Advertisement

ರಹೀಂ ಇನ್ನಿಂಗ್ಸ್‌  ಕೊಂಡಾಡಿದ ಮೊರ್ತಜ

01:35 PM Sep 17, 2018 | Team Udayavani |

ದುಬಾೖ: ಮುಶ್ಫಿಕರ್‌ ರಹೀಂ ಶ್ರೇಷ್ಠ ಇನ್ನಿಂಗ್ಸ್‌ ಮೂಲಕ ಬಾಂಗ್ಲಾದೇಶದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು ಎಂದು ನಾಯಕ ಮಶ್ರಫೆ ಮೊರ್ತಜ ಪ್ರಶಂಸಿಸಿದ್ದಾರೆ. ಶನಿವಾರ ರಾತ್ರಿಯ ಏಶ್ಯ ಕಪ್‌ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸಾಧಿಸಿದ 137 ರನ್ನುಗಳ ಭರ್ಜರಿ ಜಯದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತಾಡುತ್ತಿದ್ದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಬಾಂಗ್ಲಾದೇಶ ಆರಂಭಿಕ ಆಘಾತಕ್ಕೆ ಸಿಲುಕಿದ ಬಳಿಕ 261 ರನ್‌ ಪೇರಿಸುವಲ್ಲಿ ಯಶಸ್ವಿಯಾಗಿತ್ತು. ಇದರಲ್ಲಿ ರಹೀಂ ಪಾಲೇ 144 ರನ್‌. ಇದು ರಹೀಂ ಅವರ 6ನೇ ಏಕದಿನ ಶತಕ ಹಾಗೂ ಜೀವನಶ್ರೇಷ್ಠ ಗಳಿಕೆ ಆಗಿತ್ತು. 4ನೇ ಕ್ರಮಾಂಕದಲ್ಲಿ ಆಡಲಿಳಿದ ಅವರು ಅಂತಿಮ ವಿಕೆಟ್‌ ರೂಪದಲ್ಲಿ ಪೆವಿಲಿಯನ್‌ ಸೇರಿದ್ದರು.

Advertisement

“ಇದು ಕೇವಲ ರಹೀಂ ಅವರ ಅತ್ಯುತ್ತಮ ಇನ್ನಿಂಗ್ಸ್‌ ಅಷ್ಟೇ ಅಲ್ಲ, ಬಾಂಗ್ಲಾದೇಶ ಏಕದಿನ ಚರಿತ್ರೆಯಲ್ಲೇ ದಾಖಲಾದ ಶ್ರೇಷ್ಠ ಬ್ಯಾಟಿಂಗ್‌. ಕೇವಲ ಒಂದು ರನ್‌ ಆಗುವಷ್ಟರಲ್ಲಿ 2 ವಿಕೆಟ್‌ ಕಳೆದುಕೊಂಡಾಗ, 2ನೇ ಓವರಿನಲ್ಲೇ ತಮಿಮ್‌ ಗಾಯಾಳಾಗಿ ಹೊರನಡೆದಂಥ ಅತ್ಯಂತ ಒತ್ತಡದ ಸಂದರ್ಭದಲ್ಲಿ ರಹೀಂ ಅವರಿಂದ ಈ ಅಮೋಘ ಬ್ಯಾಟಿಂಗ್‌ ದಾಖಲಾಯಿತು. ತಂಡಕ್ಕೆ ಅತ್ಯುತ್ತಮ ಫಿನಿಶಿಂಗ್‌ ಕೊಡುವಲ್ಲೂ ಅವರ ಪಾತ್ರ ಮಹತ್ವ ದ್ದಾಗಿತ್ತು. ಈ ಸಂದರ್ಭದಲ್ಲಿ ರಹೀಂಗೆ ಅಮೋಘ ಬೆಂಬಲ ನೀಡಿದ ಮಿಥುನ್‌ ಪಾತ್ರವನ್ನೂ ಮರೆಯುವಂತಿಲ್ಲ. ಅವರು ಕೂಡ ಒತ್ತಡವನ್ನು ಯಶಸ್ವಿಯಾಗಿ ನಿಭಾಯಿಸಿದರು’ ಎಂದರು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಬಾಂಗ್ಲಾದೇಶ 49.3 ಓವರ್‌ಗಳಲ್ಲಿ 261 ರನ್‌ ಪೇರಿಸಿದರೆ, ಶ್ರೀಲಂಕಾ 35.2 ಓವರ್‌ಗಳಲ್ಲಿ 124ಕ್ಕೆ ಕುಸಿಯಿತು. ಬೌಲಿಂಗ್‌ ದಾಳಿಗಿಳಿದ ಬಾಂಗ್ಲಾದ ಆರೂ ಮಂದಿ ವಿಕೆಟ್‌ ಬೇಟೆಯಾಡುವ ಮೂಲಕ “ಸಿಂಹ’ವನ್ನು ಬೋನಿಗೆ ಹಾಕಿದರು!

ಇಂದು ಅಫ್ಘಾನ್‌ ಎದುರಾಳಿ
ಬಾಂಗ್ಲಾ ವಿರುದ್ಧ ಸೋತು ತೀವ್ರ ಒತ್ತಡದಲ್ಲಿ ಸಿಲುಕಿರುವ ಶ್ರೀಲಂಕಾ ತಂಡ ಸೋಮವಾರ ಅಬುದಾಭಿಯಲ್ಲಿ ಅಫ್ಘಾನಿಸ್ಥಾನ ವಿರುದ್ಧ ಅದೃಷ್ಟಪರೀಕ್ಷೆಗೆ ಇಳಿಯಲಿದೆ. “ಗ್ರೂಪ್‌ ಆಫ್ ಡೆತ್‌’ ಎಂದೇ ಕರೆಯಲ್ಪಡುವ “ಬಿ’ ವಿಭಾಗದಿಂದ “ಸೂಪರ್‌ ಫೋರ್‌’ ಪ್ರವೇಶಿಸಬೇಕಾದರೆ ಲಂಕೆಗೆ ಇಲ್ಲಿ ಗೆಲುವು ಅನಿವಾರ್ಯ. ಆದರೆ ಇದು ಸುಲಭವಲ್ಲ. ಅಫ್ಘಾನ್‌ ಕೂಡ ಬಾಂಗ್ಲಾದಂತೆ ಅತ್ಯಂತ ಅಪಾಯಕಾರಿ ತಂಡ. ರಶೀದ್‌ ಖಾನ್‌ ಎಂಬ “ಸ್ಪಿನ್‌ ಅಸ್ತ್ರ’ ಇಡೀ ಪಂದ್ಯದ ದಿಕ್ಕನ್ನೇ ಬದಲಿಸಿಬಿಡಬಹುದು!
ಭಾರತ ಹೊರತುಪಡಿಸಿದರೆ ಅತ್ಯಧಿಕ 5 ಸಲ ಏಶ್ಯ ಕಪ್‌ ಗೆದ್ದ ಹಿರಿಮೆಯುಳ್ಳ ಲಂಕಾ, ಈಗ ಮಂಕಾಗಿದೆ. ಗೆಲುವಿನ ಟ್ರ್ಯಾಕ್‌ ಏರಬೇಕಾದರೆ ಮ್ಯಾಥ್ಯೂಸ್‌ ಪಡೆ ಮೂರೂ ವಿಭಾಗಗಳಲ್ಲಿ ಸಾಮರ್ಥ್ಯಕ್ಕೂ ಮೀರಿದ ಪ್ರದರ್ಶನ ನೀಡಬೇಕಿದೆ. ಅಕಸ್ಮಾತ್‌ ಅಫ್ಘಾನ್‌ ವಿರುದ್ಧ ಸೋತರೆ ಶ್ರೀಲಂಕಾ ಕೂಟದಿಂದ ಹೊರಬೀಳಲಿದೆ!

ಒಂದೇ ಕೈಯಲ್ಲಿ ಬ್ಯಾಟಿಂಗ್‌ ನಡೆಸಿದ ತಮಿಮ್‌!


ಶ್ರೀಲಂಕಾ ವಿರುದ್ಧದ ಪಂದ್ಯದ ವೇಳೆ ಎಡಗೈ ಮಣಿಗಂಟಿನ ಮೂಳೆ ಮುರಿತಕ್ಕೊಳಗಾದ ಬಾಂಗ್ಲಾ ಆರಂಭಕಾರ ತಮಿಮ್‌ ಇಕ್ಬಾಲ್‌ ಒಂದೇ ಕೈಯಲ್ಲಿ ಬ್ಯಾಟಿಂಗ್‌ ನಡೆಸಿ ಗಮನ ಸೆಳೆದರು. ಪಂದ್ಯದ ಆರಂಭದಲ್ಲೇ ಎಡಗೈ ಮಣಿಗಂಟಿಗೆ ಏಟು ಅನುಭವಿಸಿದ ತಮಿಮ್‌ ಕೂಡಲೇ ಆಸ್ಪತ್ರೆಗೆ ತೆರಳಿದರು. ಅಲ್ಲಿ ಮಣಿಗಂಟಿನ ಮೂಳೆ ಮುರಿದದ್ದು ಪತ್ತೆಯಾಯಿತು. ಇದಕ್ಕೆ 6 ವಾರಗಳ ವಿಶ್ರಾಂತಿ ಅಗತ್ಯ ಎಂದೂ ವೈದ್ಯರು ಸೂಚಿಸಿದರು. ಇಲ್ಲಿಗೇ ತಮಿಮ್‌ ಅವರ ಏಶ್ಯ ಕಪ್‌ ಆಟ ಕೊನೆಗೊಳ್ಳಬೇಕಿತ್ತು.ಆದರೆ ಹಾಗಾಗಲಿಲ್ಲ. ಬಾಂಗ್ಲಾದ 9ನೇ ವಿಕೆಟ್‌ ಬಿದ್ದೊಡನೆ ಮತ್ತೆ ಕ್ರೀಸ್‌ ಇಳಿದ ತಮಿಮ್‌ ಇಕ್ಬಾಲ್‌, ಶತಕವೀರ ಮುಶ್ಫಿಕರ್‌ ರಹೀಂ ಜತೆಗೂಡಿ ಬ್ಯಾಟಿಂಗ್‌ ಮುಂದುವರಿಸಿದರು. ಈ ಸಂದರ್ಭದಲ್ಲಿ ಅವರು ಬಲಗೈಯಲ್ಲಷ್ಟೇ ಬ್ಯಾಟ್‌ ಹಿಡಿದು ಆಟವಾಡಿದ್ದು ವಿಶೇಷವಾಗಿತ್ತು. ಅಂತಿಮ ವಿಕೆಟಿಗೆ 32 ರನ್‌ ಪೇರಿಸುವಲ್ಲಿ ನೆರವಾದರು. ಈ ವೇಳೆ ತಮಿಮ್‌ ಎದುರಿಸಿದ್ದು ಒಂದೇ ಎಸೆತ.
“ನಮಗೆ ಆರಂಭದಲ್ಲಿ ಬಹಳ ಒತ್ತಡವಿತ್ತು. ಎರಡು ವಿಕೆಟ್‌ ಬೇಗನೇ ಬಿದ್ದಿತ್ತು. ತಮಿಮ್‌ ಕೂಡ ಗಾಯಾಳಾದ್ದರಿಂದ ಚಿಂತೆ ಬಿಗಡಾಯಿಸಿತ್ತು. ಆದರೆ ಮತ್ತೆ ಕ್ರೀಸ್‌ ಇಳಿಯಬೇಕೆಂಬುದು ಅವರದೇ ನಿರ್ಧಾರವಾಗಿತ್ತು. ನಾವು ಯಾವುದೇ ಒತ್ತಡ ಹೇರಲಿಲ್ಲ..’ ಎಂದು ಪಂದ್ಯದ ಬಳಿಕ ಬಾಂಗ್ಲಾದೇಶ ತಂಡದ ನಾಯಕ ಮೊರ್ತಜ ಹೇಳಿದರು. ರಹೀಂ-ಇಕ್ಬಾಲ್‌ ಜೋಡಿ ಅಂತಿಮ ವಿಕೆಟಿಗೆ 16 ಎಸೆತಗಳಿಂದ  32 ರನ್‌ ಒಟ್ಟುಗೂಡಿಸಿತು. ಈ ಎಲ್ಲ 32 ರನ್ನುಗಳನ್ನು ರಹೀಂ ಒಬ್ಬರೇ 15 ಎಸೆತಗಳಲ್ಲಿ ದಾಖಲಿಸಿದರು. ಅಂದಹಾಗೆ, ಗಾಯಾಳು ತಮಿಮ್‌ ಇಕ್ಬಾಲ್‌ ಏಶ್ಯ ಕಪ್‌ ಕ್ರಿಕೆಟ್‌ ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ.

ಎಕ್ಸ್‌ಟ್ರಾ ಇನ್ನಿಂಗ್ಸ್‌ 
* ಬಾಂಗ್ಲಾದೇಶ ತವರಿನಾಚೆ ಅತೀ ದೊಡ್ಡ ಗೆಲುವು ಸಾಧಿಸಿತು (137 ರನ್‌). ಇದಕ್ಕೂ ಮುನ್ನ ಜಿಂಬಾಬ್ವೆ ಎದುರಿನ 2013ರ ಬುಲವಾಯೊ ಪಂದ್ಯವನ್ನು 121 ರನ್ನುಗಳಿಂದ ಜಯಿಸಿದ್ದು ದಾಖಲೆ.
* ಬಾಂಗ್ಲಾ ತನ್ನ ಏಕದಿನ ಚರಿತ್ರೆಯಲ್ಲಿ 6ನೇ ಅತೀ ದೊಡ್ಡ ಜಯ ಸಾಧಿಸಿತು. ಇದು ಶ್ರೀಲಂಕಾ ಎದುರು ಒಲಿಸಿಕೊಂಡ 2ನೇ ಅತೀ ದೊಡ್ಡ ಜಯ. ಇದೇ ವರ್ಷ ಢಾಕಾದಲ್ಲಿ ಲಂಕೆಯನ್ನು 163 ರನ್ನುಗಳಿಂದ ಪರಾಭವಗೊಳಿಸಿದ್ದು ದಾಖಲೆ.
* ಶ್ರೀಲಂಕಾ ಏಶ್ಯ ಕಪ್‌ ಕ್ರಿಕೆಟ್‌ನಲ್ಲಿ ರನ್‌ ಅಂತರದ ದೊಡ್ಡ ಸೋಲನುಭವಿಸಿತು (137). 1986ರಲ್ಲಿ ಪಾಕಿಸ್ಥಾನ ವಿರುದ್ಧ 81 ರನ್ನುಗಳಿಂದ ಸೋತದ್ದು ಹಿಂದಿನ ದೊಡ್ಡ ಸೋಲಾಗಿತ್ತು. ಇದು ಏಶ್ಯದ 3 “ಬಿಗ್‌ ಟೀಮ್‌’ಗಳ ಲೆಕ್ಕಾಚಾರದಲ್ಲಿ (ಭಾರತ, ಪಾಕಿಸ್ಥಾನ, ಶ್ರೀಲಂಕಾ) ದಾಖಲಾದ ದೊಡ್ಡ ಸೋಲುನ ಕೂಡ ಹೌದು. 2008ರ ಏಶ್ಯ ಕಪ್‌ನಲ್ಲಿ ಶ್ರೀಲಂಕಾ ವಿರುದ್ಧ ಭಾರತ 100 ರನ್ನುಗಳಿಂದ ಸೋತದ್ದು ಹಿಂದಿನ ದಾಖಲೆ.
* ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ ಕನಿಷ್ಠ ಮೊತ್ತಕ್ಕೆ ಆಲೌಟ್‌ ಆಯಿತು (124). 2009ರ ಢಾಕಾ ಪಂದ್ಯದಲ್ಲಿ 147ಕ್ಕೆ ಕುಸಿದದ್ದು ಹಿಂದಿನ ದಾಖಲೆ.
* ಮುಶ್ಫಿಕರ್‌ ರಹೀಂ ಬಾಂಗ್ಲಾದ ಒಟ್ಟು ಮೊತ್ತದಲ್ಲಿ ಶೇ. 55.17ರಷ್ಟು ರನ್‌ ಬಾರಿಸಿದರು. ಇದೊಂದು ದಾಖಲೆ. 2010ರ ಇಂಗ್ಲೆಂಡ್‌ ಎದುರಿನ ಢಾಕಾ ಪಂದ್ಯದಲ್ಲಿ ತಮಿಮ್‌ ಇಕ್ಬಾಲ್‌ ಶೇ. 54.82ರಷ್ಟು ರನ್‌ ಬಾರಿಸಿದ್ದು ದಾಖಲೆ. ಅಂದು ಬಾಂಗ್ಲಾದ 228 ರನ್ನುಗಳ ಮೊತ್ತದಲ್ಲಿ ತಮಿಮ್‌ 125 ರನ್‌ ಹೊಡೆದಿದ್ದರು.
*ಮುಶ್ಫಿಕರ್‌ ರಹೀಂ ಏಶ್ಯ ಕಪ್‌ನಲ್ಲಿ 2ನೇ ಸರ್ವಾಧಿಕ ವೈಯಕ್ತಿಕ ರನ್‌ ಬಾರಿಸಿದ ಜಂಟಿ ದಾಖಲೆ ಸ್ಥಾಪಿಸಿದರು (144). ಹಾಂಕಾಂಗ್‌ ಎದುರಿನ 2004ರ ಪಂದ್ಯದಲ್ಲಿ ಯೂನಿಸ್‌ ಖಾನ್‌ ಕೂಡ 144ನ ರನ್‌ ಬಾರಿಸಿದ್ದರು. ಪಾಕಿಸ್ಥಾನ ವಿರುದ್ಧದ 2012ರ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ 183 ರನ್‌ ಸಿಡಿಸಿದ್ದು ಏಶ್ಯ ಕಪ್‌ ದಾಖಲೆ.
* ರಹೀಂ ಬಾಂಗ್ಲಾ ಪರ ಏಕದಿನದಲ್ಲಿ 2ನೇ ಅತ್ಯಧಿಕ ವೈಯಕ್ತಿಕ ರನ್‌ ಹೊಡೆದ ಕ್ರಿಕೆಟಿಗನೆನಿಸಿದರು (144). ಜಿಂಬಾಬ್ವೆ ವಿರುದ್ಧದ 2009ರ ಪಂದ್ಯದಲ್ಲಿ ತಮಿನ್‌ ಇಕ್ಬಾಲ್‌ 154 ರನ್‌ ಪೇರಿಸಿದ್ದು ದಾಖಲೆ. 
* ರಹೀಂ ಸರ್ವಾಧಿಕ ವೈಯಕ್ತಿಕ ರನ್‌ ಬಾರಿಸಿದರು. 2014ರ ಏಶ್ಯ ಕಪ್‌ನಲ್ಲಿ ಭಾರತದ ವಿರುದ್ಧ 117 ರನ್‌ ಹೊಡೆದದ್ದು ಹಿಂದಿನ ದಾಖಲೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next