Advertisement

ಇನ್ಫಿ ಮೂರ್ತಿಯವರ ಪರ ಹೆಚ್ಚಿದ ಧ್ವನಿ

03:45 AM Apr 04, 2017 | Team Udayavani |

ಬೆಂಗಳೂರು:  ಐಟಿ ದಿಗ್ಗಜ ಇನ್ಫೋಸಿಸ್‌ನ ಮುಖ್ಯ ಆಡಳಿತಾತ್ಮಕ ಅಧಿಕಾರಿ(ಸಿಒಒ) ವೇತನ ಹೆಚ್ಚಳ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಸಂಸ್ಥೆಯ ಸ್ಥಾಪಕರಲ್ಲೊಬ್ಬರಾದ ಎನ್‌.ಆರ್‌. ನಾರಾಯಣಮೂರ್ತಿ ಅವರಿಗೆ ಹಲವರ ಬೆಂಬಲ ವ್ಯಕ್ತವಾಗಿದೆ.

Advertisement

ಕಂಪನಿಯ ಮಾಜಿ ಮುಖ್ಯ ಹಣಕಾಸು ಅಧಿಕಾರಿ ವಿ.ಬಾಲಕೃಷ್ಣನ್‌, ಮಾಜಿ ಸಿಎಫ್ಒ ಮೋಹನ್‌ದಾಸ್‌ ಪೈ ಸೇರಿದಂತೆ ಅನೇಕರು ಸೋಮವಾರ ಇನ್ಫಿ ಮೂರ್ತಿ ನಿಲುವನ್ನು ಬೆಂಬಲಿಸಿ ಮಾತನಾಡಿದ್ದಾರೆ. “ಅತ್ಯುತ್ತಮ, ನಿಷ್ಕಳಂಕ ಆಡಳಿತ ಹಾಗೂ ಮೌಲ್ಯಗಳಿಗೆ ಹೆಸರಾಗಿದ್ದ ಇನ್ಫೋಸಿಸ್‌ ಅನ್ನು ಪ್ರಸ್ತುತ ನಾಯಕತ್ವವು ಹಾಳು ಮಾಡುತ್ತಿದೆ’, ಎಂದು ಬಾಲಕೃಷ್ಣನ್‌ ಆರೋಪಿಸಿದರೆ, “ಮೂರ್ತಿ ಅವರು ಸರಿಯಾದ ಪ್ರಶ್ನೆಯನ್ನೇ ಎತ್ತಿದ್ದಾರೆ. ಈ ಕುರಿತು ಮಂಡಳಿಯು ಚರ್ಚಿಸಬೇಕು,’ ಎಂದು ಪೈ ಅಭಿಪ್ರಾಯಪಟ್ಟಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ನಡುವೆಯೇ, ಸೋಮವಾರ ಸಿಒಒ ಪ್ರವೀಣ್‌ ರಾವ್‌ ಅವರ ವೇತನ ಹೆಚ್ಚಳವನ್ನು ಇನ್ಫೋಸಿಸ್‌ ಸಮರ್ಥಿಸಿಕೊಂಡಿದೆ. “ರಾವ್‌ ಅವರ ವೇತನ ಹೆಚ್ಚಳವು ಶೇ.1.4ರಷ್ಟು ಅಷ್ಟೆ. ನಗದು ಪ್ರಮಾಣವು 5.2 ಕೋಟಿ ರೂ.ನಿಂದ 4.6 ಕೋಟಿ ರೂ.ಗೆ ತಗ್ಗಿಸಲಾಗಿದೆ. ಆದರೆ, ಅವರ ಸಾಧನೆ ಆಧರಿತ ಪಾವತಿಯನ್ನು ಶೇ.45ರಿಂದ ಶೇ.63ಕ್ಕೇರಿಸಲಾಗಿದೆ,’ ಎಂದಿದೆ. ಜತೆಗೆ, “ಮೂರ್ತಿ ಅವರ ಹೇಳಿಕೆಯನ್ನು ಪ್ರಮುಖ ಪ್ರತಿಕ್ರಿಯೆ ಎಂದು ಪರಿಗಣಿಸಿ, ಸಂಸ್ಥೆಯ ದೀರ್ಘ‌ಕಾಲಿಕ ಹಿತಾಸಕ್ತಿಗಾಗಿ ಎಲ್ಲ ಷೇರುದಾರರೊಂದಿಗೂ ಉತ್ತಮ ಸಂಬಂಧವನ್ನು ಮುಂದುವರಿಸಿಕೊಂಡು ಹೋಗುತ್ತೇವೆ,’ ಎಂದು ಕಂಪನಿ ಹೇಳಿದೆ.

ಸಿಕ್ಕಾಗೆ ಏಕೆ ಅಷ್ಟು ವೇತನ?: ಸಂಭಾವನೆ ಕುರಿತು ಇನ್ಫಿ ಮೂರ್ತಿ ಅವರ ನಿಲುವನ್ನು ಸಮರ್ಥಿಸಿಕೊಂಡು ಸೋಮವಾರ ಮಾತನಾಡಿದ ಇನ್ಫೋಸಿಸ್‌ನ ಮಾಜಿ ಸಿಎಫ್ಒ ಮೋಹನ್‌ದಾಸ್‌ ಪೈ, “ಅತ್ಯಂತ ಕ್ಷಿಪ್ರವಾಗಿ ಬೆಳೆಯುತ್ತಿರುವ ಹಾಗೂ 24 ಸಾವಿರ ಕೋಟಿ ರು. ಲಾಭ ಗಳಿಸುತ್ತಿರುವ ಟಿಸಿಎಸ್‌ ಕಂಪನಿಯ ಸಿಇಒ ಚಂದ್ರ ಕೇವಲ 26 ಕೋಟಿ ರು. ವೇತನ ಗಳಿಸುತ್ತಾರೆ ಎಂದ ಮೇಲೆ ಇನ್ಫಿ ಸಿಇಒ ಸಿಕ್ಕಾಗೆ 70-80 ಕೋಟಿ ರೂ. ಪಾವತಿಸಬೇಕಾದ ಅಗತ್ಯವೇನಿದೆ,’ ಎಂದೂ ಪ್ರಶ್ನಿಸಿದ್ದಾರೆ.

ವೇತನ ಸಿಕ್ಕಾಪಟ್ಟೆ ಹೆಚ್ಚಾಯಿತು: ನಾರಾಯಣಮೂರ್ತಿಯವರ ವಾದಕ್ಕೆ ಕಂಪನಿಯ ಮಾಜಿ ಮುಖ್ಯ ಹಣಕಾಸು ಅಧಿಕಾರಿ ವಿ.ಬಾಲಕೃಷ್ಣನ್‌ ಪ್ರತಿಕ್ರಿಯೆ ನೀಡಿ, ಬೆಂಬಲ ವ್ಯಕ್ತಪಡಿಸಿದ್ದಾರೆ. ಪ್ರವೀಣ್‌ ರಾವ್‌ಗೆ ನೀಡಿದ ವೇತನ ಪರಿಷ್ಕರಣೆ ಹೆಚ್ಚಾಯಿತು ಎಂದಿದ್ದಾರೆ. ಕೆಳ ಹಂತದ ಉದ್ಯೋಗಿಗಳಿಗೆ ಹೆಚ್ಚಿನ ವೇತನ ಕೇಳಬಾರದು ಎಂದು ಹೇಳುವಾಗ ಯಾವುದೇ ಕಂಪನಿಯ ಉನ್ನತ ಅಧಿಕಾರಿಗಳಿಗೆ ಹೆಚ್ಚಿನ ವೇತನ ಕೊಡುವುದು ಸರಿಯಲ್ಲ ಎಂದಿದ್ದಾರೆ. ಇದರ ಜತೆಗೆ ಇನ್ಫೋಸಿಸ್‌ ಆಡಳಿತ ಮಂಡಳಿಯನ್ನು ಪುನಾರಚಿಸಬೇಕು ಎಂದೂ ಅವರು ಪ್ರತಿಪಾದಿಸಿದ್ದಾರೆ.

Advertisement

ಭುಗಿಲೆದ್ದ ಭಿನ್ನಮತ?
ಇನ್ಫೋಸಿಸ್‌ನ ಕೆಲವು ಸಹ ಸ್ಥಾಪಕರು ಮತ್ತು ಆಡಳಿತ ಮಂಡಳಿ ನಡುವಿನ ಭಿನ್ನಾಭಿಪ್ರಾಯ ಭಾನುವಾರದ ಸಭೆಯಲ್ಲಿ ಸ್ಫೋಟಗೊಂಡಿತ್ತು. ಸಿಒಒ ಯು.ಬಿ. ಪ್ರವೀಣ್‌ ರಾವ್‌ ಅವರ ವಾರ್ಷಿಕ ವೇತನವನ್ನು ಶೇ.35ರಷ್ಟು ಅಂದರೆ 12.5 ಕೋಟಿ ರು.ಗೆ ಏರಿಸಿರುವುದಕ್ಕೆ ಇನ್ಫಿ ಮೂರ್ತಿ ಸೇರಿದಂತೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. “ಕಂಪನಿಯು ಯಾವತ್ತೂ ನ್ಯಾಯಸಮ್ಮತ ಸಂಭಾವನೆಯನ್ನು ಪಾಲಿಸಿಕೊಂಡು ಬಂದಿದೆ. ಆದರೆ, ಇತ್ತೀಚೆಗಿನ ಬೆಳವಣಿಗೆಗಳು ಆ ಸಂಪ್ರದಾಯಕ್ಕೆ ವಿರುದ್ಧವಾಗಿವೆ. ರಾವ್‌ ವೇತನ ಹೆಚ್ಚಳವು ಕಂಪನಿಯೊಳಗಿನ ಭಿನ್ನಮತವನ್ನು ಹೆಚ್ಚಿಸಲಿದೆ,’ ಎಂದಿದ್ದರು ಮೂರ್ತಿ. ಅಲ್ಲದೆ, ಸಿಒಒ ವೇತನ ಹೆಚ್ಚಳದ ನಿರ್ಣಯದ ಪರ ಮತ ಹಾಕುವ ಸಂದರ್ಭದಲ್ಲಿ ಇನ್ಫಿ ಮೂರ್ತಿ ಸೇರಿದಂತೆ ಕಂಪನಿಯ ಹಲವು ಪ್ರವರ್ತಕರು ದೂರವುಳಿದಿದ್ದರು. ಕಳೆದ ವರ್ಷ ಸಿಇಒ ವಿಶಾಲ್‌ ಸಿಕ್ಕಾ ವೇತನ ಹೆಚ್ಚಿಸಲು ಕಂಪನಿ ಮುಂದಾದಾಗಲೂ ಇದೇ ರೀತಿಯ ಅಭಿಪ್ರಾಯ, ಭಿನ್ನ ಧೋರಣೆ ವ್ಯಕ್ತವಾಗಿತ್ತು.

ಇನ್ಫಿ ಷೇರು ಶೇ.1 ಕುಸಿತ:
ವೇತನ ಕುರಿತು ಇನ್ಫಿ ಮೂರ್ತಿ ಅವರು ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಇನ್ಫೋಸಿಸ್‌ ಕಂಪನಿಯ ಷೇರುಗಳು ಸೋಮವಾರ ಶೇ.1ರಷ್ಟು ಕುಸಿತ ದಾಖಲಿಸಿವೆ. ಮುಂಬೈ ಷೇರುಪೇಟೆಯಲ್ಲಿ ಇನ್ಫಿ ಷೇರುಗಳು ಶೇ.0.94ರಷ್ಟು ಕುಸಿದು, 1,011.25 ರೂ. ಆದರೆ, ನಿಫ್ಟಿಯಲ್ಲಿ ಶೇ.1.15 ಕುಸಿತ ದಾಖಲಿಸಿ, ಷೇರು ದರ 1,010.45ಕ್ಕೆ ತಲುಪಿದೆ.

Advertisement

Udayavani is now on Telegram. Click here to join our channel and stay updated with the latest news.

Next