ಭವಿಷ್ “ಮಗಾ ತೆಂಬರೆ ಬೊಟ್ಟುಗನಾ…ಮಗಾ ತೆಂಬರೆ ಬೊಟ್ಟುಗನಾ’…ಹಾಡು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್. ಇತ್ತೀಚೆಗೆ ಬಿಡುಗಡೆಯಾದ ಶಿವಣ್ಣ ಅಭಿನಯದ ಕನ್ನಡ ಸಿನೆಮಾ ಆಯುಷ್ಮಾನ್‌ಭವದ ಹಾಡು ಇದು. ಈ ಹಾಡಿನ ಮ್ಯೂಸಿಕ್ ಡೈರೆಕ್ಟರ್ ಕುಡ್ಲದ ಅಪ್ಪಟ ಪ್ರತಿಭೆ, ಸಂಗೀತ ಮಾಂತ್ರಿಕ ಗುರುಕಿರಣ್. ಇದು ಗುರುಕಿರಣ್ ಅವರ 100ನೇ ಸಿನೆಮಾ ಹಾಡು!
ತನ್ನ ಸಂಗೀತ ನಿರ್ದೇಶನದಲ್ಲಿ ಶತಕ ಬಾರಿಸಿರುವ ಗುರುಕಿರಣ್ ನೂರನೇ ಸಿನೆಮಾದ ಹಾಡಿನಲ್ಲಿ ತುಳು ಭಾಷೆ ಬಳಸಿರುವುದು ವಿಶೇಷ. ಕೋಸ್ಟಲ್‌ವುಡ್ ಮೂಲಕ ಬೆಳ್ಳಿ ತೆರೆಗೆ ಎಂಟ್ರಿಯಾಗಿರುವ ಗುರುಕಿರಣ್ ಸುಮಾರು ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ಸ್ಯಾಂಡಲ್‌ವುಡ್‌ನ ಸಂಗೀತ ಕ್ಷೇತ್ರದಲ್ಲಿ ದಾಖಲೆ ಸಾಧನೆ ಮಾಡಿದವರು.
“ಕುಡ್ಲ ಟಾಕೀಸ್’ ಜತೆಗೆ ತನ್ನ ಪ್ರಾರಂಭಿಕ ದಿನಗಳ ಬಗ್ಗೆ ಮಾತನಾಡಿದ ಅವರು “ನಾನು ಮಂಗಳೂರಿನಲ್ಲಿ ಶಾಲಾ, ಕಾಲೇಜು ಓದುತ್ತಿರುವಾಗಲೇ ಹಾಡುತ್ತಿದ್ದೆ. ಮುಂದೆ ಮ್ಯೂಸಿಕ್ ತಂಡ ಕಟ್ಟಿ ಸಂಗೀತ ರಸರಂಜೆಗಳನ್ನು ನೀಡುತ್ತಿದ್ದೆ. 1988ರಲ್ಲಿ ಬದುಕೊಂಜಿ ಕಬಿತೆ ಎಂಬ ತುಳು ಸಿನೆಮಾದಲ್ಲಿ ಹೀರೋ ಆಗಿ ನಟಿಸಿ, ಬೆಳ್ಳಿಪರದೆಗೆ ಎಂಟ್ರಿಯಾದೆ. ಅನಂತರ ಕನ್ನಡ ನಿಷ್ಕರ್ಷ ಸೇರಿದಂತೆ ನಾನಾ ಸಿನೆಮಾಗಳಲ್ಲಿ ನಟಿಸಿದೆ. ಆದರೆ ಸಂಗೀತ ನನ್ನ ನೆಚ್ಚಿನ ಕ್ಷೇತ್ರ. ಇದ ರಿಂದಾಗಿ ಮಂಗಳೂರು ಬಿಟ್ಟು ಬೆಂಗಳೂ ರಿಗೆ ಶಿಫ್ಟ್ ಆದೆ. 1994ರಲ್ಲಿ ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್ ಅವರೊಂದಿಗೆ ಸೇರಿ ಸಿನೆಮಾ ಸಂಗೀತದ ಕುರಿತು ಕಲಿತೆ. ಬೆಂಗಳೂರಿನ ಗಾಂಧಿನಗರದಲ್ಲಿ ಸಾಕಷ್ಟು ಸುತ್ತಾಡಿದೆ. 1998ರಲ್ಲಿ ಉಪೇಂದ್ರ ನಿರ್ದೇಶಿಸಿ, ನಟಿಸಿದ “ಎ’ ಸಿನೆಮಾದಲ್ಲಿ ಸಂಗೀತ ನಿರ್ದೇಶನ ಮಾಡುವ ಅವಕಾಶ ಆಯಿತು. ಅದರ ಮ್ಯೂಸಿಕ್ ಕೂಡ ವಿಭಿನ್ನವಾಗಿ ಗುರುತಿಸಿ ಕೊಂಡಿತು. ಇದು ನನ್ನ ಜೀವನದ ದಿಕ್ಕನ್ನೇ ಬದಲಿಸಿತು’ ಎಂದು ನೆನಪು ಮಾಡುತ್ತಾರೆ.