ಮಂಗಳೂರು: ಕೋವಿಡ್-19 ಸಂಕಷ್ಟದ ಹಿನ್ನೆಲೆಯಲ್ಲಿ ತಾಯ್ನಾಡಿಗೆ ಬರಲು ಬಯಸಿದ ಸುಮಾರು 63 ಪ್ರಯಾಣಿಕರಿರುವ “ವಂದೇ ಭಾರತ’ ಯೋಜನೆಯ ಏರ್‌ಇಂಡಿಯಾ ವಿಮಾನ ಬುಧವಾರ ರಾತ್ರಿ 8 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದೆ.
ಮಸ್ಕತ್‌ನಿಂದ ಕನ್ನಡಿಗರನ್ನು ಕರೆತಂದ ಮೊದಲ (ಐಎಕ್ಸ್ 817/818) ವಿಮಾನ ಇದಾಗಿದ್ದು, ಒಟ್ಟು 176 ಪ್ರಯಾಣಿಕರು ರಾಜ್ಯಕ್ಕೆ ಆಗಮಿಸಿದ್ದಾರೆ. ಮಧ್ಯಾಹ್ನ 1.30ಕ್ಕೆ ಮಸ್ಕತ್‌ನಿಂದ ಹೊರಟ ಈ ವಿಮಾನ ಸಂಜೆ ಬೆಂಗಳೂರು ಏರ್‌ಪೋರ್ಟ್‌ಗೆ ಬಂದು ಅಲ್ಲಿಂದ 7.30ಕ್ಕೆ ಹೊರಟು ರಾತ್ರಿ 8ಕ್ಕೆ ಮಂಗಳೂರು ಏರ್‌ಪೋರ್ಟ್‌ಗೆ ಆಗಮಿಸಿದೆ.
2 ವರ್ಷಕ್ಕಿಂತ ಕಡಿಮೆ ಪ್ರಾಯದ ಎರಡು ಮಗು ಹಾಗೂ 176 ಪ್ರಯಾಣಿಕರು ಮಸ್ಕತ್‌ನಿಂದ ಆಗಮಿಸಿದ್ದು ಇದರಲ್ಲಿ 2 ಮಗು ಹಾಗೂ 113 ಮಂದಿ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಹಾಗೂ ಉಳಿದಂತೆ, ಕರಾವಳಿ ಭಾಗದ 63 ಪ್ರಯಾಣಿಕರು ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದ್ದಾರೆ. ಗರ್ಭಿಣಿಯರು, ಕೆಲಸ ಕಳೆದುಕೊಂಡವರು, ಅನಾರೋಗ್ಯದಿಂದಾಗಿ ಔಷಧಿ ಪಡೆಯಲಿರುವವರು ವಿಮಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದರು.
ವಿದೇಶದಿಂದ ಆಗಮಿಸಿದ ಪ್ರಯಾಣಿಕರ ಆರೋಗ್ಯ ತಪಾಸಣೆ ಹಾಗೂ ವ್ಯವಸ್ಥೆಗಳ ಪರಿಶೀಲನೆಗಾಗಿ ಮಂಗಳೂರು ಏರ್‌ಪೋರ್ಟ್‌ನಲ್ಲಿ ಜಿಲ್ಲಾಡಳಿತ, ಆರೋಗ್ಯ ಇಲಾಖೆಯಿಂದ ಅಧಿಕಾರಿಗಳ ತಂಡ ನಿಯೋಜಿಸಲಾಗಿತ್ತು. ವಿಮಾನ ಬಂದ ತತ್‌ಕ್ಷಣ ಎಲ್ಲಾ ಪ್ರಯಾಣಿಕರಿಗೆ ತಿಂಡಿ ವ್ಯವಸ್ಥೆ ಮಾಡಲಾಗಿದ್ದು, ಆರೋಗ್ಯ ತಪಾಸಣೆ ಆದ ಬಳಿಕ ಊಟದ ವ್ಯವಸ್ಥೆಯನ್ನು ಜಿಲ್ಲಾಡಳಿತದಿಂದ ಕಲ್ಪಿಸಲಾಗಿತ್ತು. ಏರ್‌ಪೋರ್ಟ್, ಏರ್‌ಲೈನ್ಸ್ ಹಾಗೂ ಭದ್ರತಾ ಪಡೆಯವರ ಹೆಚ್ಚುವರಿ ಕೌಂಟರ್‌ಗಳನ್ನು ತೆರೆಯಲಾಗಿತ್ತು.
ಮಸ್ಕತ್‌ನಿಂದ ವಿಮಾನದಲ್ಲಿ ಆಗಮಿಸಿದ ಪ್ರಯಾಣಿಕರ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯವರಿಗೆ ಮಾತ್ರ ಮಂಗಳೂರಿನಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದ್ದು, ಉಡುಪಿ ಹಾಗೂ ಇತರ ಜಿಲ್ಲೆಯ ಪ್ರಯಾಣಿಕರಿಗೆ ಅವರವರ ಜಿಲ್ಲೆಗಳಲ್ಲಿ ಕ್ವಾರಂಟೈನ್ ಮಾಡಲು ಆಯಾ ಜಿಲ್ಲಾಡಳಿತ ವ್ಯವಸ್ಥೆ ಕಲ್ಪಿಸಿದೆ. ಪ್ರಯಾಣಿಕರ ಪೈಕಿ ಯಾರೆಲ್ಲ ಹಣ ಪಾವತಿಸುವ ಷರತ್ತಿಗೊಳಪಟ್ಟು ಹೊಟೇಲುಗಳಲ್ಲಿ ಕ್ವಾರಂಟೈನ್ ಆಗಲು ಬಯಸಿ ಒಪ್ಪಿಗೆ ಪತ್ರ (ಅಂಡರ್‌ಟೇಕಿಂಗ್) ನೀಡಿದ್ದಾರೋ ಅವರಿಗೆ ಹೊಟೇಲ್ ಕ್ವಾರಂಟೈನ್ ಮಾಡಲಾಗಿದೆ. ಈ ಹೊಟೇಲ್‌ಗಳಿಗೆ ನೋಡೆಲ್ ಆಫೀಸರ್‌ಗಳನ್ನೂ ನಿಯೋಜಿಸಲಾಗಿದೆ.