Advertisement

ಶರಣ ಪರಂಪರೆಯೊಂದಿಗೆ ಮೇಳೈಸಿದ ಮುರುಘಾ

05:43 PM Oct 03, 2017 | Team Udayavani |

ಚಿತ್ರದುರ್ಗ: ಸಾಂಸ್ಕೃತಿಕ ಸಂದರ್ಭಗಳು ಖುಷಿ ಕೊಡುತ್ತವೆ. ಆದರೆ ಜೀವನ ಕಟ್ಟಿಕೊಳ್ಳಲು ಸಾಧ್ಯವಿಲ್ಲ. ವಿಚಾರ-ವಿನಿಮಯದಿಂದ ಜೀವನ ಕಟ್ಟಿಕೊಳ್ಳಲು ಸಾಧ್ಯ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Advertisement

ಇಲ್ಲಿನ ಮುರುಘಾ ಮಠದಲ್ಲಿ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ “ಮುರುಘಾ ಪರಂಪರೆ ನಡೆದು ಬಂದ ಹಾದಿ’ ವಿಷಯದ ಕುರಿತ ವಿಚಾರಕೂಟದ ಅಧ್ಯಕ್ಷತೆ ವಹಿಸಿ ಶರಣರು ಮಾತನಾಡಿದರು.

ಶರಣ ಪರಂಪರೆಯ ಜೊತೆಗೆ ಮುರುಘಾ ಪರಂಪರೆಯೂ ಸೇರಿದೆ. ಎರಡರ ಕೊಂಡಿ ಮುರುಘಾಮಠ. ಚರ ಪೀಠವಾಗಿದ್ದ ಶ್ರೀಮಠವನ್ನು ದೊಡ್ಡ ಮದಕರಿ ಭರಮಣ್ಣ ನಾಯಕ ಸ್ಥಿರ ಪರಂಪರೆ ಮಾಡಿದರು. ಮುರುಗಿ ಶಾಂತವೀರ ಸ್ವಾಮಿಗಳು ಶತಾಯುಷಿಯಾಗಿದ್ದರು. ಛತ್ರಪತಿ ಶಿವಾಜಿ ಮುರುಗಿ ಶಾಂತವೀರ ಸ್ವಾಮಿಗಳನ್ನು ಭೇಟಿ ಮಾಡಿದ್ದರು. ಅದರಂತೆ ಹೈದರಾಬಾದ್‌ನ ಬಾದಷಾ ಸಹ ಭೇಟಿಯಾಗಿದ್ದರು ಎನ್ನಲಾಗುತ್ತಿದೆ. ತೋಂಟದ ಸಿದ್ಧಲಿಂಗರು, ಕಟ್ಟಿಗೆಹಳ್ಳಿ ಸಿದ್ಧಲಿಂಗರು, ಮುರಿಗಿ ಶಾಂತವೀರ ಸ್ವಾಮಿಗಳು ಸೇರಿದಂತೆ ಇದುವರೆಗೆ 21 ಶರಣರು ಪೀಠವನ್ನು ಅಲಂಕರಿಸಿದ್ದಾರೆ ಎಂದರು.

ಮುಖೇಶ್‌ ಗರ್ಗ್‌ರವರು ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದಾರೆ. ಅಡಿಕೆ ಬೆಲೆ ಹೆಚ್ಚಾಗಲು ಇವರೇ ಕಾರಣ. ಶಿವಮೊಗ್ಗದಲ್ಲಿ ಒಂದು ಶಾಲೆ ತೆರೆಯಲು ಸಿದ್ಧರಿದ್ದಾರೆ ಎಂದು ತಿಳಿಸಿದರು.

ಇತಿಹಾಸ ಸಂಶೋಧಕ ಡಾ| ಬಿ. ರಾಜಶೇಖರಪ್ಪ ವಿಷಯಾವಲೋಕನ ಮಾಡಿ, ಮುರುಘಾ ಪರಂಪರೆ ಕರ್ನಾಟಕಸದ ಇತಿಹಾಸದಲ್ಲಿ ಉನ್ನತ ಸ್ಥಾನ ಪಡೆದಿದೆ. ಮೊದಲಿಗೆ ಅಲ್ಲಮಪ್ರಭು, ಸಿದ್ದರಾಮೇಶ, ಆದಿಗಣೇಶ್ವರ, ರುದ್ರಗಣೇಶರು ಹೀಗೆ ಅನೇಕ ಜಗದ್ಗುರುಗಳು ಬರುತ್ತಾರೆ. ರುದ್ರಗಣೇಶ್ವರ ಎಂದರೆ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿಯವರು. ಅವರ ನಿಜವಾದ ಹೆಸರು ರುದ್ರದೇವರು. ಅವರ ನಂತರ ಬಂದ ತೋಂಟದ ಸಿದ್ಧಲಿಂಗೇಶ್ವರಸ್ವಾಮಿಗಳು ಪವಾಡ ಪುರುಷರು. ಗೋಳಬಸವೇಶ್ವರ, ಗುಮ್ಮಳಾಪುರ ಸಿದ್ಧಲಿಂಗೇಶ್ವರರು ವಚನಗಳನ್ನು ರಚನೆ ಮಾಡಿದರು. ಶೂನ್ಯ ಸಂಪಾದನೆ ಎಂಬ ಕೃತಿ ರಚಿಸಿದರು. ಕಟ್ಟಿಗೆಹಳ್ಳಿ ಸಿದ್ಧಲಿಂಗೇಶ್ವರಸ್ವಾಮಿಗಳ ಶಿಷ್ಯ ಮುರುಗಿ ಶಾಂತವೀರ ಸ್ವಾಮಿಗಳು. ಇವರು ಸ್ಥಿರ ಪೀಠಾ ಧೀಶರಾದರು. ಈ ಮೊದಲು ಚರ ಪೀಠಾಧ್ಯಕ್ಷರಾಗಿ ಇತಿಹಾಸ ಬೆಳೆಯುತ್ತಾ ಬಂದು ತದನಂತರ ಅನೇಕ ಸ್ವಾಮಿಗಳು ಶ್ರೀಮಠದ ಪೀಠಾಧಿಪತಿಗಳಾಗಿದ್ದರು. ನಂತರ ಜಯದೇವ ಸ್ವಾಮಿಗಳು, ಜಯವಿಭವಸ್ವಾಮಿಗಳು ಹೀಗೆ ಬೆಳೆದ ಪರಂಪರೆ, ಪ್ರಸ್ತುತ ಡಾ| ಶಿವಮೂರ್ತಿ ಮುರುಘಾ ಶರಣರ ಪೀಠಾ ಧಿಕಾರದಲ್ಲಿ ನಡೆಯುತ್ತಿದೆ ಎಂದು ವಿವರಿಸಿದರು.

Advertisement

ದೆಹಲಿಯ ಉದ್ಯಮಿ ಮುಖೇಶ್‌ ಗರ್ಗ್‌ ಅವರನ್ನು ಮುರುಘಾ ಶರಣರು ಸನ್ಮಾನಿಸಿದರು. ಜಾನಪದ ಕಲಾಮೇಳದ ಸ್ತಬ್ಧಚಿತ್ರಗಳಲ್ಲಿ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದ ಮೋಡ ಬಿತ್ತನೆ ಕಲಾಕೃತಿ ಪ್ರಥಮ, ಎಸ್‌ಜೆಎಂ ಚಿತ್ರಕಲಾ ಮಹಾವಿದ್ಯಾಲಯದ ಒಂಟಿ ಕಲ್ಲಿನ ಬಸವಣ್ಣ ದ್ವಿತೀಯ, ಎಸ್‌ಜೆಎಂ ದಂತ ಮಹಾವಿದ್ಯಾಲಯದ ಹಲ್ಲಿನ ರಕ್ಷಣೆ ಹಾಗೂ ಎಸ್‌ ಜೆಎಂ ಪದವಿಪೂರ್ವ ಕಾಲೇಜಿನ ಕೋಟೆಯಲ್ಲಿರುವ ಹಳೆಯ ಮುರುಘಾಮಠ ಕಲಾಕೃತಿ ತೃತೀಯ ಬಹುಮಾನ ಪಡೆದವು.

ಶರಣ ಸಂಸ್ಕೃತಿ ಉತ್ಸವದ ಕಾರ್ಯಾಧ್ಯಕ್ಷ ಸಿ. ಶಂಕರಮೂರ್ತಿ, ಪ್ರಧಾನ ಕಾರ್ಯದರ್ಶಿ ಎನ್‌.ಜಿ. ಶ್ರೀನಿವಾಸ ನಾಯಕ, ಕಾರ್ಯದರ್ಶಿ ಪಟೇಲ್‌ ಶಿವಕುಮಾರ್‌, ಸಿದ್ದಾಪುರದ ನಾಗಣ್ಣ ಇದ್ದರು. ಬೆಂಗಳೂರಿನ ನಾಗಚಂದ್ರಿಕಾ ಭಟ್‌ ಮತ್ತು ಸಂಗಡಿಗರು ಸಂಗೀತ ಮತ್ತು ನೃತ್ಯ ಪ್ರದರ್ಶನ ನೀಡಿದರು. ಕೆ.ಎಂ. ವೀರೇಶ್‌ ಸ್ವಾಗತಿಸಿದರು. ದಾವಣಗೆರೆ ಬಸಪ್ಪ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next