ಕೋಲ್ಕತಾ: ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೆಲದಿನಗಳಿಂದ ಪ್ರಾಸ್ಟೇಟ್ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದ ಖ್ಯಾತ ಸಂಗೀತ ಮಾಂತ್ರಿಕ,ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಮೇರು ಗಾಯಕ ಉಸ್ತಾದ್ ರಶೀದ್ ಖಾನ್
ಮಂಗಳವಾರ ನಿಧನ ಹೊಂದಿದ್ದಾರೆ. ಅವರಿಗೆ 55 ವರ್ಷ ವಯಸ್ಸಾಗಿತ್ತು.
ತನ್ನ ಅದ್ಭುತ ಕಂಠದ ಮೂಲಕ ಕೋಟ್ಯಂತರ ಅಭಿಮಾನಿಗಳ ಮನ ಗೆದ್ದಿದ್ದ ಖಾನ್ ಅವರು ಕಳೆದ ಕೆಲ ದಿನಗಳಿಂದ ವೆಂಟಿಲೇಟರ್‌ನಲ್ಲಿದ್ದರು, ಕ್ಯಾನ್ಸರ್ ನೊಂದಿಗಿನ ಹೋರಾಟದಲ್ಲಿ ಗೆಲ್ಲುವಲ್ಲಿ ಸೋತಿದ್ದಾರೆ. ರಶೀದ್ ಖಾನ್ ಅವರ ನಿಧನಕ್ಕೆ ಸಂಗೀತ ಲೋಕದ ಅಪಾರ ಗಣ್ಯರು ತೀವ್ರ ಕಂಬನಿ ಮಿಡಿದಿದ್ದಾರೆ.
“ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಿದೆವು ಆದರೆ ವಿಫಲವಾಯಿತು.ರಶೀದ್ ಖಾನ್ ಅವರು ರು ಸುಮಾರು 3:45 ಕ್ಕೆ ಕೊನೆಯುಸಿರೆಳೆದರು ಎಂದು ಖಾಸಗಿ ಆಸ್ಪತ್ರೆಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಂತಾಪ ಸೂಚಿಸಿ “ದೇಶಕ್ಕೆ ಮತ್ತು ಸಂಗೀತ ಬಂಧುಗಳಿಗೆ ದೊಡ್ಡ ನಷ್ಟ. ರಶೀದ್ ಖಾನ್ ಇನ್ನಿಲ್ಲ ಎಂದು ನಂಬಲು ಸಾಧ್ಯವಾಗದ ಕಾರಣ ನಾನು ತುಂಬಾ ನೋವಿನಲ್ಲಿದ್ದೇನೆ” ಎಂದು ಹೇಳಿದ್ದಾರೆ.
ಉಸ್ತಾದ್ ಗುಲಾಮ್ ಮುಸ್ತಫಾ ಖಾನ್ ಅವರ ಸೋದರಳಿಯ ಉತ್ತರ ಪ್ರದೇಶದ ಬಡಾಯುನ್ ರಶೀದ್ ಖಾನ್ ಅವರು ತಮ್ಮ ತಾಯಿಯ ಅಜ್ಜ ಉಸ್ತಾದ್ ನಿಸ್ಸಾರ್ ಹುಸೇನ್ ಖಾನ್ (1909-1993) ಅವರಿಂದ ಆರಂಭಿಕ ತರಬೇತಿಯನ್ನು ಪಡೆದಿದ್ದರು. ರಾಂಪುರ-ಸಹಸ್ವಾನ್ ಘರಾನಾ ಶೈಲಿಯ ಗಾಯಕರಾಗಿ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದರು.
ಅದ್ಭುತ ಕೊಡುಗೆಯನ್ನು ಪರಿಗಣಿಸಿ ಕೇಂದ್ರ ಸರಕಾರ ಪದ್ಮಶ್ರೀ (2006),2012 ರಲ್ಲಿ ಬಂಗಾ ಭೂಷಣ್, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (2006)ಗ್ಲೋಬಲ್ ಇಂಡಿಯನ್ ಮ್ಯೂಸಿಕ್ ಅಕಾಡೆಮಿ ಪ್ರಶಸ್ತಿ (GIMA) (2010), ಮಹಾ ಸಂಗೀತ ಸಮ್ಮಾನ್ ಪ್ರಶಸ್ತಿ (2012), ಮಿರ್ಚಿ ಸಂಗೀತ ಪ್ರಶಸ್ತಿ (2013) ಮತ್ತು ಅತ್ಯುನ್ನತ ಪದ್ಮಭೂಷಣ (2022)ಪ್ರಶಸ್ತಿ ನೀಡಿ ಗೌರವಿಸಲಾಗಿದೆ.