅನುಭವದಿಂದ ಪಕ್ವವಾದ ಉತ್ತಮ ಬಿಲ್ಲುಗಾರಿಕೆಯನ್ನು ತೋರಿದ ವೇಣುಗೋಪಾಲ ಶಾನುಭೋಗ ಮತ್ತು ಪ್ರಬುದ್ಧವಾದ ಅಂತೆಯೇ ಹದವರಿತ ಲಯಗಾರಿಕೆಯನ್ನು ಪ್ರದರ್ಶಿಸಿದ ಬಾಲಚಂದ್ರ ಆಚಾರ್ಯ ಈ ಕಛೇರಿಗೆ ಹೆಚ್ಚಿನ ಮೆರುಗನ್ನು ನೀಡಿದ್ದಾರೆ.
ಸರೋಜಾ ಆರ್. ಆಚಾರ್ಯ