ಶಹಾಬಾದ: ಸಂಗೀತಕ್ಕೆ ಮನಸ್ಸನ್ನು ಪ್ರಫುಲ್ಲಗೊಳಿಸುವ ಶಕ್ತಿ ಇದ್ದು, ಮನವನ್ನು ಅರಳಿಸಿ ಹೃದಯ ಉದ್ದೀಪಿಸಿ ವ್ಯಕ್ತಿತ್ವವನ್ನು ವಿಕಾಸಗೊಳಿ ಸುವುದರೊಂದಿಗೆ ಬದುಕುವ ರೀತಿ-ನೀತಿ ಕಲಿಸುತ್ತದೆ ಎಂದು ಸೆಂಟ್ ಥಾಮಸ್ ಚರ್ಚ್‌ನ ಫಾದರ್ ಸ್ಟೇನಿ ಗೋವಿಯಸ್ ಹೇಳಿದರು.
ಜಿ.ಬಿ.ಸಂಗೀತಾ ಕಲಾ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿಶೇಷ ಘಟಕ, ಸಾಮನ್ಯ ಯೋಜನೆಯಡಿ ನಗರದ ಸೆಂಟ್ ಥಾಮಸ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಗೀತಕ್ಕೆ ತನ್ನದೇ ಆದ ಇತಿಹಾಸ, ಪರಂಪರೆಯಿದೆ. ಧಾರ್ಮಿಕ ಹಿನ್ನೆಲೆ ಹೊಂದಿರುವ ಇದು ಸಾಹಿತ್ಯ, ಗಾನ, ನೃತ್ಯ ಈ ಮೂರು ಪ್ರಕಾರಗಳನ್ನು ಮೇಳೈಸಿಕೊಂಡು ಮನಸಿಗೆ ಮುದ ನೀಡುತ್ತದೆ. ಸಂಗೀತ ಹಾಗೂ ಗಾಯನವನ್ನು ಆಧುನಿಕತೆಗೆ ಮುಖಾಮುಖೀ ಮಾಡಿಕೊಂಡು ಅಸ್ಮಿತೆಯನ್ನು ಹಾಗೆ ಉಳಿಸಿಕೊಳ್ಳಬೇಕಿದೆ ಎಂದರು.
ಸಂಗೀತ, ಜ್ಞಾಪನ ಶಕ್ತಿ ಹೆಚ್ಚಿಸುವ ಮೂಲಕ ಶಾಂತಿ-ಸಮಾಧಾನ ನೀಡುತ್ತದೆ. ಜಗತ್ತಿನ ಜೀವ-ಜಂತುಗಳು ಕೂಡಾ ನಾದಕ್ಕೆ ತಲೆದೂಗುತ್ತವೆ. ಇತ್ತೀಚೆಗೆ ಸಂಗೀತ ತೋಟಗಳನ್ನು ನಿರ್ಮಾಣ ಮಾಡುವುದರೊಂದಿಗೆ ಗಿಡ-ಮರಗಳು ಸಂಗೀತಕ್ಕೆ ಮಾರು ಹೋಗಿವೆ ಎಂದು ಸಂಶೋಧನೆ ಮಾಡಲಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಕಲಾವಿದ ಜಿ.ಎಸ್.ನನ್ನಾವರೆ ಮಾತನಾಡಿ, ಗಾಯನ ಕ್ಷೇತ್ರದಲ್ಲಿ ಹಲವಾರು ಪ್ರತಿಭೆಗಳು ಹಾಡುವ ಮುಖಾಂತರ ಪ್ರಸಿದ್ಧಿಯಾಗಿದ್ದಾರೆ. ಈ ದಿಸೆಯಲ್ಲಿ ಮುಂದಿನ ಜನಾಂಗಕ್ಕೆ ಸಂಗೀತ ಹಸ್ತಾಂತರಿಸುವ ಕಾರ್ಯ ಜರುಗುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ನಗರಸಭೆ ಸದಸ್ಯೆ ಸಾಬೇರಾ ಬೇಗಂ, ಇಂಗಳಗಿ ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಸ್ಥಾವರಮಠ, ಜಿ.ಬಿ. ಸಂಗೀತಾ ಕಲಾ ಸಂಸ್ಥೆ ಕಾರ್ಯದರ್ಶಿ ಶಾಂತಪ್ಪ ಹಡಪದ ವೇದಿಕೆ ಮೇಲಿದ್ದರು. ಶಾಸ್ತ್ರೀಯ ಸಂಗೀತವನ್ನು ಕಲಾವಿದ ಮೌನೇಶ್ವರರಾವ ಸೂನಾರ್, ವಚನ ಗಾಯನವನ್ನು ಕಲಾವಿದೆ ಸುಲಲಿತಾ ಕೊಳ್ಳಿ, ದಾಸವಾಣಿಯನ್ನು ಸೇಡಂನ ಕಲಾವಿದೆ ವಿಜಯಲಕ್ಷ್ಮೀ ಕಟ್ಟಿಮನಿ ನಡೆಸಿಕೊಟ್ಟರು. ತಬಲಾ ಕಲಾವಿದರಾದ ನಾಗಭೂಷಣ ಸ್ಥಾವರಮಠ, ಲೋಕೇಶ ಪತ್ತಾರ, ಪೂಜಾ ಮೋನಯ್ನಾ ಹಾರ್ಮೋನಿಯಂ ಸಾತ್ ನೀಡಿದರು.