Advertisement

ಮುರ್ಡೇಶ್ವರ: ಅದ್ದೂರಿಯಾಗಿ ನಡೆದ ನೂತನ ಬ್ರಹ್ಮರಥದ ಪುರಪ್ರವೇಶ

06:24 PM Jan 06, 2022 | Team Udayavani |

ಭಟ್ಕಳ: ಮುರ್ಡೇಶ್ವರ ದೇವರ ರಥೋತ್ಸವಕ್ಕೆ ಈ ಬಾರಿ ನೂತನ ಬ್ರಹ್ಮರಥವನ್ನು ಡಾ. ಆರ್. ಎನ್. ಶೆಟ್ಟಿಯವರ ಕುಟುಂಬಿಕರು ಕಟ್ಟಿಸಿದ್ದು ರಥದ ಪುರಪ್ರವೇಶ ಕಾರ್ಯಕ್ರಮ ಗುರುವಾರ ಸಂಜೆ ಅತ್ಯಂತ ಅದ್ದೂರಿಯಾಗಿ ನಡೆಯಿತು.

Advertisement

ರಥವು ಕೋಟೇಶ್ವರದಿಂದ ಆಗಮಿಸುತ್ತಿದ್ದಂತೆಯೇ ಮುರ್ಡೇಶ್ವರ ಮಹಾದ್ವಾರದಲ್ಲಿ ಸ್ವಾಗತಿಸಿ ಮಹತ್ಹೋಭಾರ ಶ್ರೀ ಮುರುಡೇಶ್ವರನ ಭಾವಚಿತ್ರವನ್ನು ಇರಿಸಿ ಆರತಿ ಬೆಳಗಿದ ಸುನಿಲ್ ಶೆಟ್ಟಿಯವರು ರಥವನ್ನು ಬರಮಾಡಿಕೊಂಡರು. ಧಾರ್ಮಿಕ ವಿಧಿ ವಿದಾನಗಳನ್ನು ದೇವಸ್ಥಾನದ ಮುಖ್ಯ ಅರ್ಚಕರಾದ ಜಯರಾಮ ಅಡಿಗಳ್ ನೆರವೇರಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅರ್ಚಕ ಶಿವರಾಮ ಅಡಿಗಳ್ ಮುಂತಾದವರು ಉಪಸ್ಥಿತರಿದ್ದರು.

ಬ್ರಹ್ಮರಥವನ್ನು ಮುರ್ಡೇಶ್ವರದ ರಾಷ್ಟ್ರೀಯ ಹೆದ್ದಾರಿಯಿಂದ ಊರ ನಾಗರಿಕರು ಸಾವಿರಾರು ಸಂಖ್ಯೆಯಲ್ಲಿ ಸೇರಿ ಅದ್ದೂರಿಯಾಗಿ ಬರಮಾಡಿಕೊಂಡಿದ್ದು, ಜನರ ಉತ್ಸಾಹ, ಬ್ರಹ್ಮರಥವನ್ನು ಸ್ವಾಗತಿಸುವ ತವಕ ಶ್ರೀ ದೇವರಲ್ಲಿ ಭಕ್ತರು ಇಟ್ಟಿರುವ ವಿಶ್ವಾಸಕ್ಕೆ ಸಾಕ್ಷಿಯಾಗಿತ್ತು.

ರಥವನ್ನು ಸ್ವಾಗತಿಸುವ ದಾರಿಯಲ್ಲಿ ಮೊದಲು ಮಹಿಳೆಯರಿಂದ ಪೂರ್ಣಕುಂಭ, ಮಹಿಳೆಯರ ಭಜನಾ ತಂಡ, ನಂತರ ವಿವಿಧ ವಾಧ್ಯಗಳು, ನಗಾರಿ, ವೇಷಭೂಷಣ, ಮಹಿಳೆಯರ ಚಂಡೆವಾದನ, ವಿವಿದ ಕಲಾ ತಂಡಗಳಿಂದ ವೈವಿದ್ಯಮಯ ನೃತ್ಯ ಸೇರಿದಂತೆ ಅದ್ದೂರಿಯಾಗಿ ಜಾತ್ರೆಯ ಮಾದರಿಯಲ್ಲಿ ನಡೆದಿದ್ದು ಭಾರೀ ಮೆಚ್ಚುಗೆಗೆ ಪಾತ್ರವಾಯಿತು. ಎಲ್ಲಾ ಕಡೆಗಳಿಂದಲೂ ಭಕ್ತರು ಆಗಮಿಸಿದ್ದರು. ಅತ್ಯಂತ ಶಾಂತವಾಗಿ ನಡೆದ ಮೆರವಣಿಗೆಯಲ್ಲಿ ಎಲ್ಲ ನಿಯಮಗಳನ್ನು ಪಾಲಿಸಲಾಗಿದ್ದು ಶಿಸ್ತುಬದ್ಧ ಕಾರ್ಯಕ್ರಮಕ್ಕೆ ಇದು ಸಾಕ್ಷಿಯಾಯಿತು.

Advertisement

ಬ್ರಹ್ಮರಥವನ್ನು ಹತ್ತ ಲಾರಿಯು ಮಹಾದ್ವಾರವನ್ನು ಪ್ರವೇಶಿಸುತ್ತಲೇ ಭಕ್ತರ ಹರ ಹರ ಮಹಾದೇವ ಘೋಷಣೆ ಮುಗಿಲು ಮುಟ್ಟಿತ್ತು. ನಂತರ ಓಲಗ ಮಂಟಪದ ತನಕವೂ ಕೂಡಾ ರಥವನ್ನು ಹೊತ್ತ ವಾಹನ ನಿಧಾನವಾಗಿ ಸಾಗಿದ್ದು, ಸ್ವಾಗತ ಪೂಜೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಉತ್ತರ ಕನ್ನಡ ಜಿಲ್ಲೆಯ ಪಂಚ ಕ್ಷೇತ್ರಗಳಲ್ಲಿ ಒಂದಾದ ಮುರ್ಡೆಶ್ವರ ದೇವರ ರಥವು ಅತ್ಯಂತ ಹಳೆಯದಾಗಿದ್ದು ಸುಮಾರು ೪೦೦ ವರ್ಷಗಳಷ್ಟು ಹಿಂದಿನದು ಎನ್ನಲಾಗಿದೆ. ಈ ಹಿಂದೆ ರಥೋತ್ಸವದ ವೇಳೆಯಲ್ಲಿ ಡಾ. ಆರ್. ಎನ್. ಶೆಟ್ಟಿಯವರು ನೂತನ ರಥದ ನಿರ್ಮಾಣಕ್ಕೆ ಸಂಕಲ್ಪ ಮಾಡಿಕೊಂಡಿದ್ದು ಅದನ್ನು ಅವರ ಪುತ್ರ ಸುನಿಲ್ ಶೆಟ್ಟಿ ಹಾಗೂ ಕುಟುಂಬಿಕರು ಈಡೇರಿಸಿದ್ದಾರೆ.

ನೂತನ ಬ್ರಹ್ಮರಥವನ್ನು ಕೋಟೇಶ್ವರದ ರಥ ಶಿಲ್ಪಿ ಜಕಣಾಚಾರಿ ಪ್ರಶಸ್ತಿ ಪುರಸ್ಕೃತ ಲಕ್ಷ್ಮೀನಾರಾಯಣ ಆಚಾರ್ಯ ಮತ್ತು ರಾಜಗೋಪಾಲ ಆಚಾರ್ಯ ಇವರು ಶಾಸ್ತ್ರ ಸಮ್ಮತವಾಗಿ ನಿರ್ಮಾಣ ಮಾಡಿದ್ದು ಬಹಳ ಸುಂದರವಾಗಿ ಕೆತ್ತನೆ ಮೂಡಿ ಬಂದಿದೆ. ರಥಕ್ಕೆ ಜಿಲ್ಲೆಯ ಧಾರ್ಮಿಕ ಹಿನ್ನೆಲೆಯನ್ನು ಶಿಲ್ಪವಾಗಿ ಬಳಸಿದ್ದು ವಿಶೇಷವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next