Advertisement

ಧಾರವಾಡ: ವೈಭವದ ಮುರುಘಾಮಠದ ರಥೋತ್ಸವ

04:12 PM Feb 15, 2024 | Team Udayavani |

ಉದಯವಾಣಿ ಸಮಾಚಾರ
ಧಾರವಾಡ: ಉತ್ತರ ಕರ್ನಾಟಕದ ಜಾಗೃತ ಸ್ಥಳಗಳಲ್ಲಿ ಒಂದಾಗಿರುವ ಅನ್ನ, ಅಕ್ಷರ, ಜ್ಞಾನ ದಾಸೋಹದಿಂದಲೇ ನಾಡಿನ ಗಮನ ಸೆಳೆದಿರುವ ಮುರುಘಾಮಠದ ಶ್ರೀಮದಥಣಿ ಮುರುಘೇಂದ್ರ ಮಹಾಶಿವಯೋಗಿಗಳವರ 94ನೇ ಜಾತ್ರಾ ಮಹೋತ್ಸವ ಬುಧವಾರ ಸಂಜೆ ಜರುಗಿದ ರಥೋತ್ಸವ ಮೂಲಕ ಸಂಪನ್ನಗೊಂಡಿತು.

Advertisement

ಕಳೆದೊಂದು ವಾರದಿಂದ ಜಾತ್ರಾ ಮಹೋತ್ಸವ ಪ್ರಯುಕ್ತ ಪ್ರವಚನ, ಶಿವಾನುಭವ ಗೋಷ್ಠಿ ಸೇರಿದಂತೆ ವಿವಿಧ ಕಾರ್ಯಕ್ರಮಗಳು, ಧಾರ್ಮಿಕ ಚಿಂತನಾ ಗೋಷ್ಠಿಗಳು ಶ್ರೀಮಠದಲ್ಲಿ ಜರುಗಿದ್ದು, ಬುಧವಾರ ಸಂಜೆ ರಥೋತ್ಸವ ನೆರವೇರುವ ಮೂಲಕ ಜಾತ್ರಾ ಮಹೋತ್ಸವಕ್ಕೆ ತೆರೆ ಎಳೆಯಲಾಯಿತು.

ಬೆಳಿಗ್ಗೆ ನಡೆದ ಲಿಂಗದೀಕ್ಷೆ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಸ್ವಾಮೀಜಿಗಳ ಸಾನಿಧ್ಯದಲ್ಲಿ 82 ಜಂಗಮ ಪಟುಗಳಿಗೆ ಲಿಂಗದೀಕ್ಷೆ-ಅಯ್ನಾಚಾರ ನೆರವೇರಿಸಲಾಯಿತು. ಇದಾದ ಬಳಿಕ ಶ್ರೀಗಳ ಗದ್ದುಗೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸಂಜೆ ಹೊತ್ತಿಗೆ ರಥೋತ್ಸವಕ್ಕೆ ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಚಾಲನೆ ನೀಡಿದರು.

ಚಂದ್ರಶೇಖರ ಶಿವಯೋಗಿ ರಾಜೇಂದ್ರ ಸ್ವಾಮಿಜಿ, ಮಹಾಂತ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಕುಮಾರ ವಿರೂಪಾಕ್ಷ ಸ್ವಾಮೀಜಿ, ಬಸವಶಾಂತಲಿಂಗ ಸ್ವಾಮೀಜಿ, ಸ್ವಾಮಿನಾಥ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಸೇರಿದಂತೆ ಶ್ರೀಮಠದ ಆಡಳಿತ ಮಂಡಳಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಶ್ರೀಮಠದ ಆವರಣದಿಂದ ಡಿಪೋ ವೃತ್ತದವರೆಗೂ ರಥೋತ್ಸವ ಜರುಗಿತು. ಭಕ್ತರು ಹರ ಹರ ಮಹಾದೇವ ಘೋಷಣೆ ಕೂಗಿದರು. ಇಷ್ಟಾರ್ಥ ಸಿದ್ಧಿಗಾಗಿ ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಅರ್ಪಿಸಿ, ಪ್ರಾರ್ಥಿಸಿದರು. ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಜನರು
ಮುರುಘಾಮಠದ ಮೂಲ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು.

Advertisement

ಜಾನಪದ ಮೇಳದ ಕಲರವ: ಮುರುಘಾಮಠ ಧಾರವಾಡ ಸೀಮೆಯ ಅಪ್ಪಟ ಜಾನಪದ ಜಾತ್ರೆಯಾಗಿದ್ದು, ಪ್ರತಿವರ್ಷದಂತೆ ಈ ವರ್ಷವೂ ಜಾತ್ರೆಯಲ್ಲಿ ಜಾನಪದ ಮೇಳ, ಭಜನೆ ಮೇಳ, ಕುಣಿತ, ಕೋಲಾಟಗಳ ವೈಭವ ಜಾತ್ರೆಯ ಮೆರಗು ಹೆಚ್ಚಿಸಿತ್ತು. ರಥೋತ್ಸವ ಮುಂದೆ ಮತ್ತು ಜಾತ್ರೆಯಲ್ಲಿ ಜಾನಪದ ವಾದ್ಯಗಳ ಕಲರವ ನೋಡುಗರ ಕಣ್ಮನ ಸೆಳೆಯಿತು.

ಹಳ್ಳಿಗಳ ಬಂದ ಭಕ್ತರ ದಂಡು: ಧಾರವಾಡ ಜಿಲ್ಲೆ ಸೇರಿದಂತೆ ಗದಗ, ಹಾವೇರಿ, ಉತ್ತರ ಕನ್ನಡ ಮತ್ತು ಬೆಳಗಾವಿ ಜಿಲ್ಲೆಗಳಿಂದಲೂ ಭಕ್ತರ ದಂಡು ಹರಿದು ಬಂದಿತ್ತು. ಪ್ರತಿವರ್ಷದಂತೆ ಈ ವರ್ಷವೂ ಹುಗ್ಗಿ ಮತ್ತು ಅನ್ನ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next