ಮಾದನಹಿಪ್ಪರಗಾ: ಇಲ್ಲೊಬ್ಬ ಮೆಕ್ಯಾನಿಕಲ್ ಎಂಜಿನಿಯರ್ ಅಣಬೆ ಕೃಷಿ ಕೈಗೊಂಡು ಲಾಭ ಗಳಿಸಿ, ಇನ್ನಿತರ ರೈತರಿಗೆ ಮಾದರಿಯಾಗಿದ್ದಾರೆ.
ಕಳೆದ ಐದು ವರ್ಷಗಳಿಂದ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಗ್ರಾಮದ ಶಿವಶರಣಪ್ಪ ಖಂಡಪ್ಪ ಪರೇಣಿ ಎನ್ನುವರೇ ಅಣಬೆ ಕೃಷಿಯಲ್ಲಿ ಲಾಭ ಕಂಡುಕೊಂಡವರು. ಇವರು ತಮ್ಮ ಕಂಪನಿ ಮುಖಾಂತರ ಆನ್‌ಲೈನ್‌ಲ್ಲಿ ದೇಶ-ವಿದೇಶದ ವಿದ್ಯಾರ್ಥಿಗಳಿಗೆ ಗಣಿತ ಶಾಸ್ತ್ರ ಬೋಧನೆ ಮಾಡುತ್ತಾರೆ. ಇವರಿಗಿರುವುದು ಕೇವಲ ಅರ್ಧ ಎಕರೆ ಜಮೀನು. ತಂದೆ-ತಾಯಿ ಇದರಲ್ಲಿಯೇ ತರಕಾರಿ ಬೆಳೆದು ಮಾರಾಟ ಮಾಡುತ್ತಿದ್ದಾರೆ.
ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಕಂಪನಿ (ವರ್ಕ್ ಫ್ರಂ ಹೋಂ) ಮನೆಯಿಂದ ಕಚೇರಿ ಕೆಲಸ ನಿರ್ವಹಿಸಲು ಅವಕಾಶ ಮಾಡಿಕೊಟ್ಟಾಗ ಅವರು ಅಣಬೆ ಕೃಷಿಗೆ ಕೈ ಹಾಕಿದರು. ಸದ್ಯ 50×100 ಅಡಿ ಅಳತೆಯ ಶೆಡ್ ಬಾಡಿಗೆ ಪಡೆದಿದ್ದಾರೆ. ಮೂಲ ಬಂಡವಾಳ 50 ಸಾವಿರ ರೂ. ಹಾಕಿದ್ದಾರೆ. 5 ತಿಂಗಳಲ್ಲಿ 3 ಲಕ್ಷ ರೂ. ಲಾಭಪಡೆದಿದ್ದಾರೆ. 110ರೂ.ಗಳಂತೆ ಅಣಬೆ ಬೀಜ ಖರೀದಿ ಮಾಡುತ್ತಿದ್ದಾರೆ. ಇವರು ಬೆಳೆದ ಅಣಬೆ ಬೆಂಗಳೂರು, ಮುಂಬೈ, ಪುಣೆ, ಹೈದ್ರಾಬಾದ ಸ್ಟಾರ್ ಹೋಟೆಲ್‌ಗಳಿಗೆ ಮತ್ತು ಡಾಬಾಗಳಿಗೆ ಸರಬರಾಜು ಮಾಡುತ್ತಿದ್ದಾರೆ.
ಒಂದು ಕಿಲೋ ಅಣಬೆಗೆ ಒಂದು ಸಾವಿರ ರೂ. ಆದರೆ ಒಂದು ಕೆ.ಜಿ ಅಣಬೆ ಪೌಡರ್ ಬೆಲೆ 1500 ರೂ. ಇದೆ. 25 ಡಿಗ್ರಿ ತಾಪಮಾನದಲ್ಲಿ ಬೆಳೆಯುವ ಈ ಬೆಳೆ ಎರಡು ತಿಂಗಳ ಒಳಗೆ ಮಾರಾಟಕ್ಕೆ ಬರುತ್ತದೆ. ಇದನ್ನು ಆನ್ ಲೈನ್ ಮೂಲಕ ಖರೀದಿಸುತ್ತಿದ್ದಾರೆ.
-ಪರಮೇಶ್ವರ ಭೂಸನೂರ