Advertisement

ಸಂಗೀತ ಪರಿಷತ್‌ನ ರಜತ ಸಂಭ್ರಮದಲ್ಲಿ ಹರಿದ ಗಾನ ಸುಧೆ

12:30 AM Mar 08, 2019 | |

ಸಂಗೀತ ಪರಿಷತ್‌ ಮಂಗಳೂರು ಇದರ ರಜತ ಸಂಭ್ರಮ ಸರಣಿ ಕಾರ್ಯಕ್ರಮದಂಗವಾಗಿ ಫೆ. 17 ರಂದು ಮೂರು ಸಂಗೀತ ಕಛೇರಿಗಳನ್ನು ಮಂಗಳೂರಿನಲ್ಲಿ ಏರ್ಪಡಿಸಿತು. ಮೊದಲ ಕಾರ್ಯಕ್ರಮ ನಡೆಸಿಕೊಟ್ಟವರು ಜಯಕೃಷ್ಣನ್‌ ಉನ್ನಿ. ಗಾಂಭೀರ್ಯ ತುಂಬಿದ ಶಾರೀರದಲ್ಲಿ, ವೀಣಾ ಕುಪ್ಪಯ್ಯರ್‌ ಅವರ ನಾರಾಯಣಗೌಳ ವರ್ಣ ಮಗುವಾ ನಿನ್ನೆ ಕೋರಿ ಮೂಲಕ ಕಛೇರಿ ಆರಂಭಿಸಿದರು. ಪಟ್ಣಂ ಸುಬ್ಬಯ್ಯರ್‌ ಅವರ ಸೌರಾಷ್ಟ್ರದ ನಿನ್ನು ಜೂಚಿ ಧನ್ಯುಡೈತಿ ಅನ್ನು ಲಘು ಆಲಾಪನೆಯೊಂದಿಗೆ ಪ್ರಸ್ತುತ ಪಡಿಸಿದರು. ಸುಂದರ ಸಂಚಾರಗಳ ಆಲಾಪನೆಯೊಂದಿಗೆ ದೀಕ್ಷಿತರ ಮಧ್ಯಮಾವತಿಯ ಧರ್ಮ ಸಂವರ್ಧಿನಿ ಧನುಜ ಸಂವರ್ಧಿನಿಯನ್ನು ನೆರವಲ್‌ ಮತ್ತು ಅಂದವಾದ ಸ್ವರದೊಂದಿಗೆ ಪ್ರಸುತ ಪಡಿಸಿ, ದೀಕ್ಷಿತರ ಹಮೀರ್‌ ಕಲ್ಯಾಣಿಯ ಪರಿಮಳ ರಂಗನಾಥಂ ಭಜೇಹಂ ಮತ್ತು ಸ್ವಾತಿ ತಿರುನಾಳ್‌ ಅವರ ಆರಭಿಯ ನರಸಿಂಹ ಮಾಮವಗಳು ಲವಲವಿಕೆಯನ್ನುಂಟು ಮಾಡಿದವು. ಪಾಪನಾಶಂ ಶಿವನ್‌ ಅವರ ವರಾಳಿಯ ಕಾವಾವಾ ಕಂದಾ ವಾವಾ ವನ್ನು ಸಾಮರ್ಥಯಕ್ಕೆ ತಕ್ಕುದಾದ ಆಲಾಪನೆ, ನೆರವಲ್‌ ಮತ್ತು ಸ್ವರ ಪ್ರಸ್ತಾರಗಳನ್ನು ನಿರೂಪಿಸಿದರು. ದರ್ಬಾರ್‌ ನ ಯೋಚನಾ ಕಮಲ ಲೋಚನಾವನ್ನು ನಿರೂಪಿಸಿ ಬೇಗಡೆ ರಾಗದಲ್ಲಿ ಚಿಕ್ಕ-ಚೊಕ್ಕದಾದ ರಾಗಂ-ತಾನಂ-ಪಲ್ಲವಿ ನಿರೂಪಿಸಿ ಸೈ ಎನಿಸಿಕೊಂಡರು. ರಾಗಮಾಲಿಕೆಯಲ್ಲಿ ಪುರಂದರದಾಸರ ಚಂದ್ರಚೂಡ ಶಿವಶಂಕರ ಮತ್ತು ತಿಲ್ಲಾನವನ್ನು ಭಾವಪ್ರಧಾನವಾಗಿ ನಿರೂಪಿಸಿ ಕಾರ್ಯಕ್ರಮ ಮುಗಿಸಿದರು. ವಯಲಿನ್‌ನಲ್ಲಿ ಮಾ| ಗೋಕುಲ್‌ , ಮೃದಂಗದಲ್ಲಿ ನಿಕ್ಷಿತ್‌ ಪುತ್ತೂರು ಮತ್ತು ಘಟದಲ್ಲಿ ಶರತ್‌ ಕೌಶಿಕ್‌ ಸಹಕರಿಸಿದ್ದರು. 

Advertisement

ಅಪರಾಹ್ನದ ಮೊದಲ ಕಛೇರಿ ಯುವ ಕಲಾವಿದರ ಮೇಳೈಕೆಯಲ್ಲಿ ವಿ| ಬಿ.ಎನ್‌.ಎಸ್‌.ಮುರಳಿ ಅವರ ಶಿಷ್ಯ ಸುಹಾಸ್‌ ಭಾರದ್ವಾಜ್‌ ಅವರ ಗಾಯನ. ಕೀರವಾಣಿ ವರ್ಣದೊಂದಿಗೆ ಕಾರ್ಯಕ್ರಮ ಆರಂಭಿಸಿ, ಕಮಲಾಮನೋಹರಿಯ ಕಂಜದಳಾಯತಾಕ್ಷಿ ಮತ್ತು ರೇವಗುಪ್ತಿ(ಭೂಪಾಲಮ್‌)ನ ಗೋಪಾಲಕ ಪಾಹಿಮಾಮ್‌ ಅನ್ನು ಭಕ್ತಿಪೂರ್ವಕವಾಗಿ ಹಾಡಿದರು. ಆಲಾಪನೆ ಮತ್ತು ಸ್ವರಕಲ್ಪನೆಗಳೊಂದಿಗೆ ನಾಟರಾಗದ ಸ್ವಾಮಿನಾಥ ಪರಿಪಾಲಯ ಪ್ರಸ್ತುತಪಡಿಸಿ ತ್ಯಾಗರಾಜರ ಸಾರಮತಿಯ ಮೋಕ್ಷಮು ಗಲದಾವನ್ನು ಅನುಪಲ್ಲವಿಯೊಂದಿಗೆ ಆರಂಭಿಸಿ ಅಪ್ಯಾಯಮಾನವಾಗಿ ನಿರೂಪಿಸಿದರು. ತ್ಯಾಗರಾಜರ ಕೇಸರಿಯ ನನುಗನ್ನ ತಲ್ಲಿಯನ್ನು ನಿರೂಪಿಸಿ ಆಲಾಪನೆ ಮತ್ತು ತಾನಂನೊಂದಿಗೆ ಅಂಬುಜಾಕೃಷ್ಣರವರ ರಂಜನಿಯ ಕಾದಿರುವೆನು ನಾನು ಶ್ರೀರಾಮ ಕಾಪಾಡುವನ್ನು ಪ್ರಸ್ತುತ ಪಡಿಸಿದರು. ವಾಗಧೀಶ್ವರಿಯ ಸದಾ ನಿನ್ನ ಸ್ಮರಿಸುವಂಥ, ಪುರಂದರದಾಸರ ನಾರಾಯಣ ನಿನ್ನ ನಾಮದ ಮತ್ತು ಮಂಗಳಾದೆವಿಯ ಮಡಿಲಲ್ಲಿ ಶ್ರೀಮಂಗಳಾದೇವಿ ನಿನಗೆ ಪ್ರಣಾಮದೊಂದಿಗೆ ಕಾರ್ಯಕ್ರಮ ಮುಗಿಸಿದರು. ಕೃತಿಕ್‌ ಕೌಶಿಕ್‌ ಪಿಟೀಲಿನಲ್ಲಿ ಮತ್ತು ಅವಿನಾಶ್‌ ಬೆಳ್ಳಾರೆ ಮೃದಂಗದಲ್ಲಿ ಸಹಕರಿಸಿದರು. 

 ವಾಣೀ ಸತೀಶ್‌ ಸಂಜೆಯ ಪ್ರಧಾನ ಕಛೇರಿಯನ್ನು ನಡೆಸಿಕೊಟ್ಟರು. ವೀಣಾ ಕುಪ್ಪಯ್ಯರ್‌ ಅವರ ಬೇಗಡೆ ವರ್ಣದೊಂದಿಗೆ ಹಾಡುಗಾರಿಕೆಯನ್ನು ಆರಂಭಿಸಿ, ಲಘು ಆಲಾಪನೆಯೊಂದಿಗೆ ಮುತ್ತುಸ್ವಾಮಿ ದೀಕ್ಷಿತರ ಸಿದ್ಧಿ ವಿನಾಯಕಂ ಅನಿಷಂ ಪ್ರಸ್ತುತ ಪಡಿಸಿದರು. ಸುಬ್ರಾಯ ಶಾಸ್ತ್ರಿಗಳ ರೀತಿ ಗೌಳದ ಜನನೀ ನಿನುವಿನವನ್ನು ಭಾವಪೂರ್ಣವಾಗಿ ಹಾಡಿ ಆಲಾಪನೆಯೊಂದಿಗೆ ಪಟ್ಣಂ ಸುಬ್ರಹ್ಮಣ್ಯ ಅಯ್ಯರ್‌ ಅವರ ಲತಾಂಗಿ ರಾಗದ ಮರಿವೇರೆ ದಿಕ್ಕೆವ್ವರೊವನ್ನು ಹಾಡಿ ಮನಗೆದ್ದರು. ದೀಕ್ಷಿತರ ರಾಗಮಾಲಿಕೆ ಶ್ರೀವಿಶ್ವನಾಥಂ ಭಜೇಹಂ ಸುಶ್ರಾವ್ಯವಾಗಿ ಹಾಡಿ ತ್ಯಾಗರಾಜರ ಪೂರ್ಣಚಂದ್ರಿಕದ ತೆಲಿಸಿರಾಮವನ್ನು ಪ್ರಸ್ತುತಪಡಿಸಿದರು. ಪ್ರಧಾನ ರಾಗವಾಗಿ ವೀಣಾಕುಪ್ಪಯ್ಯರ್‌ ಅವರ ಕಾಂಬೋಜಿಯ ಕೋನೀಯಾದೀನಾ ನಾಪೈ ಅನ್ನು ವಿಸ್ತಾರವಾದ ರಾಗಾಲಾಪನೆ, ವಿದ್ವತ್‌ ಪೂರ್ಣ ನೆರವಲ್‌, ಸ್ವರ ಕಲ್ಪನೆಗಳನ್ನು ಸಮರ್ಥವಾಗಿ ನಿರ್ವಹಿಸಿ ಕಲಾಪ್ರೌಢಿಮೆಯನ್ನು ಸಾದರಪಡಿಸಿದರು. ಪುರಂದರದಾಸರ ಗುರುವಿನ ಗುಲಾಮನಾಗುವ ತನಕವನ್ನು ಹಾಡಿ ಅಣ್ಣಮಾಚಾರ್ಯರ ಯಮುನ ಕಲ್ಯಾಣಿಯ ಭಾವಯಾಮಿ ಗೋಪಾಲಬಾಲಂ ಅನ್ನು ಭಕ್ತಿ ಪೂರ್ವಕವಾಗಿ ನಿರೂಪಿಸಿದರು. ನೀಲಾಂಬರಿಯ ಮಾಧವ ಮಾಮವ ವನ್ನು ಹಾಡಿ, ಪುರಂದರದಾಸರ ದಾಸನ ಮಾಡಿಕೊ ಎನ್ನ ಮತ್ತು ತಿಲ್ಲಾನದೊಂದಿಗೆ ಕಛೇರಿ ಮುಗಿಸಿದರು. ವಯಲಿನ್‌ನಲ್ಲಿ ಕು| ಅದಿತಿ ಕೃಷ್ಣಪ್ರಕಾಶ್‌ ಮೃದಂಗದಲ್ಲಿ ಅನಿರುದ್ಧ ಎಸ್‌. ಭಟ್‌ ಮತ್ತು ಘಟದಲ್ಲಿ ಶರತ್‌ ಕೌಶಿಕ್‌ ಸಹಕರಿಸಿದ್ದರು.

ಕೃತಿ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next