ಬರೋಡ: ಸಯ್ಯದ್ ಮುಷ್ತಾಕ್ ಅಲಿ ಟಿ20 ಪಂದ್ಯಾವಳಿ ಲೀಗ್ ಹಂತ ಪೂರೈಸಿದ್ದು, ಜ. 26ರಿಂದ ನಾಕೌಟ್ ಸ್ಪರ್ಧೆಗಳು ಆರಂಭವಾಗಲಿವೆ. ಈ ಹಂತದಲ್ಲಿ ನಾಕೌಟ್ ಪಂದ್ಯಗಳಲ್ಲಿ ಆಡಲಿರುವ ಎಲ್ಲ ಕ್ರಿಕೆಟಿಗರಿಗೆ ಬಿಸಿಸಿಐ ಕೋವಿಡ್-19 ಟೆಸ್ಟ್ ನಡೆಸಿದ್ದು, ಎಲ್ಲರ ಫಲಿತಾಂಶವೂ ನೆಗೆಟಿವ್ ಬಂದಿದೆ.
ಕ್ವಾರ್ಟರ್ ಫೈನಲ್ಸ್ ಸೇರಿದಂತೆ ಎಲ್ಲ ನಾಕೌಟ್ ಪಂದ್ಯಗಳೂ ಅಹ್ಮದಾಬಾದ್‌ನ ಮೊಟೇರಾ ಸ್ಟೇಡಿಯಂನಲ್ಲಿ ನಡೆಯಲಿದೆ. ಕ್ರಿಕೆಟಿಗರು, ಅಧಿಕಾರಿಗಳೆಲ್ಲ ಕ್ವಾರಂಟೈನ್‌ನಲ್ಲಿದ್ದು, ಇವರೆಲ್ಲರ ಫಲಿತಾಂಶ ನೆಗೆಟಿವ್ ಬಂದಿದೆ ಎಂದು ಗುಜರಾತ್ ಕ್ರಿಕೆಟ್ ಅಸೋಸಿಯೇಶನ್ (ಜಿಸಿಎ) ತಿಳಿಸಿದೆ.
ರಾಷ್ಟ್ರೀಯ ಕ್ರಿಕೆಟ್ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮ ಅವರು ನಾಕೌಟ್ ಪಂದ್ಯಗಳನ್ನು ವೀಕ್ಷಿಸಲಿದ್ದಾರೆ. ಜತೆಗೆ ಆಯ್ಕೆಗಾರರಿಗಾಗಿ ವಿಶೇಷ ಸಂಪರ್ಕಾಧಿಕಾರಿ ಒಬ್ಬರನ್ನೂ ನೇಮಿಸಲಾಗಿದೆ.
ಜ. 26, 27 ಕ್ವಾ.ಫೈನಲ್ಸ್ :
ಜನವರಿ 26ರ ಮೊದಲ ಕ್ವಾರ್ಟರ್ ಫೈನಲ್‌ನಲ್ಲಿ ಕರ್ನಾಟಕ-ಪಂಜಾಬ್ ಮುಖಾಮುಖೀ ಆಗಲಿವೆ. ದಿನದ ಇನ್ನೊಂದು ಪಂದ್ಯ ತಮಿಳುನಾಡು- ಹಿಮಾಚಲ ಪ್ರದೇಶ ನಡುವೆ ನಡೆಯಲಿದೆ. ಜ. 27ರಂದು ಹರ್ಯಾಣ-ಬರೋಡ ಹಾಗೂ ಬಿಹಾರ-ರಾಜಸ್ಥಾನ ಮುಖಾಮುಖೀಯಾಗಲಿವೆ.