Advertisement

ಪ್ರತಿಭಾ ಸಾಮಗರಿಗೆ ಸಂಗೀತೋತ್ಸವ ಪ್ರಶಸ್ತಿ

05:44 PM Nov 28, 2019 | mahesh |

ಕಲಾಸಕ್ತರಿಗೆ, ಓದುಗರಿಗೆ ಚಿರ ಪರಿಚಿತ ಹೆಸರು ಪ್ರತಿಭಾ ಸಾಮಗ. ಪ್ರತಿಭಾಗೆ ತಾಯಿಯೇ ಸಂಗೀತದ ಮೊದಲ ಗುರು. ಸಂಗೀತದಲ್ಲಿ ಸೀನಿಯರ್‌, ವಯೊಲಿನ್‌ ವಾದನದ ಕಲಿಕೆ, ಸಂಸ್ಕೃತ ಕೋವಿದ ಪದವಿ, ಬಿ.ಎಸ್ಸಿ, ಬಿ.ಎಡ್‌ ಪದವಿ ಮುಗಿಸಿ ಅಧ್ಯಾಪನ ವೃತ್ತಿಯನ್ನು ಪ್ರಾರಂಭಿಸಿ 26ವರ್ಷ ಅಧ್ಯಾಪಿಕೆಯಾಗಿ, ನಂತರ ಮುಖ್ಯೋಪಾಧ್ಯಾಯಿನಿಯಾಗಿ ನಿವೃತ್ತಿ ಪಡೆದವರು. ಇವರ ಭರತನಾಟ್ಯದ ಗುರುಗಳು, ಸೋದರತ್ತೆ ಗಂಗಾ ಕೆ. ರಾವ್‌, ದಿ. ಕೆ ಎಸ್‌. ಮಧ್ಯಸ್ಥ ಮತ್ತು ದಿ. ರಾಜನ್‌ ಅಯ್ಯರ್‌.

Advertisement

ಭರತನಾಟ್ಯ ವಿದ್ವತ್‌ ಪರೀಕ್ಷೆಯಲ್ಲಿ ರಾಜ್ಯಕ್ಕೇ 2ನೇ ಸ್ಥಾನವನ್ನು ಪಡೆದವರು. ಸ್ವಂತ ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದಲ್ಲದೆ, ಕವಿ ಎಸ್‌.ವಿ ಪರಮೇಶ್ವರ ಭಟ್‌, ಶ್ರೀನಿವಾಸ ಉಡುಪ, ರಾಜನ್‌ ಅಯ್ಯರ್‌, ಉದ್ಯಾವರ ಮಾಧವ ಆಚಾರ್ಯ ಅವರ ಜೊತೆಗೂಡಿ ಸಾಕಷ್ಟು ನೃತ್ಯ ರೂಪಕಗಳಲ್ಲೂ, ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ದುಡಿದಿದ್ದಾರೆ. ಮಂಗಳೂರಿನಲ್ಲಿ ನಡೆದ ಯಕ್ಷಗಾನ ಕಮ್ಮಟದಲ್ಲಿ ಬಲಿಪ ನಾರಾಯಣ ಭಾಗವತರ ಭಾಗವತಿಕೆಗೆ, ಕೋಳ್ಯೂರು ರಾಮಚಂದ್ರರಾಯರ ಜೊತೆಗೆ ಯಕ್ಷಗಾನಕ್ಕೆ ಸಂವಾದಿಯಾಗಿ ನರ್ತಿಸಿದ ಹಿರಿಮೆ ಪ್ರತಿಭಾ ಅವರದು.

1980ರಲ್ಲಿ ಉಡುಪಿಯಲ್ಲಿ ನೃತ್ಯ ತರಗತಿಗಳನ್ನು ಆರಂಭಿಸಿ ಆಸಕ್ತರಿಗೆ ತನ್ನ ವಿದ್ಯೆಯನ್ನು ಧಾರೆಯೆರೆದಿದ್ದಾರೆ. ಇವಲ್ಲದೆ, ನೃತ್ಯ ಕಮ್ಮಟ, ಪ್ರಾತ್ಯಕ್ಷಿಕೆಗಳ ನಿರ್ವ ಹಣೆ, ನೃತ್ಯ ಪರೀಕ್ಷೆಗಳ ಕಾರ್ಯನಿರ್ವಹಣೆ, ಸಂಗೀತ – ನೃತ್ಯ ಸ್ಪರ್ಧೆ ಗಳಿಗೆ ತೀರ್ಪು ಗಾರಿಕೆ ಮೊದಲಾದ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಹಲವು ಪತ್ರಿಕೆಗಳಲ್ಲಿ ಪ್ರತಿಭಾರವರ ಸಂಗೀತ, ನೃತ್ಯ, ಯಕ್ಷಗಾನ ಕುರಿತಾದ ಆಳವಾದ ಅವಲೋಕನ, ವಿಮರ್ಶೆ, ಮುಂತಾದ ಬರವಣಿಗೆಗಳು ಪ್ರಕಟಗೊಂಡಿವೆ. ಕಾಲ-ದೇಶ-ವ್ಯಕ್ತಿ-ವಸ್ತುವಿನ ಹಂಗಿಲ್ಲದೆ ತೆರೆದ ಮನಸ್ಸಿನಿಂದ ಕಲಾಸ್ವಾದನೆಯನ್ನು ಮಾಡುತ್ತಾರೆ. ಕೇವಲ ನೆಪ ಮಾತ್ರದ ವರದಿಗಳಾಗಿರದ ಇವರ ವಸ್ತುನಿಷ್ಠ ವಿಮರ್ಶೆಗಳು ಕಾರ್ಯಕ್ರಮದ ನಿಜವಾದ ಮೌಲ್ಯಮಾಪನಗಳಾಗಿರುತ್ತವೆ.

ಸಂಗೀತ ಪರಿಷತ್‌, ಮಂಗಳೂರು ಇವರು ನಡೆಸುವ “ಮಂಗಳೂರು ಸಂಗೀತೋತ್ಸವ 2019′ ಸಮಾರಂಭದಲ್ಲಿ ಡಿ.1ರಂದು ಮಂಗಳೂರಿನಲ್ಲಿ ವಿ|ಪ್ರತಿಭಾ ಸಾಮಗ ಅವರನ್ನು ಸಂಗೀತೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಇದು ಇವರಿಗೆ ಸಂದ ಎಲ್ಲಾ ಪುರಸ್ಕಾರಗಳ ಗರಿಮೆಯನ್ನು ಇನ್ನಷ್ಟು ಎತ್ತರಕ್ಕೆ ಏರಿಸುವಂಥಾದ್ದು.

– ವಿದ್ಯಾಲಕ್ಷ್ಮೀ ಕಡಿಯಾಳಿ

Advertisement
Advertisement

Udayavani is now on Telegram. Click here to join our channel and stay updated with the latest news.

Next