ದುಬಾೖ: ದುಬಾೖ ಡ್ನೂಟಿ ಫ್ರೀ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಗೆಲುವು ಸಾಧಿಸುವ ಮೂಲಕ ವಿಶ್ವದ ನಂಬರ್ ವನ್ ಟೆನಿಸಿಗ ಆ್ಯಂಡಿ ಮರ್ರೆ ಈ ವರ್ಷ ಪ್ರಶಸ್ತಿಯ ಖಾತೆ ತೆರೆದಿದ್ದಾರೆ. ಶನಿವಾರ ರಾತ್ರಿ ನಡೆದ ಫೈನಲ್‌ನಲ್ಲಿ ಅವರು ಸ್ಪೇನಿನ ಫೆರ್ನಾಂಡೊ ವೆರ್ದಸ್ಕೊ ವಿರುದ್ಧ ಕೇವಲ 73 ನಿಮಿಷಗಳಲ್ಲಿ 6-3, 6-2 ಅಂತರದ ಜಯ ಸಾಧಿಸಿದರು.
ಇದು ಆ್ಯಂಡಿ ಮರ್ರೆಗೆ ಒಲಿದ ಮೊದಲ ದುಬಾೖ ಟೆನಿಸ್ ಪ್ರಶಸ್ತಿ. ಒಟ್ಟಾರೆಯಾಗಿ ಟೆನಿಸ್ ಬಾಳ್ವೆಯ 45ನೇ ಕಿರೀಟ. ಮರ್ರೆ 5 ವರ್ಷಗಳ ಹಿಂದೊಮ್ಮೆ ಇಲ್ಲಿ ಫೈನಲ್ ಪ್ರವೇಶಿಸಿದ್ದರೂ ಅಂದು ರೋಜರ್ ಫೆಡರರ್ ವಿರುದ್ಧ ಸೋಲುಂಡಿದ್ದರು.
2017ರ ಟೆನಿಸ್ ಋತುವಿನಲ್ಲಿ ಮರ್ರೆ ಆಡುತ್ತಿರುವ ದ್ವಿತೀಯ ಫೈನಲ್ ಇದಾಗಿದೆ. ಇದಕ್ಕೂ ಮುನ್ನ ದೋಹಾ ಟೆನಿಸ್ ಕೂಟದ ಫೈನಲ್ ಪ್ರವೇಶಿಸಿ ಅಲ್ಲಿ ಜೊಕೋವಿಕ್‌ಗೆ ಶರಣಾಗಿದ್ದರು. “ಕೊನೆಗೂ ದುಬಾೖಯಲ್ಲಿ ಟೆನಿಸ್ ಪ್ರಶಸ್ತಿ ಗೆದ್ದದ್ದು ಬಹಳ ಖುಷಿಯ ಸಂಗತಿ. ಇಂದಿನ ಆರಂಭ ನಿಧಾನ ಗತಿಯದ್ದಾಗಿತ್ತಾದರೂ ಒಟ್ಟಾರೆಯಾಗಿ ನನ್ನ ಆಟ ಉತ್ತಮವಾಗಿತ್ತು. ಫಿನಿಶಿಂಗ್ ಕೂಡ ಸಮಾಧಾನ ತಂದಿತು’ ಎಂದು ಮರ್ರೆ ಪ್ರತಿಕ್ರಿಯಿಸಿದರು.
ಇದು ವೆರ್ದಸ್ಕೊ ವಿರುದ್ಧ ಆಡಿದ 14 ಪಂದ್ಯಗಳಲ್ಲಿ ಮರ್ರೆ ಸಾಧಿಸಿದ 13ನೇ ಗೆಲುವು. ಕೇವಲ ಒಂದರಲ್ಲಷ್ಟೇ ಅವರಿಗೆ ಸೋಲು ಎದುರಾಗಿತ್ತು.
25 ವರ್ಷಗಳ ದುಬಾೖ ಟೆನಿಸ್ ಚರಿತ್ರೆಯಲ್ಲಿ ಚಾಂಪಿಯನ್ ಎನಿಸಿದ ಮೊದಲ ಬ್ರಿಟನ್ ಆಟಗಾರನೆಂಬುದು ಆ್ಯಂಡಿ ಮರ್ರೆ ಹೆಗ್ಗಳಿಕೆ.
ಬೋಪಣ್ಣ ಜೋಡಿ ಪರಾಭವ: ದುಬಾೖ ಕೂಟದ ಪುರುಷರ ಡಬಲ್ಸ್‌ನಲ್ಲಿ ಭಾರತದ ರೋಹನ್ ಬೋಪಣ್ಣ-ಪೋಲೆಂಡಿನ ಮಾರ್ಸಿನ್ ಮಾಟ್ಕೊàವ್‌ಸ್ಕಿ ಜೋಡಿಗೆ ಸೋಲು ಎದುರಾಗಿದೆ. ರೊಮೇನಿಯಾದ ಹೊರಿಯ ಟೆಕು-ಹಾಲೆಂಡಿನ ಜೀನ್ ಜೂಲಿಯನ್ ರೋಜರ್ ವಿರುದ್ಧ ಭಾರೀ ಹೋರಾಟ ಸಂಘಟಿಸಿದ ಬಳಿಕ ಇಂಡೋ-ಪೋಲಿಶ್ ಜೋಡಿ 6-4, 3-6, 3-10 ಅಂತರದಿಂದ ಪರಾಭವಗೊಂಡಿತು.