Advertisement

ಮೂರ್ತಿ ತಯಾರಿಕೆ ಈಗ ಮೊದಲಿಗಿಂತ ಸುಲಭ

04:47 PM Sep 08, 2018 | |

ಮಲೇಬೆನ್ನೂರು: ಗಣೇಶ ಹಬ್ಬ ಹೊಸ್ತಿಲಲ್ಲಿದೆ. ಗಲ್ಲಿ ಗಲ್ಲಿಗಳಲ್ಲಿ ಪೆಂಡಾಲ್‌ ಸಿದ್ಧತೆ ನಡೆದಿವೆ. ಮಾರುಕಟ್ಟೆಯಲ್ಲಿ ಅಲಂಕಾರಿಕ ವಸ್ತುಗಳ ಮಾರಾಟ ಶುರುವಾಗಿದೆ. ಇವೆಲ್ಲಾ ಹಬ್ಬಕ್ಕೆ ಕೆಲವೇ ದಿನ ಬಾಕಿ ಇರುವಾಗ ನಡೆಯುವ ಸಿದ್ಧತೆಗಳಾದರೆ ಗಣೇಶ ಮೂರ್ತಿಗಳ ತಯಾರಿ ಏಳೆಂಟು ತಿಂಗಳು ಮೊದಲೇ ಪ್ರಾರಂಭವಾಗುತ್ತದೆ.

Advertisement

ಪಟ್ಟಣದಲ್ಲಿ ವಿಶ್ವಕರ್ಮ ಸಮಾಜದ ನಾಲ್ಕು ಕುಟುಂಬಗಳು ತಲತಲಾಂತರದಿಂದ ಗಣಪತಿ ತಯಾರಿಸುತ್ತಾ ಬರುತ್ತಿವೆ. ಪ್ರತಿವರ್ಷ ಏಪ್ರಿಲ್‌ ತಿಂಗಳಿಂದ ಇವರು ಗಣಪತಿ ಮೂರ್ತಿ ತಯಾರಿಕೆಯಲ್ಲಿ ನಿರತರಾಗುತ್ತಾರೆ. ಹಬ್ಬಕ್ಕೆ ಹದಿನೈದು ದಿನಗಳು ಬಾಕಿ ಇರುವಾಗ ತಯಾರಾದ ಮೂರ್ತಿಗಳಿಗೆ ಬಣ್ಣ ಹಚ್ಚುವ ಕಾರ್ಯ ಶುರುವಾಗುತ್ತದೆ.
 
“ಈ ಹಿಂದೆ ಅಕ್ಕಿ, ಬೇಳೆ, ಬೆಲ್ಲ, ತೆಂಗಿನಕಾಯಿ, ಎಲೆ ಅಡಿಕೆ ಜೊತೆ 1 ರೂಪಾಯಿ ಇಟ್ಟು ಭಕ್ತಿಭಾವದಿಂದ ಗಣೇಶನ ಮೂರ್ತಿಗೆ ಪೂಜೆ ಸಲ್ಲಿಸಿ, ಇಲ್ಲಿಂದ ತೆಗೆದುಕೊಂಡು ಹೋಗುತ್ತಿದ್ದರು. ಇಂದು ಜನರಲ್ಲಿ ಆ ಭಯ, ಭಕ್ತಿ ಕಾಣುತ್ತಿಲ್ಲ”
ಎಂದು 68 ವರ್ಷಗಳಿಂದ ಗಣೇಶನ ಮೂರ್ತಿ ತಯಾರಿಸುವ ಕಾಯಕದಲ್ಲಿ ತೊಡಗಿರುವ ಗಣೇಶಾಚಾರ್‌ ನೆನಪಿಸಿಕೊಳ್ಳುತ್ತಾರೆ. 

“ಮೊದಲು ಮಣ್ಣು ಮತ್ತು ಹತ್ತಿಯನ್ನು ಒಟ್ಟಾಗಿ ಕುಟ್ಟಿ ಕುಟ್ಟಿ ಹದ ಮಾಡುತ್ತಿದ್ದೆವು. ಗಣೇಶನ ಮೂರ್ತಿಯ ಕಿರೀಟ, ಪಂಚೆ, ಮುತ್ತಿನ ಸರ ಮುಂತಾದ ಕಡೆ ಬಣ್ಣ ಬಣ್ಣದ ಜೆಲ್ಲಿ ಪೇಪರ್‌ ಕಟ್‌ ಮಾಡಿ ಹಚ್ಚುತ್ತಿದ್ದೆವು. ಕಾಲ ಬದಲಾದಂತೆ ಮಣ್ಣು ಹದ ಮಾಡಲು ಯಂತ್ರಗಳು ಬಂದಿವೆ. ಬಣ್ಣ ಹಚ್ಚಲು ಸ್ಪ್ರೆ ಮಷಿನ್‌ಗಳು ಬಂದಿದ್ದು ಗಣೇಶನ ಮೂರ್ತಿ ತಯಾರಿಸಲು ಮುಂಚೆ ಇದ್ದ ಕಷ್ಟ ಈಗ ಇಲ್ಲ” ಎನ್ನುತ್ತಾರೆ ಕೇಶವಾಚಾರ್‌.

“ನಾವೆಲ್ಲ ಒಟ್ಟಾಗಿ ರಾಜನಹಳ್ಳಿ ಗ್ರಾಮದಿಂದ ಜೇಡಿ ಮಣ್ಣು ತರಿಸುತ್ತಿದ್ದೇವೆ. ವಿನಾಯಕನ ಮೂರ್ತಿಗೆ ನೈಸರ್ಗಿಕ ಬಣ್ಣ
ಉಪಯೋಗಿಸುತ್ತೇವೆ. ಜಿಎಸ್‌ಟಿಯಿಂದಾಗಿ ಬಣ್ಣ ಮತ್ತು ಹಲಗೆಯ ಬೆಲೆ ಹೆಚ್ಚಾಗಿದ್ದು ಗಣಪತಿಯ ದರ ಸ್ವಲ್ಪಮಟ್ಟಿಗೆ ಹೆಚ್ಚಾಗಲಿದೆ” ಎನ್ನುತ್ತಾರೆ ಮೂರ್ತಿ ತಯಾರಕರು.

“1 ಅಡಿಯಿಂದ 8 ಅಡಿ ಎತ್ತರದವರೆಗಿನ ಆಕರ್ಷಕ, ವಿವಿಧ ಭಂಗಿಗಳ ಗಣಪನನ್ನು ತಯಾರಿಸುತ್ತಿದ್ದು ಹೊಳಲು, ರಾಣೇಬೆನ್ನೂರು, ತುಮ್ಮಿನಕಟ್ಟೆ, ನಲ್ಕುದುರೆ, ತ್ಯಾವಣಗಿ, ಹೊನ್ನಾಳಿ ತಾಲೂಕಿನ ಹಲವಾರು ಗ್ರಾಮಗಳಲ್ಲಿ ನಾವು ತಯಾರಿಸಿದ ಗಣಪನಿಗೆ ಬೇಡಿಕೆ ಇದೆ. ಜನರ ಅಭಿಲಾಷೆಗೆ ತಕ್ಕಂತೆ ಗಣೇಶನ ಮೂರ್ತಿ ತಯಾರಿಸಿಕೊಡುತ್ತೇವೆ” ಎನ್ನುತ್ತಾರೆ ಪ್ರಕಾಶಾಚಾರ್‌.
 
ಪಿಓಪಿ ಗಣಪತಿ ತಯಾರಿಕೆ ಮತ್ತು ಮಾರಾಟ ನಿಷೇಧವನ್ನು ಜಿಲ್ಲಾ ಆಡಳಿತ ಕಟ್ಟುನಿಟ್ಟಾಗಿ ಜಾರಿ ಮಾಡಿದಲ್ಲಿ ಸಾಂಪ್ರದಾಯಕವಾಗಿ ಜೇಡಿ ಮಣ್ಣಿನಿಂದ ತಯಾರಾಗುವ ಗಣಪತಿಗೆ ಸಾಕಷ್ಟು ಬೇಡಿಕೆಯುಂಟಾಗುತ್ತದೆ. ಪ್ರಾರಂಭದಲ್ಲಿ
ಲಕ್ಷಗಟ್ಟಲೇ ಬಂಡವಾಳ ಹಾಕಿರುತ್ತೇವೆ. ಇದರಿಂದ ನಮಗೂ ಅಲ್ಪಸ್ವಲ್ಪ ಲಾಭವಾಗಬಹುದು ಎಂಬುದು ಮಣ್ಣಿನ ಗಣಪ ತಯಾರಕರ ಆಶಯ.

Advertisement

1 ಅಡಿ ಗಣಪತಿಗೆ ರೂ. 300 ರಿಂದ ಪ್ರಾರಂಭವಾಗಿ, ಮೂರ್ತಿಯ ಎತ್ತರ ಮತ್ತು ವಿಶೇಷ ಕೆಲಸಗಳ ಆಧಾರದ ಮೇಲೆ 15 ಸಾವಿರ ರೂ.ವರೆಗೂ ದರ ನಿಗದಿ ಯಾಗುತ್ತದೆ. ಕೆಲವು ಜಿಲ್ಲೆಗಳಲ್ಲಿ ಪಿಓಪಿ ಗಣಪತಿ ಮಾರಾಟ ಕಡ್ಡಾಯವಾಗಿ ನಿಷೇಧ ಮಾಡಿರುವ ಹಿನ್ನೆಲೆಯಲ್ಲಿ ಹೋಲ್‌ಸೇಲ್‌ ದರದಲ್ಲಿ ಗಣಪತಿಯನ್ನು ಬೇರೆ ಬೇರೆ ಜಿಲ್ಲೆಯಿಂದ ಬಂದು ಮುಂಗಡ ಹಣ ಕೊಟ್ಟು ವರ್ತಕರು ಖರೀದಿಸಿದ್ದಾರೆ. 

„ರಾಮಶೆಟ್ಟಿ ಎಂ.ಕೆ.

Advertisement

Udayavani is now on Telegram. Click here to join our channel and stay updated with the latest news.

Next