ಬೆಂಗಳೂರು: ಎಲ್ಲೆಂದರಲ್ಲಿ ತಲೆಯೆತ್ತುವ “ನಾಯಿ ಕೊಡೆ’ಯಾಗಿ ತಾತ್ಸಾರಕ್ಕೆ ಒಳಗಾಗಿದ್ದ ಅಣಬೆಗೆ ಈಗ ರಾಜ ಮರ್ಯಾದೆ. ಮಾರುಕಟ್ಟೆಯಲ್ಲಿ ಇದಕ್ಕೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಟೆಕ್ಕಿಗಳು ಮತ್ತು ಸ್ವಸಹಾಯ ಗುಂಪುಗಳು ಅಣಬೆ ಹಿಂದೆ ಬಿದ್ದಿದ್ದಾರೆ! ಭವಿಷ್ಯದ ಈ ಹೊಸ “ಟ್ರೆಂಡ್’ ಅನ್ನು ಉತ್ತೇಜಿಸಲು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ
(ಐಐಎಚ್‌ಆರ್)ಯು “ರೆಡಿ ಟು ಫ್ರೂಟ್ ‘ ಬ್ಯಾಗ್ ಗಳನ್ನು ಅಭಿವೃದ್ಧಿ ಪಡಿಸಿದೆ. ಹೆಸರೇ ಸೂಚಿಸುವಂತೆ ಅಣಬೆ ಇದರಲ್ಲಿ ರೆಡಿಮೇಡ್ ಆಗಿ ಸಿಗುತ್ತದೆ. ಕೇವಲ ನೀರು ಚಿಮುಕಿಸಿದರೆ ಸಾಕು, ನಾಲ್ಕಾರು ದಿನಗಳಲ್ಲಿ ಅಣಬೆ ದೊರೆಯುತ್ತದೆ. ಈ ಬ್ಯಾಗ್‌ಗಳಿಗೆ ಭಾರೀ ಬೇಡಿಕೆ ಬಂದಿದ್ದು, ಸ್ವಸಹಾಯ ಗುಂಪುಗಳಿಂದಲೇ ಪ್ರತಿ ತಿಂಗಳು ಸಾವಿರಕ್ಕೂ ಅಧಿಕ ಬ್ಯಾಗ್‌ಗಳು ಖರೀದಿಯಾಗುತ್ತಿವೆ. ಮತ್ತೂಂದೆಡೆ ಅಲ್ಪಾವಧಿಯಲ್ಲೇ ಸುಮಾರು 25ರಿಂದ 30 ಜನ ಐಟಿ ಉದ್ಯೋಗಿಗಳು ಕೂಡ ಈ ಸಂಬಂಧ ತರಬೇತಿ ಪಡೆದುಕೊಂಡು ಹೋಗಿದ್ದಾರೆ. ಭವಿಷ್ಯದ “ಉದ್ಯಮ’ವಾಗಿ ರೂಪುಗೊಳ್ಳುತ್ತಿರುವ ಈ ಅಣಬೆ ಬೆಳೆಗೆ ಬೇಡಿಕೆ ಕೇಳಿಬರುತ್ತಿದೆ. ಅದನ್ನು ಪೂರೈಸುವಲ್ಲಿ ರೆಡಿ ಟು ಫ್ರೂಟ್ ಬ್ಯಾಗ್ ಗಳು ಪ್ರಮುಖ ಪಾತ್ರ ವಹಿಸಲಿವೆ. ಟೆಕ್ಕಿಗಳು, ಸ್ವಸಹಾಯ ಗುಂಪುಗಳಿಗೆ ಬ್ಯಾಗ್‌ಗಳ ತಯಾರಿಕೆ ಕುರಿತು ತರಬೇತಿ ನೀಡಿದರೆ, ಆದಾಯ ಬರುತ್ತದೆ. ಜತೆಗೆ ಉದ್ಯೋಗವೂ ದೊರೆಯುತ್ತದೆ ಎಂಬ ಲೆಕ್ಕಾಚಾರ ಐಐಎಚ್‌ಆರ್ ವಿಜ್ಞಾನಿಗಳದ್ದಾಗಿದೆ.
ಉತ್ತಮ ಪೋಷಕಾಂಶಗಳನ್ನು ಒಳಗೊಂಡಿರುವ ಅಣಬೆ ಬೇಸಾಯ ಅತ್ಯಂತ ಸರಳ ಕ್ರಮ. ನಿರ್ವಹಣೆ ಕಡಿಮೆ ಹಾಗೂ ವರ್ಷಪೂರ್ತಿ ಇದು ಇಳುವರಿ ಕೊಡುವುದರ ಜತೆಗೆ ಕಡಿಮೆ ಜಾಗದಲ್ಲಿ ಹೆಚ್ಚು ಬೆಳೆ ತೆಗೆಯಬಹುದು. ಮಾರುಕಟ್ಟೆಯಲ್ಲಿ ಬೇಡಿಕೆ ಕೂಡ ಇದೆ. ಮೌಲ್ಯವರ್ಧಿತ ಉತ್ಪನ್ನಗಳೂ ಜನಪ್ರಿಯಗೊಳ್ಳುತ್ತಿವೆ. ಈ ಕಾರಣಗಳಿಂದಾಗಿ ಐಟಿ ಉದ್ಯೋಗಿಗಳು ಮತ್ತು ಸ್ತ್ರೀಶಕ್ತಿ ಸಂಘಗಳು ಇದರತ್ತ ಮುಖಮಾಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದೆ ಎಂದು ಐಐಎಚ್‌ಆರ್‌ನ ಪ್ರಧಾನ ವಿಜ್ಞಾನಿ (ಅಣಬೆ ವಿಭಾಗ) ಡಾ.ಮೀರಾ ಪಾಂಡೆ “ಉದಯವಾಣಿ’ಗೆ ತಿಳಿಸಿದರು.
ಎರಡು ಕಡೆ ಘಟಕ ಸ್ಥಾಪನೆ: “ಮಾನ್ಯತಾ ಟೆಕ್ ಪಾರ್ಕ್ ಸೇರಿದಂತೆ ನಗರದ ಹಲವು ಟೆಕ್‌ಪಾರ್ಕ್ ಗಳಲ್ಲಿ ಜಾಗ ಇದೆ. ಕೆಲವು ಕಂಪೆನಿಗಳಿಂದ ತರಕಾರಿ ಬೆಳೆಯಲು ಅಲ್ಲಿನ ಉದ್ಯೋಗಿಗಳಿಗೆ ಪ್ರೋತ್ಸಾಹವೂ ದೊರೆಯುತ್ತಿದೆ. ಅಲ್ಲೆಲ್ಲಾ ಬೆಳೆದು, ರೆಡಿ ಟು ಫ್ರೂಟ್ ಬ್ಯಾಗ್‌ಗಳ ತಯಾರಿಕೆ ಘಟಕಗಳನ್ನು ತೆರೆಯಲು ಅವಕಾಶ ಇದೆ. ಹೀಗೆ ಬೆಳೆದಿರುವುದನ್ನು ಸ್ವ-ಸಹಾಯ ಸಂಘಗಳ ಮೂಲಕ ಗ್ರಾಮೀಣ ಪ್ರದೇಶಗಳಿಗೆ ತಲುಪಿಸಬಹುದು’ ಎಂದು ಅವರು ಅಭಿಪ್ರಾಯಪಟ್ಟರು. “ಸ್ವ-ಸಹಾಯ ಸಂಘಗಳಿಗೆ ವೇದಿಕೆ ಕಲ್ಪಿಸಲು ಸರ್ಕಾರೇತರ ಎರಡು ಸಂಸ್ಥೆಗಳು ಮುಂದೆಬಂದಿದ್ದು, ರಾಜಾನುಕುಂಟೆ ಮತ್ತು ಶಿವನಹಳ್ಳಿಯಲ್ಲಿ ಈ ಮಾದರಿಯ ಬ್ಯಾಗ್ ತಯಾರಿಕೆ ಘಟಕಗಳನ್ನು ತೆರೆಯಲು ನಿರ್ಧರಿಸಿವೆ. ಅದಕ್ಕೆ ಪೂರಕ ನೆರವು ನೀಡುವುದಾಗಿ ಐಐಎಚ್‌ಆರ್ ಹೇಳಿದೆ. ಈ ಘಟಕಗಳಲ್ಲಿ ವ್ಯವಸ್ಥಿತವಾಗಿ ತರಬೇತಿ ಪಡೆದು ಮಾಡಿದರೆ, ದಿನಕ್ಕೆ ಕನಿಷ್ಠ ತಲಾ 300 ರೆಡಿ ಟು ಫ್ರೂಟ್ ಬ್ಯಾಗ್‌ಗಳನ್ನು ತಯಾರಿಸಬಹುದು. ಒಂದು ಬ್ಯಾಗ್‌ನಲ್ಲಿ 250 ಗ್ರಾಂ ಅಣಬೆ ದೊರೆಯುತ್ತದೆ. ಅಂದರೆ, 300 ಬ್ಯಾಗ್‌ನಲ್ಲಿ 75 ಕೆಜಿ ಆಗುತ್ತದೆ. ಮಾರುಕಟ್ಟೆಯಲ್ಲಿ ಕೆಜಿಗೆ 200 ರೂ. ಇದೆ. ಶೇ. 50ರಷ್ಟು ಖರ್ಚು ಕಡಿತಗೊಳಿಸಿದರೂ ಸಾವಿರಾರು ರೂ. ಉಳಿತಾಯ ಆಗುತ್ತದೆ’ ಎಂದು ಡಾ.ಮೀರಾ ಪಾಂಡೆ ವಿವರಿಸಿದರು.
ಅಲ್ಪಾವಧಿಯಲ್ಲಿ 30 ಟೆಕ್ಕಿಗಳಿಗೆ ತರಬೇತಿ : ಇತ್ತೀಚಿನ ದಿನಗಳಲ್ಲಿ ಅಣಬೆಗೆ ಬೇಡಿಕೆ ಹೆಚ್ಚಾಗಿದೆ. 30ಕ್ಕೂ ಹೆಚ್ಚು ಐಟಿ ಉದ್ಯೋಗಿಗಳು ಅಣಬೆ ಬೇಸಾಯ ಕುರಿತು ಅಲ್ಪಾವಧಿಯಲ್ಲೇ ನಮ್ಮಲ್ಲಿ ತರಬೇತಿ ಪಡೆದಿದ್ದಾರೆ. ತಿಂಗಳಿಗೆ ಸಾವಿರಕ್ಕೂ ಅಧಿಕ ರೆಡಿ ಟು ಫ್ರೂಟ್ ಬ್ಯಾಗ್‌ಗಳು ಮಾರಾಟ ಆಗುತ್ತಿವೆ. ಬಿಳಿಗಿರಿ ರಂಗನ ಬೆಟ್ಟ (ಬಿ.ಆರ್.ಹಿಲ್ಸ್)ದಲ್ಲಿರುವ ನೂರಾರು ಬುಡಕಟ್ಟು ಮಹಿಳೆಯರು ಅಣಬೆ ಬೆಳೆಯುತ್ತಿದ್ದು, 200 ರೂ.ಗೆ ಕೆಜಿ ಮಾರಾಟ ಮಾಡುತ್ತಿದ್ದಾರೆ ಎನ್ನುತ್ತಾರೆ ಐಐಎಚ್ ಆರ್ ನಿರ್ದೇಶಕ ಎಂ.ಆರ್. ದಿನೇಶ್.
-ವಿಜಯಕುಮಾರ್ ಚಂದರಗಿ