Advertisement

99ರಲ್ಲಿ 100 ಕಂಡ ಜನ್ಯಾ : ಅರ್ಜುನ ಶತಕ ಸಂಭ್ರಮ

09:05 AM Apr 27, 2019 | Hari Prasad |

ಒಂದಲ್ಲ, ಎರಡಲ್ಲ, ಬರೋಬ್ಬರಿ ನೂರು… – ಅರ್ಜುನ್‌ ಜನ್ಯಾ ಮುಖದಲ್ಲಿ ನಗು ಮೂಡಲು ಇದಕ್ಕಿಂತ ಇನ್ನೇನು ಬೇಕು ಹೇಳಿ. ಇಷ್ಟು ಹೇಳಿದ ಮೇಲೆ ಯಾವುದರ ಬಗ್ಗೆ ಇಲ್ಲಿ ಹೇಳಲಾಗುತ್ತಿದೆ ಎಂಬುದು ನಿಮಗೆ ಗೊತ್ತಾಗಿರುತ್ತದೆ. ಹೌದು, ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯಾ ಅವರಿಗೆ ಈಗ ಶತಕ ಸಂಭ್ರಮ. ಅವರ ಸಂಗೀತ ನಿರ್ದೇಶನದ ನೂರನೇ ಚಿತ್ರ ಮೇ 1 ರಂದು ಬಿಡುಗಡೆಯಾಗುತ್ತಿದೆ.

Advertisement

ಗಣೇಶ್‌ ಅಭಿನಯದ “99′ ಚಿತ್ರಕ್ಕೆ ಅರ್ಜುನ್‌ ಜನ್ಯಾ ಸಂಗೀತ ನೀಡಿದ್ದು, ಇದು ಅವರ ನೂರನೇ ಚಿತ್ರ. ಈ ಮೂಲಕ ಅರ್ಜುನ್‌ ಚಿತ್ರರಂಗದಲ್ಲಿ ಯಶಸ್ವಿ ಪಯಣ ಮುಂದುವರೆಸಿದ್ದಾರೆ. ಪ್ರತಿಭೆ, ಶ್ರಮದ ಜೊತೆಗೆ ಒಂದು ಸಮಯದಲ್ಲಿ ಗೆಲುವಿಗಾಗಿ ಎದುರು ನೋಡುತ್ತಿದ್ದ ಅರ್ಜುನ್‌ ಈಗ, ಗೆಲುವಿನ ದಾರಿಯಲ್ಲಿ ನೂರನೇ ಮೈಲಿಗಲ್ಲಿನ ಬಳಿ ಬಂದು ನಿಂತಿದ್ದಾರೆ. ಅರ್ಜುನ್‌ ಜನ್ಯಾ ಮಾಡಿದ ಹಾಡುಗಳು ಹಿಟ್‌ ಆಗುತ್ತಿದ್ದಂತೆ ಅವರಿಗೆ ಸಿಕ್ಕ ಬಿರುದು “ಮ್ಯಾಜಿಕಲ್‌ ಕಂಪೋಸರ್‌’.

ಆ ಬಿರುದಿನಡಿ ಸತತವಾಗಿ ಹಿಟ್‌ ಹಾಡುಗಳನ್ನು ನೀಡುತ್ತಾ ಬರುತ್ತಿರುವ ಅರ್ಜುನ್‌ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಒಂದರ ಹಿಂದೊಂದರಂತೆ ಸಕ್ಸಸ್‌ ಕೊಡೋದು ಸುಲಭದ ಕೆಲಸವಲ್ಲ. ಅದು ಕೂಡಾ ಈ ಸ್ಪರ್ಧೆಯ ನಡುವೆ. ಆದರೆ, ಅರ್ಜುನ್‌ ಜನ್ಯಾ ಸತತವಾಗಿ ಹಿಟ್‌ ನೀಡುತ್ತಲೇ ಬಂದಿದ್ದಾರೆ. ಈ ಯಶಸ್ಸಿನ ಹಿಂದಿನ ಗುಟ್ಟೇನು ಎಂದು ನೀವು ಕೇಳಬಹುದು. ಅದಕ್ಕೆ ಅರ್ಜುನ್‌ ಜನ್ಯಾ ಉತ್ತರಿಸಿದ್ದಾರೆ.

“ನಾನು ಯಾವುದೇ ಕೆಲಸವನ್ನಾದರೂ ಶ್ರದ್ಧೆ, ಭಕ್ತಿಯಿಂದ ಮಾಡುತ್ತೇನೆ. ನನ್ನ ಕಡೆಯಿಂದ ಹಂಡ್ರೆಡ್‌ ಪರ್ಸೆಂಟ್‌ ಕೊಡೋಕೆ ಪ್ರಯತ್ನಿಸುತ್ತೇನೆ’ ಎನ್ನುತ್ತಾರೆ. ಜೊತೆಗೆ ಕೆಲಸದ ವಿಚಾರದಲ್ಲಿ ತಾನು ಕಾಂಪ್ರಮೈಸ್‌ ಆಗಲ್ಲ ಎನ್ನುವುದು ಜನ್ಯಾ ಮಾತು.

“ಕೆಲವೊಮ್ಮೆ ಕಾಂಪ್ರಮೈಸ್‌ ಆಗಬೇಕಾಗುತ್ತದೆ. ಆದರೆ, ನಾನು ಹಾಗೆ ಮಾಡಲ್ಲ. ಒಮ್ಮೊಮ್ಮೆ ಚೆನ್ನಾಗಿಲ್ಲದೇ ಇರೋದ್ದನ್ನೇ ಬೇಕು ಅಂತ ತಗೊಂಡು ಚೆನ್ನಾಗಿದೆ ಅಂತ ಹೇಳ್ತಾರೆ. ಆಗ, ನಾನೇ ಅದು ರೀಚ್‌ ಆಗಲ್ಲ ಅಂತ ತಿಳಿದು, ಒಂದಷ್ಟು ಸರಿ ಆಗೋವರೆಗೂ ಹೋರಾಡಿ, ನನಗೆ ತೃಪ್ತಿ ಅನಿಸೋವರೆಗೂ ಬಿಡೋದಿಲ್ಲ. ಹಾಗಾಗಿಯೇ, ಆ ಸಕ್ಸಸ್‌ ಕಾಣಲು ಸಾಧ್ಯವಾಗಿದೆ’ ಎನ್ನುತ್ತಾರೆ ಅರ್ಜುನ್‌ ಜನ್ಯಾ.

Advertisement

ಮತ್ತೂಂದು ವಿಶೇಷವೆಂದರೆ ಈ ವಾರ ಅರ್ಜುನ್‌ ಜನ್ಯಾ ಸಂಗೀತ ನಿರ್ದೇಶನ “ಪ್ರೀಮಿಯರ್‌ ಪದ್ಮಿನಿ’ ಚಿತ್ರ ಬಿಡುಗಡೆಯಾದರೆ, ಮುಂದಿನ ವಾರ “99′ ಬಿಡುಗಡೆಯಾಗುತ್ತಿದೆ. ಈ ಮೂಲಕ ಬ್ಯಾಕ್‌ ಟು ಬ್ಯಾಕ್‌ ಅರ್ಜುನ್‌ ಸದ್ದು ಮಾಡಲಿದ್ದಾರೆ. ಇನ್ನು, ಗಾಂಧಿನಗರದಲ್ಲಿ ಒಂದು ಮಾತಿದೆ. ಅದೇನೆಂದರೆ ಅರ್ಜುನ್‌ಗೆ ಇಷ್ಟೊಂದು ಸಕ್ಸಸ್‌ ಸಿಕ್ಕರೂ ತುಂಬಾ ಸಿಂಪಲ್‌ ಆಗಿರುತ್ತಾರೆ.

ಅದು ಹೇಗೆ ಎಂದು? ಇದಕ್ಕೆ ಉತ್ತರಿಸುವ ಅರ್ಜುನ್‌, “ನನಗೆ ಯಾವುದೂ ಸುಲಭವಾಗಿ ಸಿಕ್ಕಿಲ್ಲ. ನನಗೆ ಅರ್ಥ ಆಗಿದ್ದೇನೆಂದರೆ, ಲೈಫ‌ಲ್ಲಿ ಖುಷಿಯಾಗಲಿ ದುಃಖವಾಗಲಿ ಈ ಎರಡೂ ಶಾಶ್ವತ ಅಲ್ಲ. ಹಾಗಾಗಿ, ನಾನು ತುಂಬಾ ಕೂಲ್‌ ಆಗಿರುತ್ತೇನೆ. ಮುಖ್ಯವಾಗಿ ನಾನು ತುಂಬಾ ಫಾಲೋ ಮಾಡಿದ್ದು ಸಂಗೀತ ನಿರ್ದೇಶಕ ಎ.ಆರ್‌. ರೆಹಮಾನ್‌ ಅವರ ಜೀವನ ಶೈಲಿಯನ್ನ. ಅವರ ಒಳ್ಳೆಯ ಮಾತುಗಳನ್ನ ಆಲಿಸಿಕೊಂಡು ಬಂದಿದ್ದೇನೆ. ಅದು ನನಗೆ ಪ್ರೇರಣೆ ಕೂಡಾ’ ಎನ್ನುತ್ತಾರೆ ಅರ್ಜುನ್‌.

Advertisement

Udayavani is now on Telegram. Click here to join our channel and stay updated with the latest news.

Next