ವಿಜಯಪುರ: ಒಂದು ಗುಂಟೆ ಜಮೀನು ಇಲ್ಲದೆಯೂ ಕೃಷಿಕ ಎನಿಸಿಕೊಳ್ಳಬೇಕು ಎಂಬ ಕನಸು ಕೊನೆಗೂ ನನಸಗಾಗಿದೆ. ಶಿಕ್ಷಕ ವೃತ್ತಿಯ ಪದವಿ ಪಡೆದಿರುವ ಯುವಕನ ಕೃಷಿ ಕನಸು ನನಸಾಗಿಸಿದ್ದು ಅಣಬೆ.
ಡಿಎಡ್ ಓದಿರುವ ವಿಜಯಪುರ ನಗರದ ಗಣೇಶನಗರ ನಿವಾಸಿ ವಿರೂಪಾಕ್ಷಯ್ಯ ಶಾಸ್ತ್ರಿಮಠ ಕೃಷಿಕನಾಗಬೇಕು ಎಂಬ ಹಂಬಲ ಹೊಂದಿದಾತ. ಆದರೆ ಅವರ ಕುಟುಂಬಕ್ಕೆ ತುಂಡು ಜಮೀನೂ ಇರಲಿಲ್ಲ. ಆದರೂ ಛಲ ಬಿಡದ ವಿರೂಪಾಕ್ಷಯ್ಯ ಕಳೆದ ಕೆಲ ವರ್ಷಗಳಿಂದ ವಿಜಯಪುರದಿಂದ 40-50 ಕಿ.ಮೀ. ದೂರದ ನೀರಿನ ಸಮಸ್ಯೆ ಇರುವ ಇಂಡಿ ಪರಿಸರದಲ್ಲಿ ವಾರ್ಷಿಕ ಲಾವಣಿ ಆಧಾರದಲ್ಲಿ ಕೃಷಿ ಜಮೀನು ಪಡೆದು ಒಕ್ಕಲುತನ ಮಾಡಿದ. ತರಕಾರಿ, ಹಣ್ಣು ಅಂತೆಲ್ಲ ಏನೇನೋ ಬೆಳೆದು ಕೃಷಿಕನಾಗಬೇಕು ಎಂಬ ಹಂಬಲ ಈಡೇರಿಸಿಕೊಳ್ಳಲು ಹೆಣಗುತ್ತಲೇ ಇದ್ದ.
ಈ ಹಂತದಲ್ಲಿ ಸಹೋದರ ಪ್ರವೀಣ ಶಾಸ್ತ್ರಿಮಠ ಅವರೊಂದಿಗೆ ಚರ್ಚೆ ಮಾಡಿ, ಆನ್‌ಲೈನ್ ನಲ್ಲಿ ಹುಡುಕಾಟದಲ್ಲಿ ತೊಡಗಿದಾಗ ಜಮೀನು ಇಲ್ಲದೆಯೂ ಕೃಷಿಕ ಎನಿಸಿಕೊಳ್ಳುವ ಅವಕಾಶ ಕಲ್ಪಿಸುವ ಅಣಬೆ ಬಗ್ಗೆ ತಿಳಿದಿಕೊಂಡರು.
ಸಸ್ಯಹಾರಿಗಳ ಮಾಂಸ ಎಂದು ಕರೆಸಿಕೊಳ್ಳುವ ಅಣಬೆ ಹೆಚ್ಚು ಪೌಷ್ಠಿಕತೆ ಸೇರಿದಂತೆ ಹಲವು ಆರೋಗ್ಯಕರ ಅಂಶಗಳನ್ನು ಹೊಂದಿದೆ. ಮಾಂಸಹಾರಕ್ಕೆ ಪರ್ಯಾಯ ಎಂದೂ ಕರೆಸಿಕೊಳ್ಳುವ ಮಶ್ರೂಮ್ ಗೆ ಇತ್ತೀಚೆಗೆ ಹೋಟೆಲ್, ಡಾಬಾಗಳಲ್ಲಿ ಬೇಡಿಕೆ ಹೆಚ್ಚುತ್ತಿದೆ. ಇದನ್ನರಿತು ವಿರೂಪಾಕ್ಷಯ್ಯ ಅಣಬೆ ಬೆಳೆಯತ್ತ ವಾಲಿದ್ದಾರೆ.
ಕಡಿಮೆ ಬಂಡವಾಳ, ಕಡಿಮೆ ಶ್ರಮ, ಕಡಿಮೆ ಅವಧಿಯಲ್ಲಿ ಹೆಚ್ಚು ಆದಾಯ ತರುವ ಕೃಷಿಯತ್ತ ಒಲವು ತೋರಿದರು. ಇದಕ್ಕಾಗಿ ನಗರದ ಬಾಗಲಕೋಟ ರಸ್ತೆಯ ಪರಿಸರದಲ್ಲಿ ಕೇವಲ ಒಂದು ನಿವೇಶನದಲ್ಲಿ ಶೆಡ್ ನಿರ್ಮಿಸಿಕೊಂಡು ಅಣಬೆ ಬೇಸಾಯಕ್ಕೆ ಮುಂದಾಗಿದ್ದಾರೆ.
ಒಂದೂವರೆ ವರ್ಷದಿಂದ ಅಣಬೆ ಕೃಷಿ ಮಾಡುತ್ತಿರುವ ವಿರೂಪಾಕ್ಷಯ್ಯ ವಿಜಯಪುರ ಜಿಲ್ಲೆಯ ಮೊದಲ ಅಣಬೆ ಕೃಷಿಕನೆಂಬ ಕೀರ್ತಿ ಪಡೆದಿದ್ದಾರೆ. ಕೃಷಿ ಇಲಾಖೆ ವಿರೂಪಾಕ್ಷಯ್ಯ ಅವರ ಅಣಬೆ ಕೃಷಿ ಆಸಕ್ತಿಯನ್ನು ಕಂಡು ಸರ್ಕಾರಿ ಯೋಜನೆಯ ನೆರವು ನೀಡಿದೆ.
ಅಣಬೆ ಉತ್ಪಾದನೆ ಜೊತೆಗೆ ಸ್ವಂತ ಬ್ರ್ಯಾಂಡ್ ಕೂಡ ಹೊಂದಿದ್ದಾರೆ. ಒಣ-ಹಸಿ ಅಣಬೆ ಮಾರಾಟದ ಜೊತೆಗೆ ಅಣಬೆ ಮೌಲ್ಯವರ್ಧನೆಯನ್ನೂ ಮಾಡುತ್ತಾರೆ. ಹಪ್ಪಳ ಸೇರಿದಂತೆ ವಿವಿಧ ಖಾದ್ಯ ತಯಾರಿಕೆಗೆ ಬೇಕಾದಂತೆ ಪ್ಯಾಕ್ ಮಾಡಿ ಅಣಬೆ ಪೂರೈಸುತ್ತಿದ್ದಾರೆ.
ಮಧ್ಯವರ್ತಿಗಳ ಮೊರೆ ಹೋಗದೆ ನೇರವಾಗಿ ಗ್ರಾಹಕರನ್ನು ಹುಡುಕಿಕೊಂಡಿದ್ದು, ಗ್ರಾಹಕರ ಬೇಡಿಕೆಗೆ ತಕ್ಕಂತೆ ಅವರ ಮನೆಗೆ ತೆರಳಿ ಅಣಬೆ ಪೂರೈಸುತ್ತಾರೆ. ಹೆಚ್ಚು ಗ್ರಾಹಕರನ್ನು ಹೊಂದಿಸಿಕೊಂಡರೆ ಪೂರೈಕೆ ಅಸಾಧ್ಯವೆಂದು ಸೀಮಿತ ಗ್ರಾಹಕರ ಬಳಗದಲ್ಲೇ ಅಣಬೆ ಮಾರುವ ಮಾರುಕಟ್ಟೆ ಕಂಡುಕೊಂಡಿದ್ದಾರೆ.
ನಿತ್ಯ ಒಂದೆರಡು ಗಂಟೆ ಕೆಲಸ ಮಾಡಿ, ಕೃಷಿಯಲ್ಲಿ ತೊಡಗಿದ್ದಾರೆ. ಪ್ರತಿ ಕೆ.ಜಿ. ಅಣಬೆ 500 ರೂ. ದರಕ್ಕೆ ಮಾರಾಟ ಮಾಡುತ್ತಾರೆ. ಅಣಬೆ ಬೇಸಾಯದಿಂದ ಮಾಸಿಕ ಸುಮಾರು 25 ಸಾವಿರ ರೂ. ಆದಾಯ ಪಡೆಯುತ್ತಿದ್ದಾರೆ.
ಇದೀಗ ವಿರೂಪಾಕ್ಷಯ್ಯ ಅವರ ಅಣಬೆ ಪ್ರಯೋಗಾಲಯವೇ ಪ್ರಾತ್ಯಕ್ಷಿಕೆ ಕೇಂದ್ರ ಎನಿಸಿದೆ. ಅಣಬೆ ಕೃಷಿಯಲ್ಲಿ ಬಗ್ಗೆ ವಿರೂಪಾಕ್ಷಯ್ಯ ಅವರಿಗೆ ನಿತ್ಯವೂ ನೂರಾರು ಮೊಬೈಲ್ ಕರೆಗಳು ಬರುತ್ತವೆ. ಹತ್ತಾರು ಜನರು ಇವರ ಅಣಬೆ ಪ್ರಯೋಗಾಲಯದ ಘಟಕಕ್ಕೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ.
ಅಷ್ಟರ ಮಟ್ಟಿಗೆ ಜಮೀನು ಇಲ್ಲದೆಯೂ ಕೃಷಿಕ ಎಂದು ಕರೆಸಿಕೊಳ್ಳುವ ಹಂಬಲವನ್ನು ಈಡೇರಿಸಿಕೊಳ್ಳುವ ಜೊತೆಗೆ ಅಣಬೆ ಉದ್ಯಮಿಯಾಗಿಯು ವಿರೂಪಾಕ್ಷಯ್ಯ ಸಾಧನೆ ಮಾಡುತ್ತಿದ್ದಾರೆ. ಇವರ ಸಾಧನೆಗೆ ಕೃಷಿ ವಿಜ್ಞಾನ ಕೇಂದ್ರ ಸನ್ಮಾನ ಮಾಡಿ ಗೌರವಿಸಿದೆ.
ನನ್ನ ಕುಟುಂಬಕ್ಕೆ ಜಮೀನು ಇರಲಿಲ್ಲ, ಆದರೆ ಕೃಷಿಕ ಎನಿಸಿಕೊಳ್ಳಬೇಕು ಎಂಬ ಕನಸು ದೊಡ್ಡದಾಗಿತ್ತು. ಆಗ ನನ್ನ ಕನಸು ನನಸಾಗಿಸಿದ್ದು ಅಣಬೆ. ವಿಜಯಪುರ ಜಿಲ್ಲೆಯಲ್ಲೇ ಅಣಬೆ ಬೆಳೆಯುವ ಮೊದಲಿಗ ಎಂಬ ಹಿರಿಮೆಯ ಜೊತೆಗೆ ಅಣಬೆ ಕೃಷಿಕ ಎಂದೂ ಜನ ನನ್ನನ್ನು ಗುರುತಿಸುತ್ತಿರುವುದು ಸಂತಸ ಉಂಟು ಮಾಡಿದೆ ಎನ್ನುತ್ತಾರೆ ವಿರೂಪಾಕ್ಷಯ್ಯ.
ತನ್ನಲ್ಲಿರುವ ಆರೋಗ್ಯ ಸಂಬಂಧಿ ವಿಶೇಷ ಗುಣಗಳಿಂದ ಅಣಬೆ ಮಾಂಸಾಹಾರಕ್ಕೆ ಪರ್ಯಾಯ ಎನಿಸಿಕೊಂಡಿದೆ. ವಿಜಯಪುರ ಜಿಲ್ಲೆ ಅಣಬೆ ಬೆಳೆಗೆ ಪೂರಕ ಪರಿಸರ ಹೊಂದಿದ್ದು, ಸಣ್ಣ ಸ್ಥಳದಲ್ಲಿ ಕಡಿಮೆ ಬಂಡವಾಳದಿಂದ ಅಣಬೆ ಕೃಷಿ ಮಾಡುತ್ತಿರುವ ವಿರೂಪಾಕ್ಷಯ್ಯ ನಿದರ್ಶನವಾಗಿದ್ದಾರೆ ಎನ್ನುತ್ತಾರೆ ಕೃ.ವಿ.ಕೇಂ. ಹಿಟ್ನಳ್ಳಿ ಕೃಷಿ ವಿಜ್ಞಾನಿ ಶ್ವೇತಾ ಮಣ್ಣಿಕೇರಿ.
ತಾಂತ್ರಿಕ ಪದವೀಧರನಾಗಿರುವ ನಾನು ಅಣಬೆ ಕೃಷಿ ಬಗ್ಗೆ ಆಸಕ್ತಿ ಹೊಂದಿದ್ದು, ವಿರೂಪಾಕ್ಷಯ್ಯ ಅವರಿಂದ ಪ್ರೇರಿತನಾಗಿ ಅಣಬೆ ಬೆಳೆಯಲು ಯೋಜಿಸಿದ್ದೇನೆ. ಇದಕ್ಕಾಗಿ ಅಣಬೆ ಕೃಷಿ ಕುರಿತು ತರಬೇತಿಯನ್ನೂ ಪಡೆದಿದ್ದು, ಅಣಬೆ ಬೆಳೆಯುವ ಆಸಕ್ತಿ ಹೆಚ್ಚಿಸಿದೆ ಎನ್ನುತ್ತಾರೆ ಪಡನೂರಿನ ಸಚಿನ್ ಅರವತ್.
ಜಿ.ಎಸ್.ಕಮತರ