ಧಾರವಾಡ: ಸೂರ್ ಹಿ ಈಶ್ವರ ಅನ್ನುವಂತೆ, ಸೂರ್ ಎನ್ನುವುದು ಇಡೀ ಜಗತ್ತಿಗೆ ಸಂಬಂಧಿಸಿದ್ದು, ಸಂಗೀತ ಎಂಬುದು ಅತ್ಯಂತ ಅಮೂರ್ತವಾದ ಮನೋಜ್ಞ ಕಲೆಯಾಗಿದೆ ಎಂದು ಕೇಂದ್ರ ಸಂಸ್ಕೃತಿ ಮಂತ್ರಾಲಯದ ತಜ್ಞ ಸಮಿತಿ ಸದಸ್ಯ ಡಾ| ಶಶಿಧರ ನರೇಂದ್ರ ಹೇಳಿದರು.
ಕವಿವಿ ಲಲಿತಕಲಾ ಹಾಗೂ ಸಂಗೀತ ಮಹಾವಿದ್ಯಾಲಯದ ಸಭಾಂಗಣದಲ್ಲಿ ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಹಾಗೂ ಕವಿವಿ ಲಲಿತಕಲಾ ಹಾಗೂ ಸಂಗೀತ ಮಹಾವಿದ್ಯಾಲಯದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ತಬಲಾ ಹಾಗೂ ತಬಲಾದ ನೆರಳು ವಿಷಯದ ಕುರಿತು ವಿಶೇಷ ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕದಲ್ಲಿ 1917ಕ್ಕೂ ಮೊದಲು ಹಿಂದುಸ್ತಾನಿ ಸಂಗೀತ ಪ್ರಚಲಿತವಿರಲಿಲ್ಲ. ಸಿತಾರರತ್ನ ರಹಿಮತ್ ಖಾನ್‌ರು ಧಾರವಾಡಕ್ಕೆ ಆಗಾಗ ಬರುತ್ತಿದ್ದರು. ಅವರಿಂದಲೇ ಧಾರವಾಡದಲ್ಲಿ ಹಿಂದುಸ್ತಾನಿ ಸಂಗೀತ ಆರಂಭಗೊಂಡಿತು. ಸವಾಯಿ ಗಂಧರ್ವರು, ಪಂ| ಪಂಚಾಕ್ಷರಿ ಗವಾಯಿಗಳು, ಡಾ| ಮಲ್ಲಿಕಾರ್ಜುನ ಮನಸೂರ, ಡಾ| ಗಂಗೂಬಾಯಿ ಹಾನಗಲ್, ಪಂ| ಪುಟ್ಟರಾಜ ಗವಾಯಿಗಳು, ಭಾರತರತ್ನ ಭೀಮಸೇನ ಜೋಶಿ, ಪಂ| ಬಸವರಾಜ ರಾಜಗುರು ಅವರಂಥ ಮೇರು ಕಲಾವಿದರ ಹಿಂದುಸ್ತಾನಿ ಸಂಗೀತ ಪರಂಪರೆಯಿಂದ ಧಾರವಾಡವು ಇಡೀ ಜಗತ್ತಿನಲ್ಲಿಯೇ ಗುರುತಿಸುವಷ್ಟರ ಮಟ್ಟಿಗೆ ಬೆಳೆದಿದೆ. ಧಾರವಾಡ ಸಂಗೀತ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು ಮುಂದಿನ ಪೀಳಿಗೆ ಬಹುದೊಡ್ಡ ಸಂಖ್ಯೆಯಲ್ಲಿ ಸಿದ್ಧಗೊಂಡಿದೆ ಎಂದರು.
ತಬಲಾದ ಕುರಿತು ವಿಶೇಷ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆಯನ್ನು ಸೊಲ್ಲಾಪುರದ ರಾಷ್ಟ್ರಮಟ್ಟದ ಖ್ಯಾತ ತಬಲಾ ವಾದಕ ಪಂ| ಆನಂದ ಬದಾಮಿಕರ ನಡೆಸಿಕೊಟ್ಟರು. ಲೆಹರಾದಲ್ಲಿ ವಿನೋದ ಪಾಟೀಲ ಸಾಥ್ ಸಂಗತ್ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಗೀತ ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ಶಾಂತಾರಾಮ ಹೆಗಡೆ ಮಾತನಾಡಿ, 1958ರಲ್ಲಿ ಕರ್ನಾಟಕ ಕಲಾ ಮಹಾವಿದ್ಯಾಲಯದಲ್ಲಿ ಸಂಗೀತ ವಿಭಾಗವಾಗಿ ಆರಂಭಗೊಂಡು, 1973ರಲ್ಲಿ ವಿಶ್ವವಿದ್ಯಾಲಯದ ಲಲಿತಕಲಾ ಹಾಗೂ ಸಂಗೀತ ಮಹಾವಿದ್ಯಾಲಯವಾಗಿ ಸ್ಥಾಪನೆಗೊಂಡು ಈವರೆಗೆ ನಮ್ಮ ಮಹಾವಿದ್ಯಾಲಯದ ಸಹಸ್ರಾರು ಸಂಖ್ಯೆಯ ಸಂಗೀತ ವಿದ್ಯಾರ್ಥಿಗಳು ರಾಜ್ಯ-ರಾಷ್ಟ್ರಾದ್ಯಂತ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆ ಸಂಗತಿಯಾಗಿದೆ ಎಂದರು.
ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಚಿಕ್ಕಮಠ ಪ್ರಾಸ್ತಾವಿಕ ಮಾತನಾಡಿದರು. ಕೇಂದ್ರ ಸಂಸ್ಕೃತಿ ಮಂತ್ರಾಲಯದ ನಾಗಪುರ ಕಲ್ಚರಲ್ ಸೆಂಟರ್ ಸದಸ್ಯರಾಗಿ ನೇಮಕಗೊಂಡ ಹಿರಿಯ ನಟ, ನಿರ್ದೇಶಕ ಡಾ| ಶಶಿಧರ ನರೇಂದ್ರ ಮತ್ತು ಸೊಲ್ಲಾಪುರದ ಹಿರಿಯ ತಬಲಾ ಕಲಾವಿದ ಪಂ| ಆನಂದ ಬದಾಮಿಕರ ಅವರನ್ನು ಸನ್ಮಾನಿಸಲಾಯಿತು.
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯ ವೀರಣ್ಣ ಪತ್ತಾರ, ಡಾ| ಮಲ್ಲಿಕಾರ್ಜುನ ತರ್ಲಗಟ್ಟಿ, ಡಾ| ಗೋಪಿಕೃಷ್ಣ, ಅಲ್ಲಮಪ್ರಭು ಕಡಕೋಳ, ಡಾ| ಶಕ್ತಿ ಪಾಟೀಲ, ಸುಜಾತಾ ಕಮ್ಮಾರ, ಡಾ| ಶರಣಬಸಪ್ಪ ಮೆಡೇದಾರ, ಡಾ| ಗುರುಬಸವ ಮಹಾಮನೆ, ಡಾ| ಪರಶುರಾಮ ಕಟ್ಟಿಸಂಗಾವಿ, ಚಂದ್ರಶೇಖರಯ್ಯ ಹಿರೇಮಠ, ಡಾ| ಕೆ.ಮೃತ್ಯುಂಜಯ, ಡಾ| ಮಂಜುನಾಥ ಭಜಂತ್ರಿ, ಡಾ| ರೂಪಾ ಬುಡ್ನಾಯಕ, ನೂರಜಾನ್ ನದಾಫ್, ಮೋಸಿನಖಾನ್, ಸುರೇಶ ನಿಡಗುಂದಿ, ಜಯತೀರ್ಥ ಪಂಚಮುಖೀ, ಪ್ರಸಾದ ಮಡಿವಾಳರ, ಬಸವರಾಜ ಹಿರೇಮಠ, ಭೂಷಣ ಗುಡ್ಡದಮಠ, ಅನಿಲ ಮೇತ್ರಿ, ಹೇಮಂತ ಜೋಶಿ, ಕವಿತಾ ಜಂಗಮಶೆಟ್ಟಿ ಇದ್ದರು.
ಸಹನಾ ಮಡಿವಾಳರ ನಿರೂಪಿಸಿದರು. ಡಾ| ಎ.ಎಲ್. ದೇಸಾಯಿ ಸ್ವಾಗತಿಸಿದರು. ಪ್ರಕಾಶ ಬಾಳಿಕಾಯಿ ವಂದಿಸಿದರು.