Advertisement

Murdeshwar ; ದೇವಸ್ಥಾನಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ

08:41 PM Dec 14, 2023 | Team Udayavani |

ಭಟ್ಕಳ: ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮುರುಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಮುರುಡೇಶ್ವರನಿಗೆ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.

Advertisement

2021 ರಲ್ಲಿ ಒಮ್ಮೆ ಆಗಮಿಸಿ ಶ್ರೀ ಮುರುಡೇಶ್ವರನ ದರ್ಶನ ಮಾಡಿದ್ದ ರಾಜ್ಯಪಾಲರು ಎರಡನೇ ಬಾರಿಗೆ ಮುರುಡೇಶ್ವರಕ್ಕೆ ಭೇಟಿ ನೀಡಿದ್ದಾರೆ. ದೇವಸ್ಥಾನಕ್ಕೆ ಆಗಮಿಸುತ್ತಿದ್ದಂತೆಯೇ ದೇವಸ್ಥಾನದ ಅಡಳಿತ ಮಂಡಳಿಯ ವತಿಯಿಂದ ಪೂರ್ಣಕುಂಭ ಸ್ವಾಗತ ಕೋರಲಾಯಿತು.
ನಂತರ ದೇವರ ದರ್ಶನ ಪಡೆದ ಅವರಿಗೆ ಪ್ರಧಾನ ಅರ್ಚಕರಾದ ಜಯರಾಮ ಅಡಿಗಳ್ ಹಾಗೂ ಶಿವರಾಮ ಅಡಿಗಳ್ ಅವರು ಎಕಾದಶ ರುದ್ರಾಭಿಷೇಕ ಮಾಡಿ ಪ್ರಸಾದ ನೀಡಿದರು.

ಇದೇ ಸಂದರ್ಭದಲ್ಲಿ ರಾಜ್ಯಪಾಲರನ್ನು ದೇವಸ್ಥಾನದ ಆಡಳಿತ ಕಮಿಟಿಯ ವತಿಯಿಂದ ಆಡಳಿತ ಧರ್ಮದರ್ಶಿ ಸತೀಶ ಶೆಟ್ಟಿ ಅವರು ದೇವರ ಪ್ರಸಾದದ ರೂಪದಲ್ಲಿ ಶಾಲು ಹೊದಿಸಿ ಗೌರವಿಸಿ ನಂತರ ಶ್ರೀ ಮುರುಡೇಶ್ವರನ ಫೋಟೋ ನೀಡಿದರು.

ನಂತರ ಗಣ್ಯರ ಸಂದರ್ಶನ ಪುಸ್ತಕದಲ್ಲಿ ತಮ್ಮ ಹಸ್ತಾಕ್ಷರದಲ್ಲಿ ಬರೆದ ರಾಜ್ಯಪಾಲರು “ಸರ್ವೆ ಜನ ಸುಖಿನೋ ಭವ” ಎಂದು ಒಂದೇ ವಾಕ್ಯದಲ್ಲಿ ಬರೆದಿದ್ದಾರೆ. ಮುರುಡೇಶ್ವರದ ಸೌಂದರ್ಯದ ಕುರಿತೂ ಮುಚ್ಚುಗೆ ವ್ಯಕ್ತಪಡಿಸಿದ ಅವರು ದೇವಸ್ಥಾನ, ಸುಂದರ ಕಡಲತೀರ, ಪರಿಸರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಸಹಾಯಕ ಆಯುಕ್ತೆ ಡಾ. ನಯನಾ ಎನ್., ತಹಶೀಲ್ದಾರ ತಿಪ್ಪೇಸ್ವಾಮಿ, ದೇವಸ್ಥಾನದ ವ್ಯವಸ್ಥಾಪಕ ಮಂಜುನಾಥ ಶೆಟ್ಟಿ, ಪ್ರಮುಖರಾದ ನಾಗರಾಜ ಶೆಟ್ಟಿ ಮುಂತಾದವರಿದ್ದರು. ರಾಜ್ಯಪಾಲರು ದೇವಸ್ಥಾನಕ್ಕೆ ಆಗಮಿಸಿದ ಸಂದರ್ಭದಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಇರಲಿಲ್ಲ. ರಾಜ್ಯಪಾಲರ ಭೇಟಿ ಹಿನ್ನೆಲೆಯಲ್ಲಿ ಮುರುಡೇಶ್ವರದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next