ಕಾಸರಗೋಡಿನ ಶ್ರೀ ಗೋಪಾಲಕೃಷ್ಣ ಸಂಗೀತ ವಿದ್ಯಾಲಯದ 20ನೆಯ ವಾರ್ಷಿಕೋತ್ಸವದ ಅಂಗ ವಾಗಿ ನಗರದ ಲಲಿತಕಲಾ ಸದನದಲ್ಲಿ ಈಚೆಗೆ ಜರಗಿದ ಮೈಸೂರು ಎ. ಚಂದನ್‌ಕುಮಾರ್ ಅವರ ವೇಣುವಾದನ ಕಛೇರಿ ರಸಿಕರಿಗೆ ರಸಾನುಭೂತಿಯನ್ನು ನೀಡಿತು. ಮಾಧುರ್ಯಭರಿತ ಗಾಯಕಿ ಶೈಲಿಯ ವಾದನ ಇವರದು. ಮೊದಲಿಗೆ ಷಣ್ಮುಖಪ್ರಿಯ ರಾಗ, ಆದಿತಾಳದ ಓಂಕಾರ ಪ್ರಣವ ಎಂಬ ವರ್ಣದಲ್ಲಿ ಕಿರು ಆಲಾಪನೆಯೊಂದಿಗೆ ತೊಡಗಿಸಿಕೊಂಡು ಆಕರ್ಷಕ ಸ್ವರ ಪ್ರಸ್ತಾರಗಳಿಂದ ಚುರುಕಾಗಿ ಪ್ರಸ್ತುತಿಗೊಳಿಸಿದರು. ನಾಟ ರಾಗದ, ದೀಕ್ಷಿತರ ಮಹಾಗಣಪತಿಂ ಕೃತಿಯನ್ನು ಮುಂದಿಟ್ಟುಕೊಂಡು ಮಹಾಕಾವ್ಯ ನಾಟಕಾದಿ ಪ್ರಿಯಂ ಎಂಬಲ್ಲಿ ನೀಡಿದ ಮನೋಜ್ಞವಾದ ಮನೋಧರ್ಮ ಸ್ವರ ವಿನ್ಯಾಸಗಳು ಚೇತೋಹಾರಿಯಾಗಿದ್ದು, ಕೃತಿ ಸುಂದರವಾಗಿ ಮೂಡಿಬಂತು. ಅನಂತರ ನುಡಿಸಿದ ತ್ಯಾಗರಾಜರ ಪಂಚರತ್ನದ ಸಾದಿಂಚನೇ ತುಸು ವೇಗವಾಗಿಯೇ ಮೂಡಿ ಬಂತು. ತ್ಯಾಗರಾಜ ಸ್ವಾಮಿಗಳ ಪೂರ್ವಿಕಲ್ಯಾಣಿ ರಾಗದ ಧ್ಯಾನಮು ಸಖರಾದ ಕೃತಿಗೆ ನೀಡಿದ ರಾಗಾಲಾಪನೆ ಅತ್ಯಂತ ಸೌಖ್ಯಪ್ರದವಾಗಿದ್ದು, ಕೃತಿಯ ಪ್ರಸ್ತುತಿಯಂತೂ ಉಲ್ಲಾಸಭರಿತವಾಗಿತ್ತು. ಪರಮಾತುಡು ಜೀವಾತುಡು ಎಂಬಲ್ಲಿ ಒದಗಿಸಿದ ನೆರವಲ್ ವಿವಿಧ ಭಾವಗಳನ್ನು ಸೃಷ್ಟಿಸಿತು. ಕಲ್ಪನಾ ಸ್ವರಗಳ ಸಂಯೋಜನೆ ಮತ್ತು ಚಮತ್ಕಾರಿಕ ವಿನ್ಯಾಸಗಳಿಂದ ಚಂದನ್ ಸಭಿಕರನ್ನು ಕುತೂಹಲಭರಿತರನ್ನಾಗಿಸಿದರು.
ನಿರವದಿ ಸುಖದಾ ನವರಸ ಕನ್ನಡ ರಾಗದಲ್ಲಿ ಲವಲವಿಕೆ ಯಿಂದ ಮೂಡಿ ಬಂತು. ರಂಜನಿ ರಾಗಮಾಲಿಕೆಯ ರಂಜಿನಿ, ಶ್ರೀರಂಜಿನಿ, ಮೇಘರಂಜಿನಿ ಮತ್ತು ಜನರಂಜಿನಿ ರಾಗಗಳಿಗೆ ಒಂದೊಂದಕ್ಕೂ ಪ್ರತ್ಯೇಕವಾಗಿ ಒದಗಿಸಿದ ಮನೋಧರ್ಮ ಸ್ವರಗಳು ಪ್ರೌಢಿಮೆಯಿಂದ ಕೂಡಿದ್ದು ಕಲಾವಿದರ ಪರಿಶ್ರಮ ವನ್ನು ಅನಾವರಣಗೊಳಿಸಿತು. ಕದನ ಕುತೂಹಲ ರಾಗ, ಆದಿ ತಾಳದ ರಘುವಂಷ ಸುಧಾಂಬುದಿಯಲ್ಲಿ ಚಂದನ್ ಕುಮಾರ್ ತೋರಿದ ಚಾಕಚಕ್ಯತೆಯ ಸ್ವರ ಪ್ರಯೋಗ ಆಕರ್ಷಕವಾಗಿತ್ತು.
ಅಂದಿನ ಕಾರ್ಯಕ್ರಮದಲ್ಲಿ ಕಲಾವಿದರು ಪ್ರಧಾನ ವಾಗಿ ಆಯ್ದುಕೊಂಡದ್ದು ತ್ಯಾಗರಾಜರ ಕಾಪಿ ರಾಗ ಚೌಕ ಕಾಲದ ಇಂಥ ಸೌಖ್ಯಮನೀಸೆ ಕೃತಿ. ಸ್ಥಾಯಿತ್ವದ ಭದ್ರ ನೆಲೆ ಗಟ್ಟಿನ ದೀರ್ಘ ರಾಗಾಲಾಪನೆಯ ಸಂಚಾರದ ಅಪೂರ್ವ ಪ್ರಯೋಗಗಳಿಂದ ಶ್ರೀಮಂತಗೊಳಿಸಿ ಕೃತಿಯನ್ನು ಅತ್ಯಂತ ಸುಂದರವಾಗಿ ನಿರೂಪಿಸಿದರು. ಉಪಾಂಗ ರಾಗವಾದ ಕಾಪಿಯಲ್ಲಿನ ಅನ್ಯಸ್ವರಗಳನ್ನೇ ಪ್ರಧಾನವಾಗಿಸಿ ಜೀವಸ್ವರ ಗಳಾಗಿ ಮನೋಧರ್ಮವನ್ನು ಶ್ರೇಷ್ಠ ರೀತಿಯಲ್ಲಿ ಮುಂದಿಟ್ಟ ಕಲಾವಿದರು ಸ್ವರ ಪ್ರಸ್ತಾರವನ್ನು ಉತ್ತುಂಗಕ್ಕೇರಿಸಿದರು. ಬೆಹಾಗ್ ರಾಗದ ಸಾರಮೈನ ಮಾಟಬೆಂತು ಎಂಬ ಸ್ವಾತಿ ತಿರುನಾಳ್ ಕೃತಿ ಮಧುರ ವಾಗಿತ್ತು. ಅಲೈಪಾಯುದೇ ಕಣ್ಣಾ ಕಾನಡ ರಾಗದಲ್ಲಿ ಲಯಬದ್ಧತೆಯೊಂದಿಗೆ ಮುದ ನೀಡಿತು. ಧನಶ್ರೀ ರಾಗದ ತಿಲ್ಲಾನ ಚುರುಕಾಗಿದ್ದು ಮಂಗಳದೊಂದಿಗೆ ಕಛೇರಿ ಮುಕ್ತಾಯಗೊಂಡಿತು. ವಯಲಿನ್‌ನಲ್ಲಿ ಸಾಥ್ ನೀಡಿದ ಯುವ ಕಲಾವಿದ ಬಿ. ವಿಠಲ್ ರಂಗನ್ ಕಛೇರಿ ಯುದ್ದಕ್ಕೂ ವಿದ್ವತ್‌ಪೂರ್ಣ ವಾದನದಿಂದ ಗಮನಸೆಳೆದರು. ಮೃದಂಗದಲ್ಲಿ ಎಚ್.ಎಸ್. ಸುಧೀಂದ್ರ ಅವರ ನಿರ್ವಹಣೆ ಕಾರ್ಯಕ್ರಮದ ಯಶಸ್ಸಿಗೆ ಪೂರಕವಾಗಿತ್ತು. ಘಟಂನಲ್ಲಿ ಬಿ.ಎಸ್. ರಾಮಾನುಜಂ ಸಹಕರಿಸಿದರು.
ಇದಕ್ಕೂ ಮುನ್ನ ಶ್ರೀ ಗೋಪಾಲಕೃಷ್ಣ ಸಂಗೀತ ವಿದ್ಯಾಲಯದ ಗುರು ವಿ| ಉಷಾ ಈಶ್ವರ ಭಟ್ಟರ ಮಾರ್ಗದರ್ಶನದಲ್ಲಿ ತಯಾರಾಗಿರುವ ಸಂಗೀತ ವಿದ್ಯಾರ್ಥಿಗಳು ಸಂಗೀತೋಪಾಸನೆ ನಡೆಸಿದರು.
ಕೃಷ್ಣ ರಂಜನಿ, ಕಾಸರಗೋಡು