ಕಲಬುರಗಿ: ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆ ಸಂಬಂಧ ಕುಮಾರಸ್ವಾಮಿ ಮತ್ತು ಸುಮಲತಾ ನಡುವಿನ ಮಾತಿನ ಸಮರ ವಿಚಾರವನ್ನು ಯಾರಾದರೂ ಹಿರಿಯರು, ಸ್ವಾಮೀಜಿಗಳು ಎರಡು ಕಡೆಯವರನ್ನು ಕರೆದು ಬಗೆಹರಿಸಬೇಕು ಎಂದು ಗಣಿ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರೆಲ್ಲ ತುಂಬಾ ಸೀನಿಯರ್ ಇದ್ದಾರೆ, ಎರಡು ಕಡೆಯವರು ಇಲ್ಲಿಗೆ ಈ ವಿವಾದವನ್ನು ನಿಲ್ಲಿಸಬೇಕು. ಎರಡು ಕಡೆಯವರನ್ನು ಕರೆದು ಮಾತನಾಡಿಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ:ಎಚ್ಡಿಕೆ-ಸುಮಲತಾ ವಾಕ್ ಸಮರ ತಮಾಷೆಯಾಗಿದೆ, ಕೇಳಲು ನಮಗೆ ಸಮಯವಿಲ್ಲ : ಡಿಸಿಎಂ ಸವದಿ
ಬೇಬಿ ಬೆಟ್ಟದಲ್ಲಿ ಸದ್ಯ ಅಕ್ರಮ ಗಣಿಗಾರಿಕೆ ನಡೆಯುತ್ತಿಲ್ಲ. ಅಲ್ಲಿ ಎಪ್ಪತ್ತು ವರ್ಷದಿಂದ ಅಕ್ರಮ ಗಣಿಗಾರಿಕೆ ನಡೆಯುತ್ತಿತ್ತು. ಆದರೆ ನನ್ನ ಗಮನಕ್ಕೆ ಬಂದ ಮೇಲೆ ಕಳೆದ ನಾಲ್ಕು ತಿಂಗಳ ಹಿಂದೆಯೇ ಅಕ್ರಮ ಕಲ್ಲು ಗಣಿಗಾರಿಕೆಯನ್ನ ಬಂದ್ ಮಾಡಿಸಿದ್ದೇವೆ. ಒಂದು ವೇಳೆ ನಡೆಯುತ್ತಿದ್ದರೆ ನನಗೆ ಮಾಹಿತಿ ನೀಡಲಿ, ಅದನ್ನು ಸರಿ ಪಡಿಸೋಣ. ಕೆಆರ್ ಎಸ್ ಡ್ಯಾಂ ಸುತ್ತಲಿನ ಹತ್ತು ಕಿ.ಮೀಟರ್ ದೂರದಲ್ಲಿರುವ ಅಕ್ರಮ ಗಣಿಗಾರಿಕೆಯನ್ನು ಬಂದ್ ಮಾಡಿಸಿದ್ದೇವೆ. ಹತ್ತು ಕಿ.ಮೀಟರ್ ದೂರದ ಆಚೆಗೆ ಗಣಿಗಾರಿಕೆಗೆ ಅನುಮತಿ ನೀಡಿದ್ದೇವೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದರು.
ಸಿಎಂ ಚರ್ಚೆಯಿಲ್ಲ: ರಾಜ್ಯದ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿದ ನಿರಾಣಿ, ಮುಖ್ಯಮಂತ್ರಿಯಾಗಲು ರಾಜ್ಯದಲ್ಲಿ ಸಾಕಷ್ಟು ಜನ ಇದ್ದಾರೆ. ಆದರೆ ಸದ್ಯ ಯಡಿಯೂರಪ್ಪ ನವರು ಮುಖ್ಯಮಂತ್ರಿ ಇದ್ದಾರೆ. ಹೀಗಾಗಿ ಎರಡು ವರ್ಷ ಆ ಬಗ್ಗೆ ಯಾವುದೇ ಚರ್ಚೆಯಿಲ್ಲ. ಮುಂದೆ ನಮ್ಮ ಸರ್ಕಾರ ಬಂದ ಮೇಲೆ ಮುಖ್ಯಮಂತ್ರಿ ಯಾರಾಗ್ತಾರೆ ನೋಡೋಣ ಎಂದರು.
ಶಾಸಕ ಯತ್ನಾಳ ನಿರಂತರ ಆರೋಪ ವಿಚಾರವಾಗಿ ಮಾತನಾಡಿದ ಅವರು, ನನ್ನ ಬಗ್ಗೆ ತಪ್ಪುಗಳನ್ನು ಹೇಳುತ್ತಾ ಹೋದರೆ ನಾನು ಸುಧಾರಣೆ ಮಾಡಿಕೊಳ್ತೇನೆ. ಅವರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ಹೇಳಿದರು.