Advertisement
ಸ್ವಾಮಿ ವಿವೇಕಾನಂದರು ದೇಶ ಸುತ್ತುವ ವೇಳೆ ಕರ್ನಾಟಕದಲ್ಲಿ ಮೊದಲು ಬಂದಿದ್ದು ಬೆಳಗಾವಿಗೆ. ಅದು 1892ರ ಅಕ್ಟೋಬರ್ 16. ಅಂದು ವೀರ ಸನ್ಯಾಸಿ, ಬೆಳಗಾವಿಯ ರಿಸಾಲದಾರ್ ಗಲ್ಲಿಯಲ್ಲಿದ್ದ ವಕೀಲ, ಸದಾಶಿವ ಭಾಟೆ ಎಂಬುವರ ಮನೆಯಲ್ಲಿ ಮೂರು ದಿನ ತಂಗಿದ್ದರು. ಈಗ ಈ ಮನೆಗೆ ಕಾಲಿಟ್ಟರೆ, ಅಲ್ಲಿ ವಿವೇಕಾನಂದರ ಜಗತ್ತೇ ಕಾಣಿಸುತ್ತದೆ. ಮನೆ ಈಗ, ಸಿಡಿಲ ಸನ್ಯಾಸಿಯ ನೆನಪನ್ನು ತೆರೆದಿಡುವ ಮ್ಯೂಸಿಯಂ. ಅಂದು ಸ್ವಾಮೀಜಿ ಬಳಸಿದ್ದ ವಸ್ತುಗಳನ್ನು ನೋಡುವುದೇ ಒಂದು ರೋಮಾಂಚನ.ವಿವೇಕಾನಂದರು ಅಂದು ಇಲ್ಲಿಗೆ ಬಂದಾಗ ಬಳಸಿದ್ದ ಕೋಲು, ಮಂಚ, ಕನ್ನಡಿಗಳನ್ನು ಹಾಗೆಯೇ ಸಂರಕ್ಷಿಸಿ ಇಡಲಾಗಿದೆ. ವಿವೇಕಾನಂದರ ತಾಯಿಯ ಮೂಲ ಫೋಟೋ ಕೂಡ ಇಲ್ಲಿನ ವಿಶೇಷತೆಗಳಲ್ಲಿ ಒಂದು. ಎರಡು ಅಂತಸ್ತಿನ ಒಟ್ಟು 20 ಕೊಠಡಿಗಳಿರುವ ಈ ಕಟ್ಟಡದಲ್ಲಿ, ವಿವೇಕಾನಂದರ ಜೀವನ ಮತ್ತು ವಿಚಾರಧಾರೆಗಳ ದರ್ಶನವಾಗುತ್ತದೆ. ನರೇಂದ್ರನ ಬಾಲ್ಯ ಜೀವನ, ಪರಮಹಂಸರು- ವಿವೇಕಾನಂದರ ಭೇಟಿ, ಧೀರಸನ್ಯಾಸಿಯ ಸಂದೇಶಗಳಿರುವ ತೈಲವರ್ಣದ ಚಿತ್ರಗಳು- ವಿವೇಕಾನಂದರ ಕುರಿತು ಅಭಿಮಾನ ಮೂಡಿಸುವಂತಿವೆ.
Related Articles
ಮೂರು ದಿನಗಳ ನಂತರ ಇಲ್ಲಿಂದ ವಿವೇಕಾನಂದರು ಬಂಗಾಳಿ ಮೂಲದ ಅರಣ್ಯಾಧಿಕಾರಿ ಹರಿಪದ ಮಿತ್ರರ ಮನೆಗೆ ತೆರಳಿದ್ದರಂತೆ. ಅಲ್ಲಿ ಒಂಬತ್ತು ದಿನ ತಂಗಿದ್ದರಂತೆ. ಆ ವೇಳೆ ಹರಿಪದ ಅವರ ಒತ್ತಾಯದ ಮೇರೆಗೆ ವಿವೇಕಾನಂದರು, ಕೊಲ್ಲಾಪುರ ಮಹಾರಾಣಿ ಕೊಟ್ಟ ಟರ್ಬನ್ ಹಾಗೂ ಉಡುಪು ಧರಿಸಿ, ಇಲ್ಲಿನ ಸ್ಟುಡಿಯೊದಲ್ಲಿ ಫೋಟೋ ತೆಗೆಸಿಕೊಂಡಿದ್ದರು. ಅದರ ಮ್ಯೂರಲ್ ಪ್ರತಿಮೆ ಕಣ್ಮನಗಳನ್ನು ಸೆಳೆಯುವಂತಿದೆ.
Advertisement
ಡಿಜಿಟಲ್ ಪೇಂಟಿಂಗ್ಸ್‌ನಲ್ಲಿ ವಿವೇಕ ಲೋಕ ಕಟ್ಟಿಕೊಟ್ಟಿರುವುದು, ಮ್ಯೂಸಿಯಂನ ವಿಶೇಷತೆಗಳಲ್ಲೊಂದು. ಪರಮಹಂಸರು, ಶಾರದಾದೇವಿ, ವಿವೇಕಾನಂದರ ಮೂರ್ತಿಗಳನ್ನು ನೋಡುತ್ತಲೇ ಇರಬೇಕು ಅಂತನ್ನಿಸುತ್ತದೆ. ಅಷ್ಟು ಸುಂದರವಾಗಿವೆ. ಇಲ್ಲಿ ಧ್ಯಾನದ ಕೊಠಡಿಯೂ ಇದ್ದು, ಸಾರ್ವಜನಿಕರಿಗೆ ಧ್ಯಾನ ಮಾಡಲು ಅವಕಾಶವಿದೆ. ನಿತ್ಯ ಪೂಜೆ- ಪುನಸ್ಕಾರಗಳೂ ನಡೆಯುತ್ತವೆ.
ಮಕ್ಕಳಿಗೆ ವಿವೇಕಪಾಠಈ ಕಟ್ಟಡದಲ್ಲಿ ಡಿಜಿಟಲ್ ಹಾಲ್ ಇದ್ದು, ಮಕ್ಕಳು ಜಿಕ್ಸ್ ಆಟ ಆಡಿ, ನಂತರ ವಿವೇಕಾನಂದರ ಸಂದೇಶಗಳನ್ನು ಓದಿ ತಿಳಿದುಕೊಳ್ಳುವ ವ್ಯವಸ್ಥೆ ಇದೆ! ಇನ್ನು ಆಡಿಯೋ ವಿಷುವಲ್ ರೂಂನಲ್ಲಿ ಶಾಲಾ- ಕಾಲೇಜು ಮಕ್ಕಳಿಗೆ ವಿವೇಕಾನಂದರ ಬಗ್ಗೆ 40 ನಿಮಿಷಗಳ ಆಡಿಯೋ, ವಿಡಿಯೋ, ಅನಿಮೇಷನ್ ಮಾದರಿಗಳನ್ನು ತೋರಿಸಲಾಗುತ್ತದೆ. ಪ್ರತಿ ಸೋಮವಾರ ಈ ಮೆಮೋರಿಯಲ್‌ಗೆ ರಜೆ ಇರುತ್ತೆ. ಶಾಲಾ- ಕಾಲೇಜು ಮಕ್ಕಳು ಇದರ ವೀಕ್ಷಣೆಗೆ ಬರುವ ಯೋಜನೆ ಇದ್ದರೆ ಮೊದಲೇ ಅನುಮತಿ ಪಡೆದುಕೊಳ್ಳಬೇಕಾಗುತ್ತೆ. – ಶಿವಲೀಲಾ ನಿರಂಜನಮೂರ್ತಿ, ಬೆಳಗಾವಿ