ಬಾಗಲಕೋಟೆ: ಮುಖ್ಯಮಂತ್ರಿ ಯಡಿಯೂರಪ್ಪ ನನ್ನ ರಾಜಕೀಯ ಗುರು. ಅವರು ಏನೇ ಅಂದರೂ ನನಗೆ ಬೇಜಾರಿಲ್ಲ. ಅವರ ಸ್ವಭಾವ ನಾನು ಬಹಳ ವರ್ಷದಿಂದ ನೋಡುತ್ತಿದ್ದೇನೆ. ಜೂನ್‌ನಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಆ ವೇಳೆ ಸಚಿವ ಸ್ಥಾನ ಕೊಟ್ಟರೂ, ಕೊಡದಿದ್ದರೂ ಸಂತೋಷವೇ. ನಾನು ಯಡಿಯೂರಪ್ಪ ಅವರ ಮನೆ ಮಗನಿದ್ದಂತೆ ಎಂದು ಬೀಳಗಿ ಬಿಜೆಪಿ ಶಾಸಕ ಮುರುಗೇಶ ನಿರಾಣಿ ಹೇಳಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಷ್ಟೋ ಜನರಿಗೆ ಶಾಸಕರಾಗುವ ಅವಕಾಶ ಸಿಗಲ್ಲ. ನನಗೆ ಬೀಳಗಿ ಕ್ಷೇತ್ರದ ಶಾಸನಾಗುವ ಅವಕಾಶ ದೊರೆತಿದೆ. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ನಾನು ಶ್ರಮಿಸುತ್ತಿದ್ದೇನೆ. ಉತ್ತರ ಕರ್ನಾಟಕದಲ್ಲಿ ಯಾವ ರಾಜಕಾರಣಿಯೂ ಮಾಡದ ಉದ್ಯಮ ಕೆಲಸ ಮಾಡಿದ್ದೇನೆ. 70 ಸಾವಿರ ಜನರಿಗೆ ಉದ್ಯೋಗ ನೀಡಿದ್ದೇನೆ. ಈ ಖುಷಿ ನನಗಿದೆ. ಕೆಲಸ ಮಾಡಲು ಸಚಿವ ಸ್ಥಾನವೇ ಬೇಕೆಂದಿಲ್ಲ ಎಂದರು.
ನಾನೊಬ್ಬ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ಸಚಿವ ಸಂಪುಟ ವಿಸ್ತರಣೆ ವೇಳೆ 117 ಶಾಸಕರಲ್ಲಿ ಯಾರಿಗೆ ಸಚಿವ ಸ್ಥಾನ ಕೊಟ್ಟರೂ ನನಗೆ ಬೇಸರವಿಲ್ಲ.
ವಲಸಿಗರು, ಮೂಲ ಬಿಜೆಪಿಗರು ಎಂಬ ಬೇಸರವಿಲ್ಲ. ನಾನು ಈಚೆಗೆ ಹುಬ್ಬಳ್ಳಿಯಲ್ಲಿ ಜಗದೀಶ ಶೆಟ್ಟರ ನಿವಾಸಕ್ಕೆ ಹೋಗಿದ್ದು, ಬೇರೆ ರೀತಿಯ ಸುದ್ದಿ ಹಬ್ಬಿಸಲಾಗಿದೆ. ನನ್ನ ಉದ್ಯಮಗಳಾದ ಸಾಯಿಪ್ರಿಯಾ ಶುಗರ್ ಅನ್ನು 10 ಸಾವಿರ ಮೆಟ್ರಿಕ್ ಟನ್ ಕಬ್ಬು ನುರಿಸುವುದನ್ನು 15 ಸಾವಿರ ಮೆಟ್ರಿಕ್ ಟನ್‌ಗೆ ಹೆಚ್ಚಳ, ಬಾದಾಮಿ ತಾಲೂಕಿನಲ್ಲಿ ಡಿಸ್ಟಿಲರಿ ಕಾರ್ಖಾನೆ ಆರಂಭಿಸುವ ಕುರಿತು ಚರ್ಚಿಸಲು ಹೋಗಿದ್ದೆ. ಗುಂಪುಗಾರಿಕೆ ಕುರಿತು ಸುದ್ದಿ ಹಬ್ಬಿದ್ದು, ಅದು ಸತ್ಯಕ್ಕೆ ದೂರವಾಗಿದೆ ಎಂದರು.
ಪಾಕಿಸ್ತಾನಕ್ಕೆ ಹೋಗಲಿ:
ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿದವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ನಮ್ಮ ದೇಶದ ನೆಲ, ಜಲ, ಆಹಾರ ತಿಂದು ಪಾಕಿಸ್ತಾನಕ್ಕೆ ಜಯಕಾರ ಕೂಗುವವರಿಗೆ ತಕ್ಕ ಶಿಕ್ಷೆ ಆಗಬೇಕು. ಪಾಕಿಸ್ತಾನದ ಮೇಲೆ ಮಮಕಾರ ಇದ್ದವರು ಅಲ್ಲಿಗೇ ಹೋಗಲಿ. ಈ ರೀತಿ ಮಾಡುವವರು ಯಾರಿಗೋ ಹುಟ್ಟಿ, ಇನ್ಯಾರನ್ನೋ ತಂದೆ ಎಂದು ಹೇಳಿದಂತೆ ಎಂದರು.
ಯುಕೆಪಿ 3ನೇ ಹಂತದಡಿ ಭೂಮಿ ಕಳೆದುಕೊಳ್ಳುವ ರೈತರ ಖುಷ್ಕಿ ಭೂಮಿಗೆ 30 ಲಕ್ಷ, ನೀರಾವರಿ ಭೂಮಿಗೆ 40 ಲಕ್ಷ ಪರಿಹಾರ ಕೊಡಬೇಕು ಎಂಬ ನನ್ನ ಒತ್ತಾಯಕ್ಕೆ ನಾನು ಈಗಲೂ ಬದ್ಧನಿದ್ದೇನೆ. ಉಸ್ತುವಾರಿ ಸಚಿವರೂ ಆಗಿರುವ ಡಿಸಿಎಂ ಕಾರಜೋಳರು, ಕಾನೂನು ಪ್ರಕಾರ ಪರಿಹಾರ ಕೊಡುವುದಾಗಿ ನೀಡಿರುವ ಹೇಳಿಕೆ ಕುರಿತು ನನಗೆ ಗೊತ್ತಿಲ್ಲ. ಆದರೆ, ರೈತರಿಗೆ ಹೆಚ್ಚಿನ ಪರಿಹಾರ ನೀಡುವಂತೆ ಬಜೆಟ್ ಅಧಿವೇಶನದಲ್ಲೂ ನಾನು ಒತ್ತಾಯಿಸುತ್ತೇನೆ ಎಂದರು.