Advertisement

ಅಣಬೆ: ರುಚಿಕರ ಖಾದ್ಯಕ್ಕಾಗಿ ಮಳೆಗಾಲದ ಅತಿಥಿ

11:46 PM Jul 10, 2019 | mahesh |

ಆಲಂಕಾರು: ಜುಲೈ, ಆಗಸ್ಟ್‌ ತಿಂಗಳಲ್ಲಿ ಆಗೊಮ್ಮೆ ಈಗೊಮ್ಮೆ ಅಬ್ಬರಿಸುವ ಗುಡುಗು. ನಡುನಡುವೆ ಮಳೆ, ಈ ಮಳೆ ಮತ್ತು ಗುಡುಗಿಗೆ ಗುಡ್ಡ, ತೋಟದ ಬದುಗಳಲ್ಲಿ ರಾತ್ರಿ ಬೆಳಗಾಗುವುದೊರೊಳಗೆ ತಲೆ ಎತ್ತಿ ನಿಲ್ಲುವ ವಿಶೇಷ ಅತಿಥಿ ಅಣಬೆ.

Advertisement

ಒಂದೇ ದಿನದಲ್ಲಿ ಹುಟ್ಟಿ ಸಾಯುವ ‘ಏಕ್‌ ದಿನ್‌ ಕಾ ಸುಲ್ತಾನ್‌’ ಎಂದು ಕರೆಸಿಕೊಳ್ಳುವ ಅಣಬೆ (ತುಳುವಿನ ಅಲಂಬು) ಅತ್ಯುತ್ತಮ ಪೌಷ್ಟಿಕಾಂಶಗಳನ್ನು ಒಳಗೊಂಡ ನೈಸರ್ಗಿಕ ಆಹಾರ.

ಗ್ರಾಮೀಣ ಪ್ರದೇಶಗಳಲ್ಲಿ ಮಳೆಗಾಲ ದಲ್ಲಿ ಕಂಡು ಬರುವ ಈ ಅಣಬೆಗಳು ಶುದ್ಧ ನೈಸರ್ಗಿಕ ಸಸ್ಯಾಹಾರವಾಗಿದೆ. ಹಿಂದಿನ ಕಾಲದಲ್ಲಿ ಗುಡ್ಡ, ಕಾಡುಗಳಲ್ಲಿ ಅಣಬೆಗಳು ಸಿಗುತ್ತಿದ್ದರೆ ಇಂದು ಮನೆಯೊಳಗೂ ಬೆಳೆಸಬಹುದಾದ ‘ಬಟನ್‌ ಮಶ್ರೂಮ್‌’ ಕೃಷಿ ಕೂಡ ಇದೆ. ಅಣಬೆಗಳಲ್ಲಿ ಸಕ್ಕರೆ, ಕೊಬ್ಬಿನ ಅಂಶಗಳು ಕಡಿಮೆ ಇರುವುದರಿಂದ ಮಧುಮೇಹಿಗಳು, ಹೃದ್ರೋಗ ಇತ್ಯಾದಿ ಸಮಸ್ಯೆಯಿಂದ ಬಳಲುತ್ತಿರುವವರು ಕೂಡ ಉಪಯೋಗಿಸಬಹುದು. ಮಕ್ಕಳಿಗೆ ಇದೊಂದು ಅತ್ಯುತ್ತಮ ಆಹಾರವಾಗಿದ್ದು, ರೋಗ ನಿರೋಧಕ ಶಕ್ತಿ ಜಾಸ್ತಿ ಇದೆ ಎಂದು ವೈದ್ಯರು ಹೇಳುತ್ತಾರೆ. ಆದ್ದರಿಂದಲೇ ಸೈನಿಕರಿಗೆ ಅಣಬೆಗಳನ್ನು ಪೂರೈಕೆ ಮಾಡಲಾಗುತ್ತಿದೆ.

ಬಗೆಬಗೆಯ ಅಣಬೆಗಳು
ಸುಮಾರು 10ರಿಂದ 15ಕ್ಕೂ ಹೆಚ್ಚು ಅಣಬೆಗಳು ಒಂದೇ ಕಡೆ ಕಾಣಸಿಗುತ್ತವೆ. ಆದರೆ ಹಳ್ಳಿಗಳಲ್ಲಿ ಮುಖ್ಯವಾಗಿ ನಾಯಿಂಬ್ರೆ, ಸುಳಿರ್‌, ಮುಟ್ಟಲಂಬು, ಪರೆಲ್ ಅಲಂಬು, ಬೊಲ್ಲೆಂಜಿರ್‌, ಕಲ್ಲಲಂಬು, ಮರದ ಅಲಂಬು, ಬಿದಿರಿನ ಅಲಂಬು, ಬೈಹುಲ್ಲಿನ ಅಲಂಬು ಇತ್ಯಾದಿ. ಇವೆಲ್ಲವೂ ಆಟಿ ಮತ್ತು ಸೋಣ ತಿಂಗಳಲ್ಲಿ ಹುಟ್ಟಿಕೊಳ್ಳುತ್ತವೆ.

ಅಣಬೆಗಳಲ್ಲಿ 3 ವಿಧ: ಬೇರು ಅಣಬೆ, ದರಗು ಅಣಬೆ, ಬರ್ಕಟ್ಟೆ ಅಣಬೆ.

Advertisement

ಬೇರು ಅಣಬೆ
ಇವು ಜುಲೈ ತಿಂಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಇವುಗಳು ಗೆದ್ದಲಿನ ಹುತ್ತಗಳಲ್ಲಿ, ಫ‌ಲವತ್ತಾದ ಮಣ್ಣಿನಲ್ಲಿ ಹುಟ್ಟುತ್ತವೆ. ಇವುಗಳನ್ನು ಕಿತ್ತಾಗ ಉದ್ದನೆಯ ಬೇರು ಇರುತ್ತದೆ. ಉದಾಹರಣೆಗೆ ತುಳುವಿನ ನಾಯಿಂಬ್ರೆ. ಸುಳಿರ್‌ ಇತ್ಯಾದಿ.

ದರಗು ಅಣಬೆ
ಇವುಗಳು ಗಾತ್ರದಲ್ಲಿ ಸಣ್ಣದಾಗಿದ್ದು, ಕಾಫಿ ತೋಟ, ಕಾಡುಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಕೊಳೆತ ಎಲೆಗಳ ಮೇಲೆ ಹುಟ್ಟಿಕೊಳ್ಳುವ ಈ ಅಣಬೆಗಳು ತಿನ್ನಲು ಬಲು ರುಚಿಯಾಗಿರುತ್ತದೆ.

ಬರ್ಕಟ್ಟೆ ಅಣಬೆ
ಛತ್ರಿಯಂತೆ ಎದ್ದು ನಿಲ್ಲುವ ಇಂತಹ ಅಣಬೆಗಳು ಒಂದೇ ಕಡೆಯಲ್ಲಿ 10ರಿಂದ 15 ದಿನಗಳ ಕಾಲ ಹುಟ್ಟುತ್ತವೆ. ತುಳುವಿನಲ್ಲಿ ಸುಳಿರ್‌ ಅಣಬೆ ಎಂದೂ ಕರೆಯುತ್ತಾರೆ. ಕಲ್ಲಣಬೆಗೆ (ಕಲ್ಲಲಂಬು) ಎಲ್ಲಿಲ್ಲದ ಬೇಡಿಕೆ ಇದೆ. ಕೆ.ಜಿ.ಗೆ 150ರಿಂದ 200 ರೂ.ಗೆ ಇವು ಮಾರಾಟವಾಗುತ್ತದೆ.

ಕೀಳುವಾಗ ಇರಲಿ ಎಚ್ಚರ
ತುಳುವರು ಅಣಬೆಯನ್ನು ದೇವರ ಆಹಾರ ಎಂದು ನಂಬುತ್ತಾರೆ. ಗುಡುಗು ಬಂದರೆ ಮಾತ್ರ ಅಣಬೆಗಳು ಏಳುವುದರಿಂದ ಇದು ದೇವರ ಕೊಡುಗೆ ಎನ್ನುವುದು ತುಳುವರ ನಂಬಿಕೆ. ಆದ್ದರಿಂದ ಅಣಬೆಗಳನ್ನು ಕೀಳುವಾಗಲೂ ಬಹಳ ಎಚ್ಚರ ವಹಿಸುತ್ತಾರೆ. ತುಳುನಾಡಿನಲ್ಲಿ ರಾಶಿ-ರಾಶಿಯಾಗಿ ಹುಟ್ಟುವ ‘ಮುಟ್ಟ ಅಲಂಬು’ ಎನ್ನುವ ಅಣಬೆಯನ್ನು ಒಬ್ಬರೇ ಕೀಳುವುದು ಅಪಾಯ. ಈ ಅಣಬೆಗಳ ನಡುವಲ್ಲಿ ನಾಗರ ಹಾವು ವಾಸಿಸುತ್ತವೆ ಎಂದು ಹಿರಿಯರು ಹೇಳುತ್ತಾರೆ. ಅದಕ್ಕೆ ಎಲ್ಲಾದರೂ ಮುಟ್ಟ ಅಲಂಬು (ರಾಶಿ ಅಣಬೆ) ಕಂಡರೆ ಅಕ್ಕಪಕ್ಕದವರನ್ನು ಕೂಗಿ ಕರೆದು ಎಲ್ಲರೂ ಹೋಗಿ ಕೀಳುತ್ತಾರೆ. ಇದು ತುಳುವರ ನಂಬಿಕೆಯಾದರೂ ಇದರ ಹಿಂದೆ ಜಾಗೃತಿಯ ಅರಿವು ಇದೆ. ಅಣಬೆಯನ್ನು ತಿನ್ನಲು ಬರುವ ಕ್ರಿಮಿ-ಕೀಟಗಳನ್ನು ಕಬಳಿಸಲು ಹಾವುಗಳು ಹೊಂಚು ಹಾಕುತ್ತಿರುತ್ತವೆ. ಗುಂಪಾಗಿ ಹೋದರೆ ಹಾವುಗಳ ಭಯವಿಲ್ಲ ಎನ್ನುವ ಅಂಶ ಈ ನಂಬಿಕೆಯಲ್ಲಿದೆ. ಅಣಬೆಯ ವಿಷಕಾರಿ ಅಂಶವನ್ನು ಪರೀಕ್ಷಿಸಲು ಬೆಂಕಿಯಲ್ಲಿ ಕಾಯಿಸಿದ ಕಬ್ಬಿಣವನ್ನು ಅಣಬೆಯ ಪದಾರ್ಥದಲ್ಲಿ ಮುಳುಗಿಸಿ ತೆಗೆಯುವ ಪದ್ಧತಿಯೂ ಇದೆ.

ವಿಷಕಾರಿ ಅಣಬೆಗಳೂ ಇವೆ
ವಿಷಕಾರಿ ಅಣಬೆಗಳನ್ನು ಪತ್ತೆ ಮಾಡುವುದು ಕಷ್ಟವಾದರೂ ಅನುಭವಿಗಳು ನೋಡಿದೊಡನೆಯೇ ಹೇಳುತ್ತಾರೆ. ಅಮಾನಿಟಿ ಫೆಲ್ಲಾಯ್ಡಿಸ್‌ ಎನ್ನುವ ಅಣಬೆ ಅತ್ಯಂತ ವಿಷಕಾರಿ ಯಾಗಿದೆ. ಇದಕ್ಕೆ ಬೆಳ್ಳನೆಯ ತೊಟ್ಟು, ಹಸುರು ಮಿಶ್ರಿತ ವೃತ್ತಾಕಾರದ ದೊಡ್ಡ ಟೋಪಿ ಇರುತ್ತದೆ. ಪದರಗಳು ಮೊದಲು ಬೆಳ್ಳಗಿದ್ದು, ಬಳಿಕ ಹಳದಿ ಬಣ್ಣ ಕ್ಕೆ ತಿರುಗುತ್ತವೆ. ಇದನ್ನು ಸೇವಿಸಿದರೆ ಹೊಟ್ಟೆ ನೋವು, ವಾಂತಿ-ಭೇದಿ ಉಂಟಾಗಿ, ಅದು ತೀವ್ರವಾದರೆ ಸಾವು ಕೂಡ ಸಂಭವಿಸಬಹುದು. ಕಪ್ಪು ಬಣ್ಣದ, ಹಳದಿ ಎಲೆಗಳನ್ನು ಹೊಂದಿದ ಅಮಾನಿಟಿ ಮ್ಯಾಕ್ಸೆರಿಯಾ ಎನ್ನುವ ಅಣಬೆಯೂ ವಿಷಕಾರಿ. ತಿನ್ನಬಹುದಾದ ಅಣಬೆಗಳನ್ನು ಜಾಗರೂಕತೆಯಿಂದ ಆರಿಸುವುದು ಸೂಕ್ತ. ಅಣಬೆಗಳ ಸೇವನೆಯಿಂದ ತೊಂದರೆ ಕಂಡುಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.

ಕೃತಕವಾಗಿ ಬೆಳೆಸುವ ಬಟನ್‌ ಮಶ್ರೂಮ್‌ಗಳಿಗಿಂತಲೂ ನೈಸರ್ಗಿಕವಾಗಿ ಸಿಗುವ ಅಣಬೆಗಳು ಸ್ವಾದಿಷ್ಟವಾಗಿರುತ್ತವೆ. ಅಣಬೆ ಮಸಾಲ, ಗಸಿ, ಪುಳಿಮುಂಚಿ, ಪದಾರ್ಥ, ಪಲ್ಯ, ಸುಕ್ಕ, ಸಾಂಬಾರ್‌ ಇತ್ಯಾದಿ. ಅಣಬೆಯೊಂದಿಗೆ ಹಲಸಿನ ಕಾಯಿ ಬೀಜಗಳನ್ನು ಅಥವಾ ಸೌತೆಕಾಯಿ ಬೆರೆಸಿದರೆ ಅದರ ರುಚಿಯೇ ಬೇರೆ.

ವಿವಿಧ ಖಾದ್ಯಗಳು
ಕೃತಕವಾಗಿ ಬೆಳೆಸುವ ಬಟನ್‌ ಮಶ್ರೂಮ್‌ಗಳಿಗಿಂತಲೂ ನೈಸರ್ಗಿಕವಾಗಿ ಸಿಗುವ ಅಣಬೆಗಳು ಸ್ವಾದಿಷ್ಟವಾಗಿರುತ್ತವೆ. ಅಣಬೆ ಮಸಾಲ, ಗಸಿ, ಪುಳಿಮುಂಚಿ, ಪದಾರ್ಥ, ಪಲ್ಯ, ಸುಕ್ಕ, ಸಾಂಬಾರ್‌ ಇತ್ಯಾದಿ. ಅಣಬೆಯೊಂದಿಗೆ ಹಲಸಿನ ಕಾಯಿ ಬೀಜಗಳನ್ನು ಅಥವಾ ಸೌತೆಕಾಯಿ ಬೆರೆಸಿದರೆ ಅದರ ರುಚಿಯೇ ಬೇರೆ
•ಸದಾನಂದ ಆಲಂಕಾರು
Advertisement

Udayavani is now on Telegram. Click here to join our channel and stay updated with the latest news.

Next