ಭುವನೇಶ್ವರ : ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಜತೆಜತೆಗೆ ಕಂಡ ಒಡಿಶಾದಲ್ಲಿ ಮತದಾರರು ವಿಭಜಿತ ಮತದಾನದ (split voting) ಮೂಲಕ ಪ್ರಬುದ್ಧತೆ ಮೆರೆದಿರುವುದು ಈಗ ಬಹಿರಂಗವಾಗಿದೆ.
ಸಂಸದೀಯ ಚುನಾವಣೆಯಲ್ಲಿ ಒಂದು ಪಕ್ಷಕ್ಕೆ, ರಾಜ್ಯ ವಿಧಾಸಭಾ ಚುನಾವಣೆಯಲ್ಲಿ ಇನ್ನೊಂದು ಪಕ್ಷಕ್ಕೆ ಮತದಾರರು ಮತ ಹಾಕಿರುವುದು ಸ್ಪಷ್ಟವಾಗಿದೆ. ಒಡಿಶಾದಲ್ಲಿ 21 ಲೋಕಸಭಾ ಕ್ಷೇತ್ರ ಮತ್ತು 147 ವಿಧಾನಸಭಾ ಕ್ಷೇತ್ರಗಳಿವೆ.
ಬಿಜು ಜನತಾ ದಳ (ಬಿಜೆಡಿ) 12 ಲೋಕಸಭಾ ಸ್ಥಾನಗಳನ್ನು ಗೆದ್ದಿದೆಯಾದರೆ ಬಿಜೆಪಿ 8, ಕಾಂಗ್ರೆಸ್ 1 ಸೀಟನ್ನು ಗೆದ್ದಿವೆ.
ಆದರೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಡಿ 112 ಸ್ಥಾನ ಗೆದ್ದಿದೆಯಾದರೆ ಬಿಜೆಪಿ 23 ಮತ್ತು ಕಾಂಗ್ರೆಸ್ ಕೇವಲ 9 ಸ್ಥಾನ ಗೆದ್ದಿವೆ.
ಒಡಿಶಾ ಮತದಾರರ ಈ ವಿಭಜಿತ ಮತದಾನದ ಲಾಭ ಪಡೆದವರು ಭುವನೇಶ್ವರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಐಎಎಸ್ ಅಧಿಕಾರಿ ಅಪರಾಜಿತಾ ಸಾರಂಗಿ; ಇವರು ಬಿಜೆಡಿ ಅಭ್ಯರ್ಥಿ, ಮಾಜಿ ಮುಂಬಯಿ ಪೊಲೀಸ್ ಕಮಿಷನರ್ ಅರೂಪ್ ಪಟ್ನಾಯಕ್ ಅವರನ್ನು 23,939 ಮತಗಳಿಂದ ಸೋಲಿಸಿದ್ದಾರೆ.
ಆದರೇ ಇದೇ ಭುವನೇಶ್ವರ ಲೋಕಸಭಾ ವ್ಯಾಪ್ತಿಗೆ ಒಳಪಟ್ಟ 7 ವಿಧಾಸಭಾ ಕ್ಷೇತ್ರಗಳಲ್ಲಿ ಬಿಜೆಪಿಯ ಯಾವನೇ ಒಬ್ಬ ಅಭ್ಯರ್ಥಿಯೂ ಜಯಿಸಿಲ್ಲ !