Advertisement
ಧಾರ್ಮಿಕ ನೇತೃತ್ವದ ಜೊತೆ ಜೊತೆಗೆ ಡಾ|ಶ್ರೀ ಶಿವಮೂರ್ತಿ ಮುರುಘಾ ಶರಣರು, ಹಿಂದುಳಿದ ಚಿತ್ರದುರ್ಗ ಜಿಲ್ಲೆಯನ್ನು ಅತ್ಯುತ್ತಮ ಪ್ರವಾಸಿ ತಾಣವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡು ಅನುಷ್ಠಾನಕ್ಕೆ ತರುತ್ತಿದ್ದಾರೆ.
Related Articles
Advertisement
ಮುರುಘಾ ಮಠದ ಉದ್ಯಾನದಲ್ಲಿ ಆದಿ ಮಾನವನಿಂದ ಆಧುನಿಕ ಮಾನವನ ಹಂತದವರೆಗೆ ನಡೆದು ಬಂದ ವಿಕಾಸ ಪ್ರಕ್ರಿಯೆ ಹಾಗೂ ಕಾಯಕ ಸಂಸ್ಕೃತಿಯನ್ನು ಬಿಂಬಿಸುವ ಹತ್ತಾರು ಕಲಾಕೃತಿಗಳನ್ನು ಸೃಷ್ಟಿಸಲಾಗಿದೆ. 2010ರ ದಸರೆಯಲ್ಲಿ ಔಪಚಾರಿಕವಾಗಿ ಉದ್ಘಾಟನೆಯಾದ ಮುರುಘಾ ವನಕ್ಕೆ ಈಗ ದಶಕ ತುಂಬಿದೆ. ಜೀವ ಸಂಕುಲದ ವಿಕಾಸ ಪಕ್ರಿಯೆ, ಶರಣ ಪರಂಪರೆ ಹಾಗೂ ಕಾಯಕ ಸಂಸ್ಕೃತಿಯನ್ನು ಬಿಂಬಿಸುವ ಹತ್ತಾರು ಕಲಾಕೃತಿಗಳ ಮೂಲಕ ನೂರಾರು ಶಾಲಾ ಮಕ್ಕಳು ಹಾಗೂ ಸಾರ್ವಜನಿಕರ ಗಮನ ಸೆಳೆಯುತ್ತಿದೆ. “ಅಂದಿನಿಂದ-ಇಂದಿನವರೆಗೆ’ ಎಂಬ ಪರಿಕಲ್ಪನೆಯಲ್ಲಿ ಮೂಡಿ ಬಂದಿರುವ ಇಲ್ಲಿನ ಕಲಾಕೃತಿಗಳಲ್ಲಿ ಕ್ರಿಸ್ತ ಪೂರ್ವ ಮತ್ತು ನಂತರದ ಜೀವ ವಿಕಾಸದ ಬೆಳವಣಿಗೆಯ ಮಜಲುಗಳನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ.
ಅವನತಿ ಹೊಂದಿದ ಪ್ರಾಣಿಗಳು (ಡೈನೋಸಾರ್) ಆದಿ ಮಾನವರ ಜೀವನ ಕ್ರಮಗಳನ್ನು ಬಿಂಬಿಸುವ ಸಿಮೆಂಟಿನ ಕಲಾಕೃತಿಗಳನ್ನು ನಿರ್ಮಿಸಿರುವ ಕಲಾವಿದರು ಅವುಗಳಿಗೆ ಜೀವ ತುಂಬಿದ್ದಾರೆ. ಮಾನವನ ಜೀವನ ವಿಕಾಸದ ವಿವಿಧ ಮಜಲುಗಳನ್ನು ಕಟ್ಟಿಕೊಡುವ ಸಿಮೆಂಟಿನ ಕಲಾಕೃತಿಗಳು ಇಲ್ಲಿ ಅತ್ಯಂತ ಆಕರ್ಷಕವಾಗಿವೆ. ಸಾವಿರಾರು ವರ್ಷಗಳ ಹಿಂದೆ ಇದ್ದ ದೈತ್ಯಾಕಾರದ ಡೈನೋಸಾರ್‌ಗಳು, ದನ ಕರುಗಳು, ಹಳ್ಳಿಕಾರ್ ತಳಿಯ ಹಾಲುಣಿಸುತ್ತಿರುವ ಹಸು, ಜಿಂಕೆ, ನವಿಲು, ಮೊಸಳೆ, ಜಿರಾಫೆ ಮತ್ತಿತರ ಪ್ರಾಣಿ, ಪಕ್ಷಿಗಳ ಜತೆಯಲ್ಲಿ ಸಹಜೀವನ ಸಂದೇಶ ಸಾರುವ ಹಾವುಗಳ ಹಲವಾರು ಕಲಾಕೃತಿಗಳಿವೆ. ಕದಳೀವನಕ್ಕೆ ಹೊರಟುನಿಂತ ಅಕ್ಕ ಮಹಾದೇವಿ, ಶರಣನೊಬ್ಬನ ಮಾತು ಕೇಳುತ್ತಿರುವ ಗ್ರಾಮೀಣ ಜನರು ಹಾಗೂ ಗ್ರಾಮೀಣ ದೈನಂದಿನ ಬದುಕನ್ನು ಬಿಂಬಿಸುವ ಹಲವು ಕಲಾಕೃತಿಗಳು ಉದ್ಯಾನದಲ್ಲಿ ನಿರ್ಮಾಣಗೊಂಡಿವೆ.
ಕೂಡಲಸಂಗಮದ ಐಕ್ಯಮಂಟಪ, ನೀರು ಕುಡಿಯಲು ಬಂದ ಜಿಂಕೆಯನ್ನು ಬೇಟೆಯಾಡುತ್ತಿರುವ ಮೊಸಳೆ, ಪೆಂಗ್ವಿನ್, ನೀರಾನೆ ಹಾಗೂ ವಿವಿಧ ಪ್ರಭೇದಗಳ ಕೊಕ್ಕರೆಗಳನ್ನು ನಿರ್ಮಿ ಸಲಾಗಿದೆ. ಸಮೀಪದ ಮರದ ಮೇಲೆ ಗೂಬೆ, ಹದ್ದು, ಗಿಡುಗ, ಪಾರಿವಾಳ ಸೇರಿದಂತೆ ಪಕ್ಷಿಗಳ ಸಮೂಹವಿದೆ. ಇವೆಲ್ಲ ಜೀವಂತ ಹಕ್ಕಿಗಳೇನೋ ಎನ್ನಿಸುವಷ್ಟು ಸಹಜತೆಯಿಂದ ಈ ಕಲಾಕೃತಿಗಳು ಆಕರ್ಷಿಸುತ್ತವೆ. ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳದ ಕಲಾವಿದ ಸಂಗಮೇಶ ಕತ್ತಿ ಮತ್ತು ಅವರ ಸಂಗಡಿಗರಾದ ಹದಿನೈದು ಕಲಾವಿದರು ಕಳೆದ ಒಂದೂವರೆ ವರ್ಷ ನಿರಂತರವಾಗಿ ದುಡಿದು ಈ ಕಲಾಕೃತಿಗಳನ್ನು ನಿರ್ಮಿಸಿದ್ದಾರೆ. ಡಾ|ಶಿವಮೂರ್ತಿ ಮುರುಘಾ ಶರಣರ ಕಲ್ಪನೆ ಮತ್ತು ಮಾರ್ಗದರ್ಶನದಲ್ಲಿ ಈ ಕಲಾವಿದರು ಸಿಮೆಂಟಿನ ಕಲಾಕೃತಿ ರೂಪಿಸಿದ್ದು, ಪ್ರವಾಸಿಗರ ಕಣ್ಮನ ಸೆಳೆಯುತ್ತಿವೆ.
ನವ ಮುರುಘಾವನಕ್ಕೆ ದಶಕದ ಸಂಭ್ರಮಚಿತ್ರದುರ್ಗದ ಮುರುಘಾ ಮಠವೆಂದರೆ ಅದು ಪ್ರಕೃತಿಯ ಮಧ್ಯದಲ್ಲಿರುವ ಪ್ರಶಾಂತ ತಾಣ. ಸದಾ ಹಚ್ಚ ಹಸಿರು ವಾತಾವರಣ. ಪ್ರಾಣಿ, ಪಕ್ಷಿಗಳ ಕಲರವ. ಮನಸ್ಸಿಗೆ ನೆಮ್ಮದಿ ನೀಡುವ ತಾಣ. ಇದೇ ಜಾಗಕ್ಕೆ ಡಾ| ಶಿವಮೂರ್ತಿ ಮುರುಘಾ ಶರಣರು ಒಂದಿಷ್ಟು ಹೊಸ ಟಚ್ ಕೊಟ್ಟಿದ್ದು, ಈ ವಾತಾವರಣದಲ್ಲಿ ಓಡಾಡುತ್ತಾ ಮನಸ್ಸಿಗೆ ಮುದ ನೀಡುವ, ಮನುಷ್ಯನ ವಿಕಾಸವನ್ನು ಅಧ್ಯಯನ ಮಾಡುವ, ಮಕ್ಕಳಿಗೆ ಮನರಂಜನೆ ನೀಡುವ ಥೀಮ್ ಪಾರ್ಕ್ ರೂಪಿಸಿದ್ದಾರೆ. -ತಿಪ್ಪೇಸ್ವಾಮಿ ನಾಕೀಕೆರೆ